ಕಟ್ಟಾ, ಮುನಿರಾಜು, ವಿಶ್ವನಾಥ್ ಮೇಲೆ ದಾಖಲಾಗಿದ್ದ ಕೇಸ್’ಗಳನ್ನೂ ರದ್ದುಗೊಳಿಸಿ ಹೈಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Katta-Subhramansyam-Naidu

ಬೆಂಗಳೂರು, ನ.3- ಇಂದು ಮೂವರು ಬಿಜೆಪಿ ಮುಖಂಡರಿಗೆ ಹೈಕೋರ್ಟ್‍ನಿಂದ ಬಂಪರ್ ಸಿಹಿ ಸುದ್ದಿ… ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ದಾಸರಹಳ್ಳಿ ಶಾಸಕ ಮುನಿರಾಜು ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಮೇಲೆ ಲೋಕಾಯುಕ್ತದಲ್ಲಿ ದಾಖಲಾಗಿದ್ದ ಆರೋಪಗಳ ಪ್ರಕರಣ ರದ್ದುಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ.
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮೇಲಿದ್ದ ಕೆಐಎಡಿಬಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಕೋರ್ಟ್‍ನಲ್ಲಿ ದಾಖಲಾಗಿದ್ದ ಬಂಡೆ ಕೊಡಿಗೇಹಳ್ಳಿಯ ಜಮೀನು ದಾಖಲೆಗಳನ್ನು ತಿದ್ದಿದ ಆರೋಪವನ್ನು ಹೈಕೋರ್ಟ್ ವಜಾಗೊಳಿಸಿದೆ. ಇದು ಕಟ್ಟಾಸುಬ್ರಹ್ಮಣ್ಯ ನಾಯ್ಡು ಅವರು ಒಬ್ಬರು ತೆಗೆದುಕೊಳ್ಳುವ ತೀರ್ಮಾನವಲ್ಲ. ಅಲ್ಲಿ ಸಮಿತಿ ಇರುತ್ತದೆ.
ಸಮಿತಿ ತೀರ್ಮಾನ ತೆಗೆದುಕೊಂಡು ಕೆಐಎಡಿಬಿಗೆ ಜಮೀನು ನೀಡಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್ ಈ ಸಂಬಂಧ ಲೋಕಾಯುಕ್ತದಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿದೆ.

ಇದರಿಂದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿರ್ದೋಷಿಯಾಗಿದ್ದಾರೆ. ಕೆಐಎಡಿಬಿ ಪ್ರಕರಣದಲ್ಲಿ ಮಾಜಿ ಸಚಿವ ಕಟ್ಟಾ ಅವರು ಸಾಕಷ್ಟು ಮುಜುಗರ ಅನುಭವಿಸಿದ್ದರು. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸಂಗ ಬಂದಿತ್ತು. ಸದ್ಯ ಈಗ ಅವರು ಈ ಕೇಸ್‍ನಿಂದ ಖುಲಾಸೆಯಾಗಿದ್ದಾರೆ. ಅದೇ ರೀತಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಶವಂತಪುರ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಮೇಲಿನ ವಿಚಾರಣೆಯನ್ನು ಹೈಕೋರ್ಟ್ ವಜಾಗೊಳಿಸಿದೆ.  ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿದ್ದ ದೂರಿಗೆ ಸ್ಪೀಕರ್ ಅವರ ಅನುಮತಿ ಪಡೆಯದೆ ದಾಖಲಾಗಿರುವ ದೂರು ವಿಚಾರಣೆಗೆ ಅನರ್ಹ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ಪ್ರಕರಣವನ್ನು ರದ್ದುಗೊಳಿಸಿದೆ.

ಅದೇ ರೀತಿ ದಾಸರಹಳ್ಳಿ ಶಾಸಕ ಮುನಿರಾಜು ಅವರ ಮೇಲಿದ್ದ ಜಮೀನು ಒತ್ತುವರಿ ಪ್ರಕರಣದ ಆರೋಪದಿಂದಲೂ ಹೈಕೋರ್ಟ್ ಏಕಸದಸ್ಯ ಪೀಠ ಮುಕ್ತಗೊಳಿಸಿದೆ.  ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಆನಂದ ಭೈರಾರೆಡ್ಡಿಯವರು ಈ ಮೂವರ ಪ್ರಕರಣಗಳನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ.  ಇತ್ತೀಚೆಗಷ್ಟೆ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಂದಾಲ್‍ನಿಂದ ಕಿಕ್‍ಬ್ಯಾಕ್ ಪಡೆದ ಆರೋಪದಲ್ಲಿ ಸಿಬಿಐ ನ್ಯಾಯಾಲಯದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೋಷಮುಕ್ತರಾಗಿದ್ದರು.  ಇದರ ಬೆನ್ನಲ್ಲೇ ಮತ್ತೆ ಬಿಜೆಪಿಯ ಮೂವರು ಪ್ರಮುಖರು ನಿರ್ದೋಷಿಗಳಾಗಿರುವುದು ಬಿಜೆಪಿಗೆ ರಾಜಕೀಯವಾಗಿ ಹಾಗೂ ನೈತಿಕವಾಗಿ ಸಾಕಷ್ಟು ಬಲ ಸಿಕ್ಕಂತಾಗುತ್ತದೆ.

► Follow us on –  Facebook / Twitter  / Google+

Facebook Comments

Sri Raghav

Admin