ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ, ಜಿಎಸ್ಟಿಯಲ್ಲಿ ಕೆಲವು ದರಗಳ ಪರಿಷ್ಕರಣೆ
ನವದೆಹಲಿ, ಜೂ.10-ಕೆಲವು ಸರಕುಗಳು ಮತ್ತು ಸೇವೆಗಳ ಮೇಲಿನ ತೆರಿಗೆಗಳನ್ನು ಇಳಿಸುವಂತೆ ವರ್ತಕರು ಮತ್ತು ಉದ್ಯಮ ವಲಯಗಳ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಎಸ್ಟಿಯಲ್ಲಿ ದರ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ದೆಹಲಿಯಲ್ಲಿ ಭಾನುವಾರ ನಡೆಯಲಿರುವ ಸಭೆ ನಂತರ ಅಧಿಕೃತ ನಿರ್ಧಾರ ಪ್ರಕಟವಾಗಲಿದೆ. ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಮಂಡಳಿ ಸಭೆಯಲ್ಲಿ ತೆರಿಗೆ ದರಗಳ ಮರು ಪರಿಶೀಲನೆ ಮತ್ತು ಜಿಎಸ್ಟಿ ಕರಡು ನಿಯಮಗಳಿಗೆ ಮಾಡಲಾಗಿರುವ ತಿದ್ದುಪಡಿಗೆ ಸಮ್ಮತಿ ನೀಡಲಾಗುವುದು ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.
ಜನರಿಗೆ ಅಗತ್ಯವಾದ ವಸ್ತುಗಳೂ ಸೇರಿದಂತೆ ವಿವಿಧ ಸೇವೆಗಳ ಮೇಲೆ ಜಿಎಸ್ಟಿಯಲ್ಲಿ ಹೆಚ್ಚಿಸಲಾಗಿರುವ ತೆರಿಗೆ ಬಗ್ಗೆ ದೇಶಾದ್ಯಂತ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಮಧ್ಯಮ ಗಾತ್ರದ ಹೈಬ್ರಿಡ್ ಕಾರುಗಳಿಗೆ ಶೇ.43ರಷ್ಟು ತೆರಿಗೆ ವಿಧಿಸಲಾಗಿದೆ. ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಈ ವಾಹನಗಳ ತೆರಿಗೆ ಶೇ.30.3ರಷ್ಟಿದೆ. ಈ ತೆರಿಗೆಯನ್ನು ಇಳಿಸಬೇಕೆಂಬ ಬೇಡಿಕೆ ಇದೆ. ಮಾನಿಟರ್ ಪ್ರಿಂಟರ್ಗಳಂಥ ವಸ್ತುಗಳಿಗೆ ಶೇ.18ರಷ್ಟು ಏಕರೂಪದ ತೆರಿಗೆ ವಿಧಿಸಬೇಕು ಎಂಬುದು ಮಾಹಿತಿ ತಂತ್ರಜ್ಞಾನ ವಲಯದ ಬೇಡಿಕೆಯಾಗಿದೆ. ಇದೇ ರೀತಿ ಹಲವು ವಸ್ತುಗಳ ಮೇಲಿನ ತೆರಿಗೆ ಪರಿಷ್ಕರಣೆಯಾಗಬೇಕೆಂಬ ಸಾಕಷ್ಟು ಬೇಡಿಕೆಗಳೂ ವ್ಯಕ್ತವಾಗಿವೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS