ಒಳಜಗಳ ಬಿಟ್ಟು ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಿ : ಬಿಜೆಪಿ ನಾಯಕರಿಗೆ ವರಿಷ್ಠರ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

BJP-Leaders

ನವದೆಹಲಿ, ಆ.23- ಯಾವುದೇ ಕಾರಣಕ್ಕೂ ಪಕ್ಷದೊಳಗೆ ಭಿನ್ನಮತೀಯ ಚಟುವಟಿಕೆಗಳಿಗೆ ಆಸ್ಪದವಿಲ್ಲದಂತೆ ಪಕ್ಷ ಸಂಘಟನೆಗೆ ಒತ್ತು ನೀಡಿ ಅಧಿಕಾರಕ್ಕೆ ಬರಲು ಎಲ್ಲ ನಾಯಕರು ಮುಂದಾಗಬೇಕೆಂದು ಕೇಂದ್ರ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ನವದೆಹಲಿಯಲ್ಲಿ ಇಂದು ನಡೆದ ಎಲ್ಲ ರಾಜ್ಯಗಳ ಕೋರ್ ಕಮಿಟಿ ಸಭೆಯಲ್ಲಿ ಕೇಂದ್ರ ನಾಯಕರು ಈ ನಿರ್ದೇಶನ ನೀಡಿರುವುದಾಗಿ ತಿಳಿದುಬಂದಿದೆ.  ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ಲಾಲ್, ಸಂಘಟನಾ ಕಾರ್ಯದರ್ಶಿ ರಾಮ್ಮಾಧವ್, ಅರುಣ್ಸಿಂಗ್ ಸೇರಿದಂತೆ ಎಲ್ಲ ರಾಜ್ಯಗಳ ಕೋರ್ ಕಮಿಟಿ ಸದಸ್ಯರು ಪಾಲ್ಗೊಂಡಿದ್ದರು.

ಕರ್ನಾಟಕದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್ಕುಮಾರ್, ಡಿ.ವಿ.ಸದಾನಂದಗೌಡ, ಕೋರ್ ಕಮಿಟಿ ಸದಸ್ಯರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಸಂತೋಷ್, ಸಿ.ಎಂ.ಉದಾಸಿ, ನಳಿನ್ಕುಮಾರ್ ಕಟಿಲ್ ಮತ್ತಿತರರು ಭಾಗವಹಿಸಿದ್ದರು.  ಕೋರ್ ಕಮಿಟಿ ಸಭೆಯಲ್ಲಿ ಪ್ರಮುಖವಾಗಿ ಕರ್ನಾಟಕದ ವಿಷಯವನ್ನು ಪ್ರತ್ಯೇಕವಾಗಿ ಚರ್ಚೆ ಮಾಡಿಲ್ಲವಾದರೂ ವರಿಷ್ಠರು ಎಲ್ಲ ರಾಜ್ಯಗಳ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ರಾಜ್ಯ ನಾಯಕರಿಗೂ ಗೀತೋಪದೇಶ ಮಾಡಿದ್ದಾರೆ.
ಮುಂದಿನ ವರ್ಷ ಉತ್ತರ ಪ್ರದೇಶ, ಪಂಜಾಬ್, ಗೋವಾ ಮತ್ತು ಗುಜರಾತ್ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ದೇಶದಲ್ಲಿ ನಕಲಿ ಗೋರಕ್ಷಕರ ಹಾವಳಿ, ದಲಿತರ ಮೇಲಿನ ದೌರ್ಜನ್ಯ ಸೇರಿದಂತೆ ಮತ್ತಿತರ ಘಟನೆಗಳು ಸರ್ಕಾರಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿವೆ.

ನಮ್ಮದೇ ಪಕ್ಷ ಆಡಳಿತವಿರುವ ಪಂಜಾಬ್, ಗೋವಾ ಹಾಗೂ ಗುಜರಾತ್ ಉಳಿಸಿಕೊಳ್ಳುವುದು ನಮಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಉತ್ತರ ಪ್ರದೇಶದಲ್ಲೂ ಇಂಥದ್ದೇ ಕ್ಲಿಷ್ಟ ಪರಿಸ್ಥಿತಿ ಎದುರಾಗಿದೆ. ಇಂತಹ ವೇಳೆ ನಾವೆಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆಗೆ ಮುಂದಾಗಬೇಕೆಂದು ಹಿರಿಯರು ಸೂಚಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.  ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ್ದಾರೆ. ಸರ್ಕಾರ ಅನೇಕ ಸಾಧನೆಗಳನ್ನು ಮಾಡಿದ್ದರೂ ಕೆಲವು ಕ್ಷುಲ್ಲಕ ಘಟನೆಗಳನ್ನು ವೈಭವೀಕರಿಸಿ ಸರ್ಕಾರದ ಸಾಧನೆ ಜನರಿಗೆ ತಿಳಿಯದಂತಾಗಿದೆ.  ಪಕ್ಷದಲ್ಲಿ ಯಾರೊಬ್ಬರೂ ದೊಡ್ಡವರಲ್ಲ, ಎಲ್ಲರೂ ತಮ್ಮ ತಮ್ಮ ಪ್ರತಿಷ್ಠೆಯನ್ನು ಬದಿಗೊತ್ತಿ ಪಕ್ಷ ಸಂಘಟನೆಗೆ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಲು ಮುಂದಾಗಬೇಕು. ನಮ್ಮ ಪಕ್ಷದಲ್ಲೇ ಕಾಲೆಳೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಎಲ್ಲರೂ ಒಗ್ಗಟ್ಟಿನಿಂದ ಪಕ್ಷಕ್ಕಿಂತ ಯಾರೂ ದೊಡ್ಡವರಿಲ್ಲ ಎಂಬ ಮನೋಭಾವನೆಯಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಬೇಕು. ಅದೇ ರೀತಿ ಪ್ರತಿಪಕ್ಷ ಸ್ಥಾನದಲ್ಲಿರುವ ಕಡೆ ಅಲ್ಲಿನ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಪಕ್ಷ ಸಂಘಟನೆಗೆ ಮುಂದಾಗಬೇಕು. ಯಾವುದೇ ಕಾರಣಕ್ಕೂ ಅಶಿಸ್ತು ಸಹಿಸುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಎಚ್ಚರಿಕೆ ನೀಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin