ಕಚೇರಿ ಎದುರಲ್ಲಿ ರೈತರ ಹೋರಾಟ, ಬಿಜೆಪಿ ಕೋರ್ ಕಮಿಟಿ ಸಭೆ ಬಿಎಸ್ವೈ ಮನೆಗೆ ಶಿಫ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Mahadayi--01

ಬೆಂಗಳೂರು,ಡಿ.26- ಉತ್ತರ ಕರ್ನಾಟಕದ ರೈತರ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ನಡೆಯಬೇಕಿದ್ದ ಬಿಜೆಪಿ ಕೋರ್ ಕಮಿಟಿ ಸಭೆಯನ್ನು ಕೊನೆ ಕ್ಷಣದಲ್ಲಿ ಬದಲಾಯಿಸಲಾಯಿತು.   ಈ ಮೊದಲು ನಿಗದಿಯಾದಂತೆ ಕೋರ್ ಕಮಿಟಿ ಸಭೆಯನ್ನು ಇಂದು ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕಳೆದ ನಾಲ್ಕು ದಿನಗಳಿಂದ ಉತ್ತರ ಕರ್ನಾಟಕದ ನೂರಾರು ರೈತರು ಮಹದಾಯಿ ನದಿ ನೀರು ಸಮಸ್ಯೆಯನ್ನು ಮುಂದಿಟ್ಟುಕೊಂಡು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರೈತರ ಪ್ರತಿಭಟನೆ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಅನ್ನದಾತನ ಹೋರಾಟಕ್ಕೆ ಅನೇಕ ಸಂಘಸಂಸ್ಥೆಗಳು, ಕನ್ನಡಪರ ಸಂಘಟನೆಗಳು, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ನೀಡಿವೆ. ದಾವಣಗೆರೆಯಿಂದ ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪಕ್ಷದ ಕಚೇರಿಗೆ ಆಗಮಿಸಿ ರೈತರಿಂದ ಮನವಿ ಪತ್ರವನ್ನು ಆಲಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು.

ಆದರೆ ಪ್ರತಿಭಟನಾ ಸ್ಥಳದಲ್ಲಿ ರೈತರು ಯಡಿಯೂರಪ್ಪನವರ ವಿರುದ್ಧ ಆಕ್ರೋಶಗೊಂಡಿದ್ದರಿಂದ ಪಕ್ಷದ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಸಿದರೆ ರೈತರ ಆಕ್ರೋಶದ ಕಟ್ಟೆ ಹೊಡೆಯಬಹುದೆಂಬ ಭೀತಿ ಹಿನ್ನೆಲೆಯಲ್ಲಿ ಸಭೆ ನಡೆಸದಿರಲು ತೀರ್ಮಾನಿಸಲಾಯಿತು.  ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಯಡಿಯೂರಪ್ಪ ಬರುವವರೆಗೂ ನಾವು ಪ್ರತಿಭಟನೆಯನ್ನು ಕೈ ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು. ಪೊಲೀಸರು ಕೂಡ ಭಾರೀ ಭದ್ರತೆಯನ್ನು ಕೈಗೊಂಡಿದ್ದರು.   ಸ್ಥಳಕ್ಕೆ ಬಾರದೆ ಯಡಿಯೂರಪ್ಪ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಕೋರ್ ಕಮಿಟಿ ಸಭೆಯನ್ನು ನಡೆಸಿದರು.

Facebook Comments

Sri Raghav

Admin