ಕಡಿಮೆ ಅವಧಿಯಲ್ಲಿ ಯುದ್ಧಕ್ಕೆ ಸಿದ್ಧವಾಗಲು ಐಎಎಫ್ ಸಮರ್ಥವಾಗಿದೆ : ಧನೋವಾ

ಈ ಸುದ್ದಿಯನ್ನು ಶೇರ್ ಮಾಡಿ

IAF--02

ನವದೆಹಲಿ, ಅ.8-ಅತ್ಯಂತ ಕಡಿಮೆ ಅವಧಿಯಲ್ಲಿ ಯುದ್ಧಕ್ಕೆ ಪೂರ್ಣಪ್ರಮಾಣದಲ್ಲಿ ಸಿದ್ಧವಾಗಲು ಭಾರತೀಯ ವಾಯು ಪಡೆ (ಐಎಎಫ್) ಸಮರ್ಥವಾಗಿದೆ ಎಂದು ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಹೇಳಿದ್ದಾರೆ. ವಾಯು ಪಡೆ ದಿನಾಚರಣೆ ಸಂದರ್ಭದಲ್ಲಿ ಇಂದು ರಾಜಧಾನಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಐಎಎಫ್ ಸಿಬ್ಬಂದಿ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಭದ್ರತೆಗೆ ಎದುರಾಗುವ ಯಾವುದೇ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಐಎಎಫ್ ಸಜ್ಜಾಗಿದೆ ಎಂದು ಹೇಳಿದರು.

ಪ್ರಸ್ತುತ ಎದುರಾಗಿರುವ ಭದ್ರತಾ ಸವಾಲುಗಳ ಕುರಿತು ಪ್ರಸ್ತಾಪಿಸಿದ ಅವರು, ಅತ್ಯಂತ ಕಡಿಮೆ ಅವಧಿಯಲ್ಲಿ ಹೋರಾಟಕ್ಕೆ ಸಿದ್ದವಾಗಲು ಐಎಎಫ್ ಸಿಬ್ಬಂದಿ ಪರಿಪೂರ್ಣ ಸನ್ನದ್ಧರಾಗಿದ್ದಾರೆ ಎಂದು ತಿಳಿಸಿದರು. ಭಾರತೀಯ ವಾಯು ಪಡೆಯು ಬಹು ಆಯಾಮದ ಮಹತ್ವದ ಸಾಮಥ್ರ್ಯಗಳನ್ನು ಹೊಂದಿದೆ. ದೇಶಕ್ಕೆ ಎದುರಾಗುವ ಯಾವುದೇ ಸವಾಲುಗಳನ್ನು ಭಾರತೀಯ ಭೂ ಸೇನೆ ಮತ್ತು ನೌಕಾದಳದ ಜಂಟಿ ಸಹಭಾಗಿತ್ವದಲ್ಲಿ ಪ್ರತಿರೋಧಿಸಲು ಸರ್ವಥಾ ಸಜ್ಜಾಗಿದೆ ಎಂದು ಧನೋವಾ ಹೇಳಿದರು.

ಉಗ್ರರ ದಾಳಿ ಸೇರಿದಂತೆ ಯಾವುದೇ ರೀತಿಯ ಆಕ್ರಮಣವನ್ನು ಎದುರಿಸಲು ದೇಶದ ಎಲ್ಲ ವಾಯು ನೆಲೆಗಳಿಗೆ ಭಾರೀ ಭದ್ರತೆ ಒದಗಿಸಲಾಗಿದೆ ಎಂದು ಅವರು ತಿಳಿಸಿದರು. ಕಳೆದ ವರ್ಷ ಜನವರಿಯಲ್ಲಿ ಪಠಾಣ್‍ಕೋಟ್‍ನ ಐಎಎಫ್ ನೆಲೆ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ಏಳು ಐಎಎಫ್ ಸಿಬ್ಬಂದಿಯನ್ನು ಕೊಂದಿದ್ದರು.

ದೇಶಾದ್ಯಂತ ವಾಯು ಪಡೆ ದಿನಾಚರಣೆ :

ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ ತವಾಂಗ್‍ನಲ್ಲಿ ಕಳೆದ ಎರಡು ದಿನಗಳ ಹಿಂದೆ ಐಎಎಫ್‍ನ ಮಿಗ್-17 ಯುದ್ಧ ಹೆಲಿಕಾಪ್ಟರ್ ಪತನಗೊಂಡು ಏಳು ಯೋಧರು ಮೃತಪಟ್ಟ ಕರಾಳ ನೆನಪಿನಲ್ಲೇ ದೇಶದ ವಿವಿಧೆಡೆ ಇಂದು ವಾಯು ಪಡೆ ದಿನಾಚರಣೆಯನ್ನು ಆಚರಿಸಲಾಯಿತು. ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲಿ ನಡೆದ ಪ್ರಧಾನ ಸಮಾರಂಭದಲ್ಲಿ ಐಎಎಫ್‍ನ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin