ಓದುವಾಗ ದಡ್ಡನಾಗಿದ್ದೆ, ಸಿನಿಮಾದಲ್ಲಿ ಆಸಕ್ತಿ ಹೆಚ್ಚಾಗಿತ್ತು : ಕಾಲೇಜಿನ ದಿನಗಳನ್ನು ನೆನೆದ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

CM-Kumaraswamy--0001

ಬೆಂಗಳೂರು,ಜೂ.4- ದೇವರು, ಗುರುಹಿರಿಯರು, ತಂದೆತಾಯಿಯರಲ್ಲಿ ವಿದ್ಯಾರ್ಥಿಗಳು ಭಯಭಕ್ತಿಯಿಂದ ಇರಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿವಿಮಾತು ಹೇಳಿದರು. ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದೇವರು ಗುರುಹಿರಿಯರಲ್ಲಿ ಗೌರವವಿರಬೇಕು. ಅದೇ ನಮಗೆ ಶ್ರೀರಕ್ಷೆ. ನಮ್ಮ ದೇಶದ ಸಂಸ್ಕøತ ಶ್ಲೋಕಗಳ ಸ್ಮರಣೆಯಿಂದ ಹೃದಯಕ್ಕೆ ಶಕ್ತಿ ಆವರಿಸುತ್ತದೆ, ತಂದೆತಾಯಿ, ದೇವರ ಮೇಲೆ ನಂಬಿಕೆ ಇದ್ದುದ್ದಕ್ಕೆ ಇಂದು ತಾವು ಈ ಸ್ಥಾನದಲ್ಲಿರುವುದು ಎಂದು ಹೇಳಿದರು.

ಪುರೋಹಿತರು ಪಠಿಸುವ ಶ್ಲೋಕ ಅವಶ್ಯಕ ಎಂದ ಅವರು, ಇದನ್ನು ಕೆಲವರು ಮೂಢನಂಬಿಕೆ ಎಂದರೂ ಚಿಂತೆಯಿಲ್ಲ. ಇದು ನಮ್ಮ ನಂಬಿಕೆ ಎಂದರು. ತಾವು ಇದೇ ಕಾಲೇಜಿನಲ್ಲಿ ಅತ್ಯಂತ ವೀಕ್ ವಿದ್ಯಾರ್ಥಿಯಾಗಿದ್ದವು. ಈ ಕಾಲೇಜಿನಲ್ಲಿ ತಮಗೆ ಸೀಟು ಸಿಕ್ಕಿದ್ದೆ ಪುಣ್ಯ. ಪ್ರತಿಯೊಬ್ಬರಲ್ಲೂ ಅವರದೇ ಆದ ಪ್ರತಿಭೆ ಇರುತ್ತದೆ. ನಿಗದಿತ ಗುರಿಯತ್ತ ಸಾಗಿದಾಗ ಮಾತ್ರ ಸಾಧನೆ ಮಾಡಬಹುದು. ವೀಕ್ ವಿದ್ಯಾರ್ಥಿ ಎಂಬ ನಿರಾಸಕ್ತಿ ಇರಬಾರದು. ಓದುವಾಗ ಅತ್ಯಂತ ದಡ್ಡನಾಗಿದ್ದೆ. ಸಿನಿಮಾದಲ್ಲಿ ಹೆಚ್ಚು ಆಸಕ್ತಿ ಇತ್ತು. ಈಗ 24 ಗಂಟೆ ಓದಿದರೂ ಸಮಯ ಸಾಲದಂತಾಗಿದೆ ಎಂದು ಹೇಳಿದರು.

ನಮ್ಮ ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೂಡ ಉದ್ದಾರವಾಗುವುದಿಲ್ಲ ಎಂದೇ ನುಡಿದಿದ್ದರು. ಆದರೆ ಈಗ ಜವಾಬ್ದಾರಿಯಿಂದ ಜನಸೇವೆ ಮಾಡುತ್ತಿದ್ದೇನೆ ಎಂದು ಹೇಳಿದರು. ಜನರಲ್ಲಿ ವಿಶ್ವಾಸ ಮೂಡುವಂತೆ ಆಡಳಿತ ನಡೆಸುವುದಾಗಿ ತಿಳಿಸಿದ ಅವರು, ಈಗ ಮತ್ತೆ ನಮ್ಮ ಹಳೇ ಕಾಲೇಜಿಗೆ ಬಂದು ಸನ್ಮಾನ ಸ್ವೀಕರಿಸುತ್ತಿರುವುದು ಸಂತೋಷದ ವಿಷಯ. ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಅವರ ಜೀವನ ಸಮಾಜದ ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ. ಸ್ವಾರ್ಥವೇ ತುಂಬಿರುವ ಈ ಕಾಲ ಘಟ್ಟದಲ್ಲಿ ನರಸಿಂಹಯ್ಯ ಅವರು ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಲಕ್ಷಾಂತರ ವಿದ್ಯಾರ್ಥಿಗಳಿಗೆ ನೆರಳಾಗಿ ಈ ಸಂಸ್ಥೆ ನಿಂತಿದೆ ಎಂದರು.

ತಂದೆ-ತಾಯಿಯರಿಗೆ ಮೋಸ ಮಾಡಬಾರದು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯೆ ಕಲಿತು ಬುದ್ಧಿವಂತರಾಗಬೇಕು. ಇಲ್ಲದಿದ್ದರೆ ಕಷ್ಟ. ನಾವು ವಿದ್ಯಾರ್ಥಿಯಾಗಿದ್ದಾಗ ಗುರುಗಳು ಪ್ರಶ್ನೆ ಕೇಳುತ್ತಾರೆಂದು ಹಿಂದಿನ ಬೆಂಚಿನಲ್ಲಿ ಕುಳಿತಿರುತ್ತಿದ್ದೆ. ನಡುಕು ಉಂಟಾಗುತ್ತಿತ್ತು ಎಂದು ತಾವು ವಿದ್ಯಾರ್ಥಿಯಾಗಿದ್ದ ದಿನಗಳನ್ನು ಸ್ಮರಿಸಿದರು.

Facebook Comments

Sri Raghav

Admin