ಕಟ್ಟಡ ಕುಸಿತ ಪ್ರಕರಣ : ಪಾಲುದಾರ ಹಾಗೂ ಗುತ್ತಿಗೆದಾರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

DSC_8660
ಬೆಂಗಳೂರು, ಅ.6- ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕಟ್ಟಡದ ಪಾಲುದಾರ ಹಾಗೂ ಗುತ್ತಿಗೆದಾರ ಶ್ರೀನಿವಾಸಲುರೆಡ್ಡಿ (44)ಯನ್ನು ಎಚ್‍ಎಸ್‍ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಈ ಪ್ರಕರಣದಲ್ಲಿ ಉಳಿದ ಪಾಲುದಾರರು, ಮೇಸ್ತ್ರಿ ಹಾಗೂ ಮತ್ತಿತರರನ್ನು ಬಂಧಿಸುವ ಸಾಧ್ಯತೆ ಇದ್ದು, ಪ್ರಕರಣ ದಾಖಲಿಸಿಕೊಂಡಿರುವ ಎಚ್‍ಎಸ್‍ಆರ್‍ಲೇಔಟ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮೂವರು ಕಣ್ಮರೆ:

ಕಟ್ಟಡ ದುರಂತದ ವೇಳೆ ಮೂವರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಇನ್ನೂ ಮೂವರು ಕಣ್ಮರೆಯಾಗಿದ್ದು, ಅವಶೇಷಗಳಡಿ ಸಿಲುಕಿರುವ ಶಂಕೆಯಿದ್ದು, ಅವರಿಗಾಗಿ ಶೋಧ ಮುಂದುವರೆದಿದೆ.

ಮುಂದುವರೆದ ಕಾರ್ಯಾಚರಣೆ:
ನಗರದ ಹೊರವಲಯದ ಬೆಳ್ಳಂದೂರು ಗೇಟ್ ಬಳಿ ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಿರ್ಮಾಣ ಹಂತದ ಐದು ಅಂತಸ್ತಿನ ಕಟ್ಟಡ ಪಕ್ಕಕ್ಕೆ ಉರುಳಿ ದುರ್ಘಟನೆ ಸಂಭವಿಸುತ್ತಿದ್ದಂತೆ ಕೆಲಸ ಮಾಡುತ್ತಿದ್ದ ಕೆಲ ಕಾರ್ಮಿಕರು ತಕ್ಷಣ ಹೊರ ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ. ನೋಡ ನೋಡುತ್ತಿದ್ದಂತೆ ಕಟ್ಟಡ ಪಕ್ಕಕ್ಕೆ ಉರುಳುತ್ತಿದ್ದಂತೆ ಕೆಲ ಕಾರ್ಮಿಕರು ಚೀರಿಕೊಂಡು ಹೊರಗೆ ಬಂದು ಒಳಗಿರುವವರ ರಕ್ಷಣೆಗಾಗಿ ಕೂಗಿಕೊಳ್ಳುತ್ತಿದ್ದರು. ಸುತ್ತಮುತ್ತಲಿನವರು ತಕ್ಷಣ ಪೊಲೀಸರಿಗೆ, ಅಗ್ನಿಶಾಮಕ ದಳಕ್ಕೆ ತಿಳಿಸಿದ್ದರು. ಐದು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ತಕ್ಷಣ ಕಾರ್ಯಾಚರಣೆ ನಡೆಸಿ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು.

ಮೊದಲು 5ರಿಂದ 7 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿ ಕಾರ್ಯಾಚರಣೆ ನಡೆಸಿ ಮೂವರು ಮೃತಪಟ್ಟಿರುವುದನ್ನು ಖಾತ್ರಿ ಪಡಿಸಿ ಶವಗಳನ್ನು ಹೊರತೆಗೆಯಲಾಗಿತ್ತು.
ಘಟನೆಯಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ ನಂತರ ಸಕ್ರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡ ಕುಸಿತದ ಸ್ವರೂಪ ಮತ್ತು ಗಾತ್ರದಿಂದಾಗಿ ಅಗ್ನಿ ಶಾಮಕ ಅಧಿಕಾರಿಗಳು ಯಮ ಸಾಹಸ ಪಡೆಯಬೇಕಾಯಿತು.ಸಾಧ್ಯವಾದಷ್ಟು ಯಂತ್ರಗಳನ್ನು ಬಳಸದೆ ಕಾರ್ಯಾಚರಣೆ ನಡೆಸಲು ಮುಂದಾಗಿದ್ದರು. ಯಂತ್ರ ಬಳಸಿದರೆ ಅವಶೇಷಗಳಡಿ ಕಾರ್ಮಿಕರು ಸಿಲುಕಿದ್ದರೆ ಅವರನ್ನು ರಕ್ಷಿಸಲು ಕಷ್ಟಸಾಧ್ಯವೆಂದು ತಿಳಿದು ಸಾಧ್ಯವಾದಷ್ಟು ಹಾಗೆಯೇ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಘಟನೆಯಲ್ಲಿ ಬಿಹಾರ ಮೂಲದ ಅಶೋಕ್‍ಮಹಾಂತ್, ರಾಮ್‍ಬಾಬು, ಉತ್ತರಭಾರತ ಮೂಲದ ರಹಾದ್ ಮೃತಪಟ್ಟಿದ್ದಾರೆ.ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಎನ್‍ಡಿಆರ್‍ಎಫ್ ಸಿಬ್ಬಂದಿ, ಸಿವಿಲ್ ಡಿಫೆನ್ಸ್ ಪೋರ್ಸ್ನ 200ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ತಡರಾತ್ರಿವರೆಗೂ ಕಟ್ಟಡ ಅವಶೇಷಗಳ ತೆರವು ಕಾರ್ಯಾಚರಣೆ ನಡೆಸಿ ಇಂದು ಮುಂಜಾನೆಯಿಂದಲೇ ಮತ್ತೆ ಮುಂದುವರೆಸಿದ್ದಾರೆ.ಸ್ಥಳದಲ್ಲಿ ಡಿಸಿಪಿ ಬೋರಲಿಂಗಯ್ಯ, ಎಸಿಪಿ ಲಕ್ಷ್ಮಿನಾರಾಯಣ್ ಮೊಕ್ಕಾಂಹೂಡಿದ್ದಾರೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin