ಕಟ್ಟಡ ವಿವಾದದಿಂದ ಶಾಲೆಗೆ ಬೀಗ ಹಾಕಿದ ಮಾಲೀಕ, ಬೀದಿಗೆ ಬಿದ್ದ ವಿದ್ಯಾರ್ಥಿಗಳು

ಈ ಸುದ್ದಿಯನ್ನು ಶೇರ್ ಮಾಡಿ

School--02

ಬಂಗಾರಪೇಟೆ, ಮೇ 25- ಶಾಲಾ ಕಟ್ಟಡ ವಿವಾದದ ಹಿನ್ನೆಲೆಯಲ್ಲಿ ಇಲ್ಲಿನ ಸ್ವಾಮಿ ವಿವೇಕಾನಂದ ಶಾಲೆಗೆ ಮಾಲೀಕರು ಬೀಗ ಹಾಕಿದ್ದರಿಂದ ಇಂದು ಬೆಳಗ್ಗೆ ವಿದ್ಯಾರ್ಥಿಗಳು ಫುಟ್‍ಪಾತ್‍ನಲ್ಲೇ ಕುಳಿತುಕೊಳ್ಳುವಂತಾಯಿತು. ಬಂಗಾರಪೇಟೆ ತಾಲೂಕಿನ ಹರಟಿ ರಸ್ತೆಯ ಲಕ್ಷ್ಮೀಪುರ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಶಾಲೆಯಿದೆ. ಶಾಲೆಯು 20 ಗುಂಟೆ ಪ್ರದೇಶದಲ್ಲಿದ್ದು, ಹಣಕಾಸು ವ್ಯವಹಾರದಲ್ಲಿ ಕಟ್ಟಡದ ಮಾಲೀಕ ಸತ್ಯನಾರಾಯಣ ಹಾಗೂ ಶಾಲೆ ಮುಖ್ಯ ಶಿಕ್ಷಕರಾದ ಶ್ರೀನಿವಾಸ್ ನಡುವೆ ತಕರಾರು ಉಂಟಾಗಿದೆ. ಶಾಲಾ ಮುಖ್ಯಸ್ಥರು ಒಪ್ಪಂದದಂತೆ ಹಣ ನೀಡದ ಕಾರಣ ಕಟ್ಟಡದ ಮಾಲೀಕ ಸತ್ಯನಾರಾಯಣ ಅವರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದು ಶಾಲೆಗೆ ಬೀಗ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ನಡುವೆ ನಿನ್ನೆ ಸಂಜೆ ಶಾಲೆಯಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಲಾಗಿದೆ.

School--01

ಇದ್ಯಾವುದರ ಅರಿವಿಲ್ಲದೆ ಇಂದು ಬೆಳಗ್ಗೆ ಸಿಬ್ಬಂದಿ ಸೇರಿ 500 ಮಂದಿ ವಿದ್ಯಾರ್ಥಿಗಳು ಶಾಲೆಗೆ ಬಂದಾಗ ಗೇಟ್‍ಗೆ ಬೀಗ ಹಾಕಿರುವುದು ಗಮನಿಸಿ ಫುಟ್‍ಪಾತ್‍ನಲ್ಲೇ ಕುಳಿತುಕೊಂಡಿದ್ದಾರೆ. ಶಾಲೆಗೆ ಬೀಗ ಹಾಕಿರುವ ವಿಷಯ ತಿಳಿದ ವಿದ್ಯಾರ್ಥಿಗಳ ಪೋಷಕರು ಶಾಲೆ ಬಳಿ ಜಮಾಯಿಸಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆ ಬಳಿ ಗಲಾಟೆಯಾಗುತ್ತಿದೆ ಎಂಬ ವಿಷಯ ತಿಳಿದ ಬಂಗಾರಪೇಟೆ ಸರ್ಕಲ್ ಇನ್ಸ್‍ಪೆಕ್ಟರ್ ದಿನೇಶ್ ಪಾಟೀಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಶಾಲೆಗೆ ಬೀಗ ಹಾಕಿರುವ ವಿಷಯ ತಿಳಿದ ಬಿಇಒ ಕೆಂಪಯ್ಯ ಅವರು ಸ್ಥಳಕ್ಕೆ ಆಗಮಿಸಿ ಶಾಲಾ ವಿದ್ಯಾರ್ಥಿಗಳ ಮನವೊಲಿಸಿ ಶಾಲೆಯು 28 ರಿಂದ ಆರಂಭಗೊಳ್ಳಲಿದೆ. ಈಗ ಮನೆಗೆ ತೆರಳಿ ಎಂದು ಪೊೀಷಕರು ಹಾಗೂ ವಿದ್ಯಾರ್ಥಿಗಳ ಮನವೊಲಿಸಿದರು.

ಬಿಇಒ ಮಾತಿಗೆ ಮಣಿಯದ ಪೊೀಷಕರು ಶಾಲೆಗೆ ಮಕ್ಕಳು ಹೋಗಲು ಅನುವು ಮಾಡಿಕೊಡಿ ಎಂದು ಮನವಿ ಮಾಡಿಕೊಂಡಾಗ, ಈ ಬಗ್ಗೆ ಕಟ್ಟಡ ಮಾಲೀಕರ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Facebook Comments

Sri Raghav

Admin