ಒಲಿದ ಹೃದಯಗಳ ತುಂತುರು ಮಳೆಯೇ ಪ್ರೀತಿ

ಈ ಸುದ್ದಿಯನ್ನು ಶೇರ್ ಮಾಡಿ

6

ಪ್ರೀತಿ, ಪ್ರೇಮ ಇವು ತೋರ್ಪಡಿಕೆಯ, ಆಚರಿಸುವಂತಹ ದಿನಗಳಲ್ಲ. ಪಾಶ್ಚಾತ್ಯ ಸಂಸ್ಕೃತಿ ಯಿಂದ ಬಂದದ್ದು ಈ ಪ್ರೇಮಿಗಳ ದಿನಾಚರಣೆ. ಭಾರತೀಯ ಸಂಸ್ಕೃತಿ ಯಲ್ಲಿ ಪ್ರೇಮಿಗಳ ದಿನಾಚರಣೆಗೆ ಮಹತ್ವ ನೀಡುವುದಿಲ್ಲ. ಏಕೆಂದರೆ ಪ್ರೀತಿ, ಪ್ರೇಮ ಜೀವನದಲ್ಲಿ ಅನುಭವಿಸುವ ಅಂತಹವುಗಳು. ಪ್ರೀತಿ ಎಂದರೆ ಬರೀ ಕಾಮುಕತೆಯಲ್ಲ, ಅರಿತ ಎರಡು ಹೃದಯಗಳು ಸುರಿಸುವ ತುಂತುರು ಮಳೆಯೇ ಪ್ರೀತಿ. ಪ್ರೀತಿ ಯಾವಾಗ ಹುಟ್ಟುವುದೋ ಎಂದು ಕರಾರುವಕ್ಕಾಗಿ ಹೇಳಲು ಬರುವುದಿಲ್ಲ. ಪ್ರೀತಿ ಉಸಿರಿರುವ ತನಕ ಎದೆ ಬಡಿತದಲ್ಲಿ ಉಳಿದು, ಅಳಿದ ಮೇಲೂ ಅಜರಾಮರ ಆಗಿರಬೇಕು.ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಪ್ರೀತಿ ಇಲ್ಲದ ಮೇಲೆ ಹೂವು ಹೇಗೆ ಅರಳೀತು? ಎಂದಿದ್ದಾರೆ. ತಂದೆ-ತಾಯಿ, ಗುರು-ಶಿಷ್ಯ, ಅಣ್ಣ-ತಂಗಿ, ಗೆಳೆಯ-ಗೆಳತಿ… ಹೀಗೆ ಪ್ರೀತಿ ನಾನಾ ವಿಧದಲ್ಲಿದೆ.

ಪ್ರೀತಿ ನಿತ್ಯನೂತನವಾದುದು. ಇದು ಆಡಂಬರದ ವಸ್ತುವಲ್ಲ. ಸೂಕ್ಮವಾದ ಮನಸ್ಸುಗಳನ್ನು ಬೆಸೆಯುವುದು. ಸದಾ ಅನುರಕ್ತವಾಗಿರುವಂತೆ ಇರುವುದೇ ನಿಜವಾದ ಪ್ರೀತಿ. ಪ್ರೀತಿಗೆ ಅಂತಸ್ತಿಲ್ಲ. ವರಕವಿ ಬೇಂದ್ರೆ ಒಂದೆಡೆ ಆತ ಬಡವ ನಾನು ಬಡವಿ ಒಲವೆ ನಮ್ಮ ಬದುಕು ಬಳಸಿಕೊಂಡವುದನೆ ನಾವು ಅದಕು ಇದಕು ಎದಕು ಎಂದಿದ್ದಾರೆ. ಬಡತನದ ಬೇಗೆಯಲ್ಲೂ ಪ್ರೀತಿಗೆ ಬರವಿಲ್ಲ. ಕ್ರಿ.ಶ. 269 ಫೆಬ್ರವರಿ 14, ವ್ಯಾಲೆಂಟೈನ್ಸ್ ಯುವ ಪ್ರೇಮಿಗಳ ಪರವಾಗಿ ರೋಮ್ ದೊರೆ ಎರಡನೇ ಕ್ಲಾಡಿಯಸ್ ಹೋರಾಟ ಮಾಡಿದ್ದಕ್ಕಾಗಿ ಬಂಧನಕ್ಕೆ ಒಳಗಾಗಿ ಪ್ರಾಣ ಬಿಡುವನು. ಅವನ ಸ್ಮ್ಮರಣೆಗಾಗಿ ಕ್ರಿ.ಶ. 496ರಲ್ಲಿ ಪೋಪ್ ಜೆಲೇಸಿಯಸ್ ಆ ದಿನವನ್ನು ವ್ಯಾಲೆಂಟೈನ್ಸ್ ಡೇ ಎಂದು ಘೋಷಣೆ ಮಾಡುವನು. ಆದ್ದರಿಂದ ಫೆಬ್ರವರಿ 14 ಯುವ ಪ್ರೇಮಿಗಳ ದಿನವನ್ನಾಗಿ ಆಚರಿಸಿಕೊಂಡು ಬರಲಾಗಿದೆ.

ಪ್ರೀತಿಗೆ ಜಗತ್ತು ಗೆಲ್ಲುವ ಶಕ್ತಿಯಿದೆ. ಪ್ರೀತಿ ಕೇವಲ ಸೌಂದರ್ಯಕ್ಕೆ ಮೀಸಲಾಗಿಲ್ಲ. ಸುಮಧುರ ಭಾವನೆ, ಅರಿವಿನ ಮನಸ್ಸಿನಲ್ಲೂ ಪ್ರೀತಿ ತುಂಬಿದೆ. ಹೃದಯದ ಅಂತರಾಳದಿಂದ ಹೊರಬರುವುದೇ ನಿಜವಾದ ಪ್ರೀತಿ. ಪ್ರೇಮಿಗಳಿಗೆ ವ್ಯಾಲೆಂಟೈನ್ಸ್ ಡೇ ಮಾತ್ರ ಮಹತ್ವದ ದಿನವಲ್ಲ. ಪ್ರೀತಿಯಿಂದ ಒಡಗೂಡಿದ ಪ್ರತಿಕ್ಷಣವೂ ಸಂತಸ ತರುವುದು. ಈ ದಿನ ಕೇವಲ ನೆಪ ಮಾತ್ರ. ಇತ್ತೀಚೆಗೆ ಪವಿತ್ರವಾದ ಪ್ರೀತಿ ಮೊಬೈಲ್ ಹಾವಳಿಯಿಂದ ಅರ್ಥ ಕಳೆದುಕೊಳ್ಳುತ್ತಿದೆ.ಹರ್ಷ, ಸಂತೋಷಕ್ಕಿಂತ ವ್ಯವಹಾರಿ ಮನೋಭಾವಕ್ಕಿಳಿದಿರುವುದು ದುರಂತ ಎನಿಸಿದೆ. ಪ್ರೇಮಿಗಳ ಪಿಸುಮಾತು, ಕಸುವಾಗದೆ ಹುಸಿಯಾಗಿ ಹೋಗುತ್ತಿರುವುದು ಇಂದಿನ ದಿನಗಳಲ್ಲಿ ಹೆಚ್ಚಾಗಿದೆ. ಮನಸ್ಸು ಹೃದಯಗಳ ಸಾಮ್ರಾಜ್ಯದಲ್ಲಿ ಸ್ವಚ್ಛಂದವಾಗಿರುವುದು ನಿಜವಾದ ಪ್ರೀತಿ. ಜಗತ್ತಿನ ಎಲ್ಲಾ ಜೀವರಾಶಿಗಳು ದ್ವೇಷವನ್ನು ಮರೆತು ಪ್ರೀತಿಯಿಂದ ಬದುಕಿದಾಗ ಪ್ರೀತಿಗೊಂದು ಅರ್ಥ ಸಿಗುತ್ತದೆ.

ಜಾನಪದ ಸಾಹಿತ್ಯ ಹಾಗೂ ಕವಿಗಳು ಪ್ರೀತಿಯನ್ನು ಕುರಿತು ಅರ್ಥೈಸಿದ್ದಾರೆ. ಅಮರ ಪ್ರೇಮಿಗಳಾದ ರೋಮಿಯೋ-ಜ್ಯೂಲಿಯಟ್, ಲೈಲಾ-ಮಜ್ನೂ, ಸಲೀಂ-ಅನಾರ್ಕಲಿ, ದೇವದಾಸ್-ಪಾರ್ವತಿ, ನಳ-ದಮಯಂತಿ, ದುಷ್ಯಂತ- ಶಕುಂತಲೆ… ಹೀಗೆ ಇವರೆಲ್ಲಾ ಪ್ರೀತಿಗಾಗಿ ಬಾಳಿ ಬದುಕಿದವರು. ಅವರು ಈಗಿಲ್ಲದಿದ್ದರೂ ಅವರ ಪ್ರೀತಿ ಯುವಕರಿಗೆ ಮಾರ್ಗದರ್ಶಿಯಾಗಿದೆ. ನಿಜವಾದ ಪ್ರೇಮಿಗಳಿಗೆ ದೇಶ-ಜಾತಿ-ಧರ್ಮಗಳ ಪರಿಗಣನೆ ಇರುವುದಿಲ್ಲ.ಗ್ರೀಟಿಂಗ್ಸ್ ಕಾರ್ಡ್, ಪ್ರೀತಿಯನ್ನು ತಿಳಿಸುವ ತವಕ, ಹೊಸ ಡ್ರೆಸ್… ಹೀಗೆ ಈ ಪ್ರೇಮದಿನದ ಯುವ ಪ್ರೇಮಿಗಳಲ್ಲಿ ಆತುರ-ಕಾತುರತೆ ಜಾಸ್ತಿ. ಎರಡು ಕುಟುಂಬಗಳನ್ನು ಒಡೆಯುವ ಬದಲು ಒಂದಾಗಿಸುವುದೇ ಪ್ರೀತಿ ಎಂದು ಯೌವ್ವನದ ಭರದಲ್ಲಿರುವವರು ತಿಳಯಬೇಕಿದೆ.  ಮೆಚ್ಚಿದ ಪ್ರೇಮಿಗಾಗಿ ಹೆತ್ತವರಿಗೆ ಮನ ನೋಯಿಸಬಾರದು. ಗೌರವ, ಮಮತೆ, ಅನುರಾಗ ಎಂಬ ವಿಶ್ವಾಸದ ತಳಹದಿಯ ಮೇಲೆ ನಿಂತಿರುವ ಈ ಪ್ರೀತಿ ಮತ್ತೊಬ್ಬರಿಗೆ ಹೊರೆಯಾಗ ದಂತಿರಬೇಕು. ಕಲ್ಪನಾ ಲೋಕಕ್ಕೆ ಹೋಗುವ ಮುನ್ನ ಪ್ರಸ್ತುತ ಕೌಟುಂಬಿಕ ಹಿನ್ನೆಲೆಯನ್ನು ಅರಿಯುವುದು ಮುಖ್ಯವಾಗಿದೆ. ಸನಾತನ ಧರ್ಮ, ಸಂಸ್ಸ್ರತಿಯನ್ನು ಒಳಗೊಂಡ ನಾವೆಲ್ಲಾ ಯೋಚಿಸಿ ಮುನ್ನಡೆಯಬೇಕಿದೆ.

ಪಾವಿತ್ರ್ಯದ ಪ್ರೀತಿಗೆ ಎಂದಿಗೂ ಜಯವಿದೆ. ಅರಿತು ಬೆರೆತು ಬಾಳುವ ಜೀವನಕ್ಕೆ ಪ್ರೀತಿ ಒಂದು ಆರಂಭದ ಚುಂಬಕವಾಗಿದೆ. ಖ್ಯಾತ ಹನಿಗವಿ ಎಚ್. ಡುಂಡಿರಾಜ್, ಕನ್ನಡ ಶಾಯಿರಿ ಕವಿಗಳಾದ ಭಿಕ್ಷಾವರ್ತಿಮಠ, ಇಟಗಿ ಈರಣ್ಣ ಅವರ ಪ್ರೇಮದ ಹನಿಗಳು ಯವಕರಿಗೆ ಸ್ಫೂರ್ತಿ ಎನ್ನಬಹುದು.ಪ್ರೀತಿ ಎಂದರೆ ಕೇವಲ ಸಿನಿಮಾ, ಪಾರ್ಕ್‍ಗಳಲ್ಲಿ ಸುತ್ತಾಡುವುದಷ್ಟೇ ಅಲ್ಲ. ಅದರ ಬದಲಿಗೆ ಸ್ವೇಚ್ಛಾಚಾರವನ್ನು ಬಿಟ್ಟು ಭವಿಷ್ಯದ ಬಗ್ಗೆ ಯೋಚಿಸಬೇಕು. ಯೌವ್ವನದ ಹುಮ್ಮಸ್ಸಿನಲ್ಲಿ ಕೇವಲ ಗಾಳಿಪಟವಾಗಿ ಏರಿ ಇಳಿಯುವುದಕ್ಕಿಂತ ಜೀವನದ ಒಂದು ಅಮೂಲ್ಯ ಪುಟವಾದಾಗ ಪ್ರೀತಿಗೆ ಮಹತ್ವ ಸಿಗುವುದು. ಜೀವ ಉಳಿಸುವ, ಬಾಳನ್ನು ಬೆಳಗಿಸುವಲ್ಲಿ ಪ್ರೀತಿಯ ಸಾರ್ಥಕತೆ ಇದೆಯೇ ವಿನಾಃ ದುರಂತವಲ್ಲ ಎಂಬುದನ್ನು ತಿಳಿಯಬೇಕಿದೆ.  ಸಾಹಸಸಿಂಹ ಡಾ. ವಿಷ್ಣು ಹೇಳುವಂತೆ ಯುಗ ಯುಗಗಳೇ ಸಾಗಲಿ ಗಿರಿ ಗಗನವೇ ಬೀಳಲಿ ನದಿ ಸಾಗರ ಕೆರಳಲಿ ನಮ್ಮ ಪ್ರೀತಿ ಶಾಶ್ವತ ಎಂದಿದ್ದಾರೆ.

ಜೀವನದಲ್ಲಿನ ಈ ಪ್ರೀತಿ ಕರಿಮಣೆಯಲ್ಲಿ ಬಂಗಾರವನ್ನು ಪೋಣಿಸಿದಂತೆ. ತಪಸ್ಸಿನಲ್ಲಿ ಫಲವಿದ್ದಂತೆ ಪ್ರೇಮದಲ್ಲಿ ಬಲವಿರಬೇಕು. ಸಂಸಾರದೊಂದಿಗೆ ಪ್ರತಿಫಲ ಕಾಣಬೇಕು.  ಫೆಬ್ರವರಿ 14 ಬಂತೆಂದರೆ ಯವಕ-ಯುವತಿಯರಲ್ಲಿ ಏನೇನೋ ಬಯಕೆಗಳು. ಈ ಹರೆಯದ ಪ್ರೀತಿಯನ್ನು ಅರ್ಥ ಮಾಡಿಕೊಂಡಷ್ಟು ಹೊಳೆಯುವುದು ಉಪಾಚಿು. ಇಲ್ಲದಿದ್ದರೆ ಬರೀ ಅಪಾಯ ಅಲ್ವಾ. ದೇಹಕ್ಕೆ ಸಾವುಂಟು, ಪ್ರೀತಿಗೆ ಸಾವಿಲ್ಲ ಎಂದು ಷೇಕ್ಸ್‍ಪಿಯರ್ ಹೇಳಿದ್ದಾನೆ. ಅಂತೂ ಈ ಶುಭದಿನ ಸರ್ವರಿಗೂ ಒಳಿತನ್ನೇ ತರಲಿ, ಮುಂದಿನ ಪೀಳಿಗೆಗೆ ಪ್ರೀತಿಯ ಪಾವಿತ್ರ್ಯತೆ ತಿಳಿಯಲಿ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin