ಕಣಿವೆ ರಾಜ್ಯದಲ್ಲಿ ನಿಲ್ಲದ ಹಿಂಸಾಚಾರ : ಮತ್ತೆರಡು ಬಲಿ, ಸಾವಿನ ಸಂಖ್ಯೆ 67ಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Kashmir-voilence

ಶ್ರೀನಗರ,ಆ.22-ಕಾಶ್ಮೀರ ಕಣಿವೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಬಲಿಯಾದವರ ಸಂಖ್ಯೆ 67ಕ್ಕೆ ಏರಿದೆ. ಶ್ರೀನಗರದ ಹಳೇನಗರದಲ್ಲಿ ನಿನ್ನೆ ಭದ್ರತಾಪಡೆ ಜೊತೆ ನಡೆದ ಘರ್ಷಣೆಯಲ್ಲಿ ಆಶ್ರುವಾಯು ಶೆಲ್ ಸಿಡಿತದಿಂದ ಗಾಯಗೊಂಡಿದ್ದ ಯುವಕನೊಬ್ಬ ರಾತ್ರಿ ಕೊನೆಯುಸಿರೆಳೆದಿದ್ದಾನೆ. ಇದಕ್ಕೂ ಮುನ್ನ ನಡೆದ ಇನ್ನೊಂದು ಘರ್ಷಣೆಯಾಗಿ ಮತ್ತೊಬ್ಬ ಬಲಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ.   ಶ್ರೀನಗರದ ಫತೇಕಾದಲ್ ಪ್ರದೇಶದಲ್ಲಿ ಕರ್ಫ್ಯೂ ಭೇದಿಸಿ ಹಿಂಸಾಚಾರದಲ್ಲಿ ತೊಡಗಿದ್ದ ಉದ್ರಿಕ್ತ ಗುಂಪನ್ನು ಚದುರಿಸಲು ಭದ್ರತಾ ಪಡೆ ಟಿಯರ್ ಗ್ಯಾಸ್ ಶೆಲ್ ಸಿಡಿಸಿತು. ಈ ಸಂದರ್ಭದಲ್ಲಿ ಅದು ಅಬ್ದುಲ್ ಮಜೀದ್ ಎಂಬ ಪ್ರತಿಭಟನಕಾರನ ಎದೆಗೆ ಬಡಿಯಿತು. ತೀವ್ರ ಗಾಯಗೊಂಡ ಆತ ಆಸ್ಪತ್ರೆಯಲ್ಲಿ ಮೃತಪಟ್ಟ.

ಜುಲೈ 8ರಂದು ಸೇನಾಪಡೆ ಗುಂಡಿಗೆ ಬಲಿಯಾದ ಹಿಜ್ಬುಲ್ ಕಮಾಂಡರ್ ಬುರ್ಹನ್ವನಿ ಹತ್ಯೆ ಖಂಡಿಸಿ ನಿನ್ನೆ ಕೂಡ ಗುಂಪೊಂದು ಪ್ರತಿಭಟನೆಗೆ ಇಳಿದು ಕಲ್ಲು ತೂರಾಟದಲ್ಲಿ ತೊಡಗಿತ್ತು. ಪ್ರಕ್ಷುಬ್ದ ಗುಂಪನ್ನು ಚದುರಿಸಲು ಸೇನಾಪಡೆಗಳು ಬಲಪ್ರಯೋಗ ಮಾಡಿದಾಗ ಘರ್ಷಣೆ ತೀವ್ರಗೊಂಡಿತು. ಈ ಹಂತದಲ್ಲಿ ಯೋಧರು ಆಶ್ರುವಾಯು ಶೆಲ್ ಉಡಾಯಿಸಿದರು.   ಕಾಶ್ಮೀರ ಕಣಿವೆಯಲ್ಲಿ ಕರ್ಫ್ಯೂ 45ನೇ ದಿನಕ್ಕೆ ಕಾಲಿಟ್ಟಿದ್ದು, ಭದ್ರತಾಪಡೆಗಳ ಬಿಗಿ ಪಹರೆ ನಡುವೆಯೂ ಪ್ರತಿಭಟನೆ ಮತ್ತು ಕಲ್ಲು ತೂರಾಟ ಮುಂದುವರೆದಿದೆ.   ಜಮ್ಮು ಮತ್ತು ಕಾಶ್ಮೀರದ ಇನ್ನೂ ಕೆಲವು ಪ್ರದೇಶಗಳಲ್ಲಿ ಇಂದು ಕೂಡ ಕರ್ಫ್ಯು ವಿಸ್ತರಿಸಲಾಗಿದೆ. ಒಟ್ಟಾರೆ ಅಲ್ಲಿ ಬೂದಿ ಮುಚ್ಚಿದ ಕೆಂಡದಂಥ ವಾತಾವರಣ ನೆಲೆಗೊಂಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin