ಕಣ್ಣಿಗೆ ಕಾಣುತ್ತಿಲ್ಲವೇ ಕನ್ನಡ ದ್ವಜ ರೂವಾರಿ ರಾಮಮೂರ್ತಿಯವರ ಪತ್ನಿ ಕಮಲಮ್ಮನ ದಯನೀಯ ಬದುಕು..?

ಈ ಸುದ್ದಿಯನ್ನು ಶೇರ್ ಮಾಡಿ

Kamalamma--021

ಬೆಂಗಳೂರು, ನ.1- ನವೆಂಬರ್ ತಿಂಗಳು ಬಂತೆಂದರೆ ಸಾಕು ಬೀದಿ ಬೀದಿಗಳಲ್ಲಿ ಕನ್ನಡ ಧ್ವಜಗಳು ರಾರಾಜಿಸುತ್ತವೆ. ವಿಪರ್ಯಾಸವೆಂದರೆ ಧ್ವಜ ರೂಪಿಸಿದ ಮ.ರಾಮಮೂರ್ತಿಯವರ ಪತ್ನಿ ಕಮಲಮ್ಮನವರು 95 ವರ್ಷದ ಇಳಿ ವಯಸ್ಸಿನಲ್ಲಿಯೂ ಒಂಟಿಯಾಗಿ ದಯನೀಯ ಬದುಕು ಸವೆಸುತ್ತಿರುವುದು ಯಾರ ಕಣ್ಣಿಗೂ ಬೀಳದಿರುವುದು ವಿಪರ್ಯಾಸವೇ ಸರಿ. ಕನ್ನಡ ಧ್ವಜದ ಬಣ್ಣ ಮತ್ತು ವಿನ್ಯಾಸ ರೂಪಿಸಿದ ಕೀರ್ತಿ ಮ.ರಾಮಮೂರ್ತಿಯವರಿಗೆ ಸಲ್ಲುತ್ತದೆ. ಅಂತಹ ಮಹಾನುಭಾವನ ಕೈ ಹಿಡಿದ ಕಮಲಮ್ಮ ಮಾತ್ರ ಬಸವನಗುಡಿಯ ಶಾರದಾ ಕುಟೀರ ಎಂಬ ಆಶ್ರಮದಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಇವರ ಜೀವನಕ್ಕೆ ಆಧಾರವಾಗಿರುವುದು ಕೇವಲ ಸರ್ಕಾರ ನೀಡುವ ಗೌರವ ಧನ ಮಾತ್ರ.

ನವೆಂಬರ್ ತಿಂಗಳಿನಲ್ಲಿ ಶಾರದಾ ಕುಟೀರದತ್ತ ಆಗಮಿಸುವ ಕನ್ನಡ ಪ್ರೇಮಿಗಳು ಕಮಲಮ್ಮನವರಿಗೆ ಶಾಲು ಹೊದಿಸಿ ಸನ್ಮಾನಿಸಿ ಹೋದರೆ ಮತ್ತೆ ಬರುವುದು ಮುಂದಿನ ನವೆಂಬರ್ ತಿಂಗಳಿಗೇ.  ಒಂದು ಕಾಲದಲ್ಲಿ ಮುಂಚೂಣಿ ಕನ್ನಡ ಪರ ಹೋರಾಟಗಾರರಾಗಿದ್ದ ಮ.ರಾಮಮೂರ್ತಿಯವರ ಹೆಸರು ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿದೆ. ಅಂತಹ ವ್ಯಕ್ತಿ ತಲಘಟ್ಟಪುರದ ತಮ್ಮ ಜಮೀನಿನಲ್ಲಿ ಬಾವಿ ತೋಡಿಸುತ್ತಿದ್ದಾಗ ಮಣ್ಣು ಕುಸಿದು ತಮ್ಮ ಇಬ್ಬರು ಮಕ್ಕಳಾದ ಯತೀಂದ್ರ ಮತ್ತು ಮಂಜುನಾಥ ಅವರೊಂದಿಗೆ ಭೂ ಸಮಾಧಿಯಾಗಿದ್ದರು.

ಅಂದಿನಿಂದ ಇಂದಿನವರೆಗೂ ರಾಮಮೂರ್ತಿಯವರ ಪತ್ನಿ ಕಮಲಮ್ಮ ಆಶ್ರಮದಲ್ಲೇ ಜೀವನ ಸಾಗಿಸುತ್ತಿದ್ದರೂ ಸರ್ಕಾರವಾಗಲಿ, ಸಂಘ-ಸಂಸ್ಥೆಗಳಾಗಲಿ ಅವರ ನೆರವಿಗೆ ದಾವಿಸಿಯೇ ಇಲ್ಲ. ತಲಘಟ್ಟಪುರದಲ್ಲಿದ್ದ ತಮ್ಮ ಜಮೀನಿನ ದಾಖಲೆ ಪತ್ರಗಳೂ ಕಮಲಮ್ಮ ಅವರ ಬಳಿ ಇಲ್ಲ. ಅವರ ಜಮೀನು ಎಲ್ಲಿದೆಯೋ ಅವರಿಗೇ ತಿಳಿದಿಲ್ಲ. ಭೂ ವಂಚಕರು ಅವರ ಭೂಮಿಯನ್ನು ಗುಳುಂ ಮಾಡಿದ್ದಾರೋ ತಿಳಿದಿಲ್ಲ. ಆದರೆ, ಇದಾವುದರ ಪರಿವೆಯೇ ಇಲ್ಲದ ಕಮಲಮ್ಮ ಪ್ರತಿನಿತ್ಯ ತಮ್ಮ ಕುಟೀರದಿಂದ ರಾಮಕೃಷ್ಣ ಆಶ್ರಮಕ್ಕೆ ನಡೆದುಕೊಂಡೇ ಬಂದು ಪ್ರಾರ್ಥನೆ ಮಾಡಿ ಮತ್ತೆ ಕುಟೀರಕ್ಕೆ ವಾಪಸಾಗುವುದು ಅವರ ದಿನನಿತ್ಯದ ಕಾಯಕವಾಗಿದೆ.  62ನೆ ರಾಜ್ಯೋತ್ಸವದ ಸಂದರ್ಭದಲ್ಲಾದರೂ ಕನ್ನಡ ಧ್ವಜದ ರೂವಾರಿ ಎನಿಸಿದ್ದ ಮ.ರಾಮಮೂರ್ತಿಯವರ ಪತ್ನಿ ಕಮಲಮ್ಮ ಅವರ ನೆರವಿಗೆ ಸರ್ಕಾರ ದಾವಿಸುವುದೇ ಎಂದು ಕಾದು ನೋಡಬೇಕಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin