ಒತ್ತೆಯಾಳು ಮೃತಪಟ್ಟರೆ ಅಪಹರಣಕಾರರಿಗೆ ಗಲ್ಲು ಶಿಕ್ಷೆ..!

ಈ ಸುದ್ದಿಯನ್ನು ಶೇರ್ ಮಾಡಿ

Plane-c01

ನವದೆಹಲಿ, ಜು.7-ವಿಮಾನ ಅಪಹರಣ ಮತ್ತು ಆನಂತರದ ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಅಧಿಸೂಚನೆ ಮೂಲಕ ಕಠಿಣ ಕಾನೂನು ಜಾರಿಗೊಳಿಸಿದೆ.  ವಿಮಾನ ಅಪಹರಣಕ್ಕೆ ಒಳಗಾದಾಗ ಯಾವುದೇ ವ್ಯಕ್ತಿ ಮೃತಪಟ್ಟಲ್ಲಿ ಅಪಹರಣಕಾರರಿಗೆ ಮರಣ ದಂಡನೆ ವಿಧಿಸುವ ಶಿಕ್ಷೆಯು ಹೊಸ ಅಪಹರಣ ಪ್ರತಿರೋಧ ಕಾನೂನು ಒಳಗೊಂಡಿದೆ.  ಈ ಸಂಬಂಧ 1982ರಲ್ಲಿ ಜಾರಿಯಲ್ಲಿದ್ದ ಹಳೆ ಕಾನೂನಿಗೆ ಸಾಕಷ್ಟು ಮಾರ್ಪಾಡುಗಳನ್ನು ಮಾಡಿ ವಿಮಾನ ಅಪಹರಣ ಪ್ರತಿರೋಧ ಕಾಯ್ದೆ-2016 ಎಂಬ ಅಧಿನಿಯಮ ಜಾರಿಗೊಳಿಸಲಾಗಿದೆ.

ಹೊಸ ಕಾಯ್ದೆ ಅಡಿ ವಿಮಾನ ಅಪಹರಣದ ವೇಳೆ ಅಥವಾ ನಂತರ ಒತ್ತೆಯಾಳುಗಳು ಅಂದರೆ ವಿಮಾನ ಸಿಬ್ಬಂದಿ, ಪ್ರಯಾಣಿಕರು ಮತ್ತು ಭದ್ರತಾ ಯೋಧರು ಮೃತಪಟ್ಟರೆ, ತಪ್ಪಿತಸ್ಥರನ್ನು (ವಿಮಾನ ಅಪಹರಣಕಾರರು) ನೇಣುಗಂಬಕ್ಕೇರಿಸುವ ಕಾನೂನು ನೂತನ ಅಧಿನಿಯಮದಲ್ಲಿ ಸೇರ್ಪಡೆಯಾಗಿದೆ. ವಿಮಾನದಲ್ಲಿನ ಭದ್ರತಾ ಸಿಬ್ಬಂದಿ ಅಥವಾ ರಕ್ಷಣೆಗೆ ಧಾವಿಸುವ ವಿಮಾನ ನಿಲ್ದಾಣ ಸಿಬ್ಬಂದಿಯ ಸಂಭವನೀಯ ಸಾವು ಸೇರಿದಂತೆ ಈ ವ್ಯಾಪ್ತಿಗೆ ಬರುವ ಇತರರನ್ನು ನೂತನ ಕಾನೂನಿನಲ್ಲಿ ವ್ಯಾಖ್ಯಾನಿಸಲಾಗಿದೆ. ಅಪಹರಣ ಬೆದರಿಕೆ, ಯತ್ನಗಳು ಅಥವಾ ಕೃತ್ಯ ಎಸಗಲು ಪ್ರಚೋದನೆ ಇವುಗಳ ಅರ್ಥಗಳನ್ನು ವಿಸ್ತರಿಸಿ ಮರು ವ್ಯಾಖ್ಯಾನ ಮಾಡಲಾಗಿದೆ.

ವಿಮಾನ ಅಪಹರಣದ ಇತರ ಪ್ರಕರಣಗಳಲ್ಲಿ, ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ಮತ್ತು ಜುಲ್ಮಾನೆ ವಿಧಿಸಲಾಗುತ್ತದೆ. ಅಲ್ಲದೇ ಆತ/ಆಕೆಯ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ. ಜುಲೈ 5ರಂದು ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದ್ದು, ಅಧಿಕೃತವಾಗಿ ಹೊಸ ಕಾನೂನು ಜಾರಿಗೆ ಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin