ಕಟ್ಟಡ ಸಾಮಗ್ರಿಗಳನ್ನು ದರೋಡೆ ಮಾಡುತಿದ್ದ ಕುಖ್ಯಾತ ಕಳ್ಳರ ಬಂಧನ, ಕದ್ದ ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

crime
ಬೆಂಗಳೂರು, ಅ.27-ನಿರ್ಮಾಣ ಹಂತದ ಕಟ್ಟಡದ ಬಳಿ ಕಬ್ಬಿಣದ ರಾಡ್‍ಗಳು, ಸೆಂಟ್ರಿಂಗ್ ಶೀಟ್‍ಗಳು ಹಾಗೂ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳು ಹಾಗೂ ಈ ವಸ್ತುಗಳನ್ನು ಸ್ವೀಕರಿಸುತ್ತಿದ್ದ ಇಬ್ಬರು ಸೇರಿದಂತೆ ಒಟ್ಟು ಆರು ಮಂದಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿ 15 ಲಕ್ಷ ಬೆಲೆಬಾಳುವ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಗೋವಿಂದನ್ (38), ಗುಣಶೇಖರ್ (29), ಶಕ್ತಿವೇಲು (27) ಮತ್ತು ರಾಮು(49) ಬಂಧಿತ ಕಳ್ಳರಾಗಿದ್ದು, ಇವರಿಂದ ಕಳವು ಮಾಲನ್ನು ಸ್ವೀಕರಿಸುತ್ತಿದ್ದ ಯಲಹಂಕ ಉಪನಗರದ ವೆಂಕಟೇಶ್ (31) ಮತ್ತು ಅರುಳ್‍ಕುಮಾರ್(40) ಬಂಧಿತರು.
ನಿರ್ಮಾಣ ಹಂತದ ಕಟ್ಟಡದ ಬಳಿ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಬಗ್ಗೆ ಸಂಪಿಗೆಹಳ್ಳಿ ಪೊಲೀಸರಿಗೆ ಹಲವಾರು ದೂರುಗಳು ಬಂದಿದ್ದವು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆ ಸಂಪಿಗೆ ಹಳ್ಳಿ ವ್ಯಾಪ್ತಿಯ ರಾಚೇನಹಳ್ಳಿ ರೈಲ್ವೆ ಪ್ಯಾರಾಲೆಲ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ನಾಲ್ವರನ್ನು ಬಂಧಿಸಿ ಅಪಾಯಕಾರಿ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳ ಬಂಧನದಿಂದ ಬಾಗಲೂರಿನಲ್ಲಿ ನಡೆದಿದ್ದ ಆರು ಪ್ರಕರಣ, ಕೊತ್ತನೂರು, ಏರ್ ಪೋರ್ಟ್ ಯಲಹಂಕ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳು ಬಯಲಾದಂತಾಗಿದೆ.
ಕಳ್ಳತನ ಮಾಡಿದ ಮಾಲನ್ನು ಸ್ವೀಕರಿಸುತ್ತಿದ್ದ ಯಲಹಂಕ ಉಪನಗರದ ಇಬ್ಬರನ್ನು ಬಂಧಿಸಿರುವ ಪೊಲೀಸರು ಅವರಿಂದ 15ಲಕ್ಷ ರೂ. ಬೆಲೆಬಾಳುವ ಸೆಂಟ್ರಿಂಗ್ ಶೀಟ್‍ಗಳು, ಜಾಕ್ ರಾಡ್‍ಗಳು, ಸ್ಟೀಲ್ ಹಾಗೂ ಟೆಂಪೋ ವಶಪಡಿಸಿಕೊಂಡಿದ್ದಾರೆ. ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್, ಸಂಪಿಗೆಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ನಾಗ್ತೆ, ಇನ್ಸ್‍ಪೆಕ್ಟರ್ ಅಂಜನ್‍ಕುಮಾರ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Facebook Comments

Sri Raghav

Admin