ಕಡಿಮೆ ವೆಚ್ಚದ, ಶೀಘ್ರವಾಗಿ ಕಟ್ಟಬಹುದಾದ ರಬ್ಬರ್ ಡ್ಯಾಂಗಳ ನಿರ್ಮಾಣಕ್ಕೆ ರಾಜ್ಯಸರ್ಕಾರ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Rubber-Dam

ಬೆಂಗಳೂರು, ಅ.30-ಜಲ ವಿದ್ಯುತ್ ಉತ್ಪಾದನೆ ಹೆಚ್ಚಳ, ಅಂತರ್ಜಲ ಅಭಿವೃದ್ಧಿ ಮತ್ತು ಕಿರು ನೀರಾವರಿ ಯೋಜನೆಗಳಿಗಾಗಿ ಕಡಿಮೆ ವೆಚ್ಚದಲ್ಲಿ ಮತ್ತು ಶೀಘ್ರವಾಗಿ ಕಟ್ಟಬಹುದಾದ ರಬ್ಬರ್ ಡ್ಯಾಂಗಳನ್ನು ನಿರ್ಮಿಸಲು ರಾಜ್ಯಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ಅಮೆರಿಕ, ಕೆನಡಾ, ಥೈಲ್ಯಾಂಡ್, ಆಸ್ಟ್ರೇಲಿಯಾ, ಜಪಾನ್, ಕೊರಿಯಾ, ಫಿಲಿಪೈನ್ಸ್, ಯುಎಸ್‍ಎ, ತೈವಾನ್, ಚೀನಾ ದೇಶಗಳಲ್ಲಿ ಯಶಸ್ವಿಯಾಗಿರುವ ರಬ್ಬರ್ ಡ್ಯಾಂ ನಿರ್ಮಾಣವನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವ ಕುರಿತು ಅಧ್ಯಯನ ನಡೆಯುತ್ತಿದೆ.  ಭಾರತದಲ್ಲಿ ಮೊಟ್ಟಮೊದಲಿಗೆ ಗುಜರಾತ್ ಮತ್ತು ಆಂಧ್ರಪ್ರದೇಶ ರಾಜ್ಯಗಳು ರಬ್ಬರ್ ಡ್ಯಾಂ ನಿರ್ಮಿಸಿ ಯಶಸ್ವಿಯಾಗಿವೆ. ಒರಿಸ್ಸಾದಲ್ಲಿ ರಬ್ಬರ್ ಡ್ಯಾಂ ಅಸ್ತಿತ್ವದಲ್ಲಿದೆ.

ಏನಿದು ರಬ್ಬರ್ ಡ್ಯಾಂ:

ರಬ್ಬರ್ ಮಿಶ್ರಿತ ಫ್ಯಾಬ್ರಿಕ್‍ನಿಂದ ಬಲೂನಾಕಾರದ ತಡೆಗೋಡೆ ನಿರ್ಮಿಸಿ ನೀರನ್ನು ನಿಲ್ಲಿಸುವುದೇ ರಬ್ಬರ್ ಡ್ಯಾಂ ಆಗಿದೆ.  ತಳಹದಿ ಮತ್ತು ಇಕ್ಕೆಲಗಳ ಗೋಡೆಗಳನ್ನು ಸಿಮೆಂಟ್ ಕಾಂಕ್ರೀಟ್‍ನಲ್ಲಿ ನಿರ್ಮಿಸಲಾಗುತ್ತದೆ. ನಂತರ ಫ್ಯಾಬ್ರಿಕ್ ರಬ್ಬರ್‍ನಿಂದ ನಿರ್ಮಿಸಲಾದ ಬಲೂನಾಕಾರದ ತಡೆಗೋಡೆಗೆ ನೀರು ಮತ್ತು ಗಾಳಿಯನ್ನು ತುಂಬಿ ಅಣೆಕಟ್ಟಿಗೆ ಅಡ್ಡಲಾಗಿ ಪ್ರತಿಷ್ಠಾಪಿಸಲಾಗುತ್ತದೆ. ಇದು ಅತ್ಯಂತ ಕಡಿಮೆ ಒತ್ತಡದಲ್ಲಿ ಲಂಘಿಸುವಿಕೆಯ ಸ್ವಭಾವ ಹೊಂದಿರುವುದರಿಂದ ನೀರನ್ನು ತಡೆ ಹಿಡಿಯುವ ಸಾಮಥ್ರ್ಯ ಹೊಂದಿದೆ. ರಬ್ಬರ್ ಡ್ಯಾಂಗಳನ್ನು ಈವರೆಗೂ 10 ಮೀಟರ್ ಎತ್ತರ (32 ಅಡಿ), 200 ಮೀಟರ್ ಅಗಲ (656 ಅಡಿ) ನಿರ್ಮಿಸಿರುವ ದಾಖಲೆ ಇದೆ. ಈ ರಬ್ಬರ್ ಡ್ಯಾಂಗಳು ಸುಮಾರು 35 ವರ್ಷಗಳವರೆಗೂ ಬಾಳಿಕೆ ಬರಲಿವೆ. ಆನಂತರ ರಬ್ಬರ್‍ನಿಂದ ನಿರ್ಮಿಸಿದ ತಡೆಗೋಡೆ ಬದಲಾಯಿಸಿದರೆ ಸಾಕು ಹೊಸದಾಗಿ ಡ್ಯಾಂ ನಿರ್ಮಿಸಿದಂತಾಗುತ್ತದೆ.

ಕಾಂಕ್ರೀಟ್ ಡ್ಯಾಂ ನಿರ್ಮಾಣಕ್ಕಿಂತಲೂ ರಬ್ಬರ್ ಡ್ಯಾಂನ ವೆಚ್ಚ ಶೇ.40 ರಷ್ಟು ಕಡಿಮೆಯಾಗಲಿದೆ. ಈಗಾಗಲೇ ಹರಿಯುತ್ತಿರುವ ನದಿಗೆ ಅಥವಾ ದೊಡ್ಡ ದೊಡ್ಡ ಅಣೆಕಟ್ಟುಗಳಿಗೆ ಸಣ್ಣದಾಗಿ ರಬ್ಬರ್ ಡ್ಯಾಂ ನಿರ್ಮಿಸಿ ವಿದ್ಯುತ್ ಉತ್ಪಾದನೆ, ಅಂತರ್ಜಲ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆಗಳಿಗೆ ಬಳಸಬಹುದಾಗಿದೆ. ವಿದ್ಯುತ್ ಉತ್ಪಾದನೆಗೆ ರಬ್ಬರ್ ಡ್ಯಾಂ: ರಾಜ್ಯದಲ್ಲಿ ಶರಾವತಿ, ವರಾಹಿ, ಆಲಮಟ್ಟಿ, ಗೇರುಸೊಪ್ಪ, ಕದ್ರಾ, ಕೊಡಸಳ್ಳಿ, ಸೂಪಾ, ಲಿಂಗನಮಕ್ಕಿ, ಭದ್ರಾ, ಮಣಿ, ಘಟಪ್ರಭಾ, ಶಿವನಸಮುದ್ರ, ಮುನಿರಾಬಾದ್ ಮತ್ತಿತರ ಕಡೆ ಜಲ ವಿದ್ಯುತ್ ಉತ್ಪಾದನೆ ಯೋಜನೆಗಳಿವೆ.  ರಾಜ್ಯದಲ್ಲಿ ಸುಮಾರು 34 ಅಣೆಕಟ್ಟುಗಳಿವೆ. ಸರಿಯಾದ ಯೋಜನೆಗಳನ್ನು ರೂಪಿಸಿದರೆ ಕಾವೇರಿ, ತುಂಗಭದ್ರಾ, ಶರಾವತಿ, ಕೃಷ್ಣಾದಂತಹ ನದಿ ಪಾತ್ರಗಳಲ್ಲಿ ಇನ್ನೂ ಸುಮಾರು 2 ಸಾವಿರ ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದನೆಗೆ ಅವಕಾಶಗಳಿವೆ.

ಆದರೆ ಅಣೆಕಟ್ಟುಗಳ ನಿರ್ಮಾಣದ ವೆಚ್ಚ ದುಬಾರಿಯಾಗಿರುವುದರಿಂದ ರಾಜ್ಯಸರ್ಕಾರ ಧೈರ್ಯ ಮಾಡುತ್ತಿಲ್ಲ. ಕೇಂದ್ರ ಸರ್ಕಾರದ ನೆರವಿನಲ್ಲಿ ಕೃಷ್ಣಾ ಜಲ ವಿದ್ಯುತ್ ಮತ್ತು ಥರ್ಮಲ್ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಜಲವಿದ್ಯುತ್ ಉತ್ಪಾದನೆ ಎಲ್ಲದಕ್ಕಿಂತಲೂ ಅತ್ಯಂತ ಕಡಿಮೆ ವೆಚ್ಚದ್ದಾಗಿದ್ದು, ಯಾವುದೇ ರಾಷ್ಟ್ರೀಯ ಸಂಪನ್ಮೂಲಗಳು ಖರ್ಚಾಗುವುದಿಲ್ಲ.
ವಿದ್ಯುತ್ ಉತ್ಪಾದನೆ ನಂತರ ನೀರನ್ನು ಕೃಷಿ ಹಾಗೂ ಕುಡಿಯಲು ಬಳಕೆ ಮಾಡಬಹುದಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರ ರಬ್ಬರ್ ಡ್ಯಾಂ ನಿರ್ಮಾಣಕ್ಕೆ ಆಸಕ್ತಿ ತೋರುತ್ತಿದ್ದು, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಅಧಿಕಾರಿಗಳ ತಂಡ ಜರ್ಮನಿ, ಆಸ್ಟ್ರಿಯಾ, ಸ್ವಿಡ್ಜರ್‍ಲ್ಯಾಂಡ್ ದೇಶಗಳಿಗೆ ತೆರಳಿ ಅಲ್ಲಿ ನಿರ್ಮಿಸಲಾಗಿರುವ ರಬ್ಬರ್ ಡ್ಯಾಂಗಳ ಅಧ್ಯಯನದಲ್ಲಿ ತೊಡಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin