ಕಣ್ಣುರೆಪ್ಪೆ ಜೋತು ಬೀಳುವ ‘ಟೋಸಿಸ್’ ಸಮಸ್ಯೆಗೆ ಕಾರಣವೇನು..? ಪರಿಹಾರವೇನು..?

ಈ ಸುದ್ದಿಯನ್ನು ಶೇರ್ ಮಾಡಿ

Eye

ಕಣ್ಣುರೆಪ್ಪೆಯು ಜೋತು ಬೀಳುವ (ಇಳಿ ಬೀಳುವ) ಸಮಸ್ಯೆಗೆ ವೈದ್ಯಕೀಯ ಭಾಷೆಯಲ್ಲಿ ಟೋಸಿಸ್ (ಬೀಳು ರೆಪ್ಪೆ ರೋಗ) ಎಂದು ಕರೆಯುತ್ತಾರೆ. ಈ ಸಮಸ್ಯೆ ಇದ್ದಾಗ ಕಣ್ಣು ಚಿಕ್ಕದಾಗಿ ಕಾಣುತ್ತದೆ. ಇದರಿಂದ ಕಣ್ಣು ತೆರೆಯಲು ಕಷ್ಟವಾಗುತ್ತದೆ.  ಟೋಸಿಸ್ ಒಂದು ಅಥವಾ ಎರಡು ಕಣ್ಣುಗಳ ಮೇಲೆ ಪರಿಣಾಮ ಬೀರಬಹುದು. ಈ ದೋಷವು ಮಕ್ಕಳು ಮತ್ತು ದೊಡ್ಡವರಲ್ಲಿಯೂ ಕಂಡುಬರುತ್ತದೆ. ಈ ತೊಂದರೆ ಕಣ್ಣುರೆಪ್ಪೆಯು ಭಾಗಶಃ ಜೋತು ಬೀಳಬಹುದು ಅಥವಾ ಕಣ್ಣಿನ ಪಾಪೆಯನ್ನು ಪೂರ್ಣವಾಗಿ ಆವರಿಸಬಹುದು ಹಾಗೂ ಇದರಿಂದ ದೃಷ್ಟಿಗೆ ಅಡಚಣೆಯಾಗುತ್ತದೆ.

# ಟೋಸಿಸ್ ಏಕೆ ಕಾಣಿಸಿಕೊಳ್ಳುತ್ತದೆ..?
ಮಕ್ಕಳಲ್ಲಿ (ಹುಟ್ಟಿನಿಂದಲೇ ಕಂಡು ಬರುವ ರೆಪ್ಪೆ ಜೋತು ಬೀಳುವ ಸಮಸ್ಯೆ) ಉತ್ಥಾಪಕ ಸ್ನಾಯುವಿನ (ಮೇಲೆತ್ತಲು ನೆರವಾಗುವ ಮಾಂಸಖಂಡ) ದುರ್ಬಲ ಅಭಿವೃದ್ಧಿಯಿಂದಾಗಿ ಈ ತೊಂದರೆ ಕಂಡುಬರುತ್ತದೆ. ದೊಡ್ಡವರಲ್ಲಿ ಇದು ಬಹು ಕಾರಣಗಳಿಂದ ಗೋಚರಿಸುತ್ತದೆ, ಅವುಗಳೆಂದರೆ: ಗಾಯ, ಪೆಟ್ಟು, ವಯಸ್ಸು, ಅನೇಕ ವರ್ಷಗಳಿಂದ ಕಾಂಟ್ಯಾಕ್ಟ್ ಲೆನ್ಸ್‍ಗಳ ಬಳಕೆ. ಉತ್ಥಾಪಕ ಸ್ನಾಯುವನ್ನು ಉತ್ತೇಜಿಸುವ ಮೂರನೆ ನರಕ್ಕೆ ಗಾಯ ಅಥವಾ ಪೆಟ್ಟಾಗುವುದರಿಂದ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಶಸ್ತ್ರಚಿಕಿತ್ಸೆ ನಂತರ ಟೋಸಿಸ್ ಕಾಣಿಸಿಕೊಳ್ಳುವಿಕೆಯು ವಿರಳವೇನಲ್ಲ.

# ಟೋಸಿಸ್‍ನ ಲಕ್ಷಣ-ಚಿಹ್ನೆಗಳೇನು..?
ಈ ದೋಷವಿದ್ದಾಗ ಕಣ್ಣುಗಳನ್ನು ತೆರೆಯಲು ಕಷ್ಟವಾಗುತ್ತದೆ, ಕಣ್ಣುಗಳು ಆಯಾಸಗೊಳ್ಳುತ್ತವೆ, ವಿಶೇಷವಾಗಿ ಓದುವಾಗ ದಣಿವಿಗೆ ಒಳಗಾಗುತ್ತದೆ. ಕೆಲವು ಗಂಭೀರ ಪ್ರಕರಣಗಳಲ್ಲಿ ನೋಡುವುದಕ್ಕಾಗಿ ತಲೆಯನ್ನು ಹಿಂದಕ್ಕೆ ಬಾಗಿಸಬೇಕಾದ ಅಥವಾ ಬೆರಳುಗಳಿಂದ ರೆಪ್ಪೆಯನ್ನು ಮೇಲಕ್ಕೆ ಎತ್ತಬೇಕಾಗುತ್ತದೆ.

# ನರ ರೋಗ ತಜ್ಞರನ್ನು ಸಂಪರ್ಕಿಸಬೇಕಾದ ಅಗತ್ಯವಿದೆಯೇ..?
ಟೋಸಿಸ್‍ನ ಒಂದು ಪುಟ್ಟ ಭಾಗವು ನರ ರೋಗಕ್ಕೆ ಒಳಗಾಗಬಹುದಾಗಿದ್ದು, ಇದನ್ನು ತಪಾಸಣೆ ಮೂಲಕ ಪತ್ತೆ ಮಾಡಬಹುದಾಗಿದೆ. ಪರೀಕ್ಷೆ ನಡೆಸಿದ ಬಳಿಕ ಆಕ್ಯುಲೋಪ್ಲಾಸ್ಟಿ ಸರ್ಜನ್ ನಿಮ್ಮನ್ನು ನರರೋಗ ತಜ್ಞರನ್ನು ಸಂಪರ್ಕಿಸಲು ಸೂಚಿಸಬಹುದು.

Eye-02

# ಟೋಸಿಸ್‍ಅನ್ನು ಸರಿಪಡಿಸುವುದು ಏಕೆ ಮುಖ್ಯ..?
ವಯಸ್ಕರರಲ್ಲಿ ಟೋಸಿಸ್‍ನಿಂದಾಗಿ ದೃಶ್ಯ ಕ್ಷೇತ್ರದ ಭಾಗವು ಮುಚ್ಚಿಕೊಳ್ಳಬಹುದಾಗಿದ್ದು, ದೃಷ್ಟಿಗೆ ಅಡಚಣೆ ಉಂಟು ಮಾಡುತ್ತದೆ. ನೋಡುವುದಕ್ಕಾಗಿ ಜೋತು ಬಿದ್ದ ಕಣ್ಣುರೆಪ್ಪೆಯನ್ನು ಮೇಲಕ್ಕೆ ಎತ್ತುವುದರಿಂದ ಆಯಾಸವಾಗುತ್ತದೆ. ಕಣ್ಣಿಗೆ ಆಯಾಸ, ದಣಿವು ಆಗುವುದನ್ನು ತಪ್ಪಿಸಲು, ದೋಷವನ್ನು ಸರಿಪಡಿಸಲು ಹಾಗೂ ಉತ್ತಮ ದೃಷ್ಟಿಗಾಗಿ ಜನರು ಟೋಸಿಸ್ ಸಮಸ್ಯೆ ನಿವಾರಿಸುವ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮಕ್ಕಳಲ್ಲಿ, ಟೋಸಿಸ್‍ನಿಂದ ದೃಷ್ಟಿ ಬೆಳವಣಿಗೆ ಮೇಲೆ ಪರಿಣಾಮ ಉಂಟಾಗುತ್ತದೆ ಹಾಗೂ ಇದು ಮಂದದೃಷ್ಟಿ ಅಥವಾ ಮಂಜುಗಣ್ಣು (ಅಂಬ್ಲಿಯೋಪಿಯಾ) ಸಮಸ್ಯೆಗೆ ಕಾರಣವಾಗುತ್ತದೆ. ಆದಕಾರಣ, ಈ ದೋಷವನ್ನು ಆರಂಭದಲ್ಲೇ ಸರಿಪಡಿಸಬೇಕು, ಹಾಗೂ ಸೂಕ್ತ ಕನ್ನಡಕ ನೀಡಿ ವ್ಯಾಯಾಮ ಪ್ರಾರಂಭಿಸಬೇಕು. ರೋಗಿಗೆ ವಯಸ್ಸಾದರೆ ದೃಷ್ಟಿ ಸರಿಪಡಿಸಲು ಕಷ್ಟವಾಗುತ್ತದೆ. ಟೋಸಿಸ್ ಸಮಸ್ಯೆ ಇರುವ ಮಗುವಿಗೆ ದೃಷ್ಟಿಯ ನಿಖರತೆಯನ್ನು ಮËಲ್ಯಮಾಪನ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ.

# ಯಾವ ವಿಧಾನಗಳ ಮೂಲಕ ಟೋಸಿಸ್ ಸರಿಪಡಿಸಬಹುದು ..?
ಆಕ್ಯುಲೋಪ್ಲಾಸ್ಟಿ ಸರ್ಜನ್ ಕಣ್ಣಿನ ಅಳತೆಯ ಮೌಲ್ಯಾಂಕನವನ್ನು ನಡೆಸುತ್ತಾರೆ. ಹೊಲಿಗೆಗಳೊಂದಿಗೆ ಸ್ವಾಭಾವಿಕ ಸ್ನಾಯುಗಳನ್ನು ಬಲಗೊಳಿಸಲು ಸಾಧ್ಯವಾದರೆ ಇದು ಆಯ್ಕೆಯ ವಿಧಾನವಾಗಿರುತ್ತದೆ.  ಸರಿಪಡಿಸಲು ಸ್ವಾಭಾವಿಕ ಉತ್ಥಾಪಕ ಸ್ನಾಯುವು ತುಂಬಾ ದುರ್ಬಲವಾಗಿದ್ದರೆ, ಹಣೆಯ ಮಾಂಸ ಖಂಡಗಳು  ಮತ್ತು ಕಣ್ಣುರೆಪ್ಪೆಯನ್ನು ಸಂಪರ್ಕಿಸಲು ಜೋಡಣೆಯನ್ನು (ತೀರಾ ಸಾಮಾನ್ಯವಾಗಿ ಸಿಲಿಕಾನ್) ಇರಿಸಲಾಗುತ್ತದೆ. ಆನಂತರ ರೋಗಿಯು ಕಣ್ಣುರೆಪ್ಪೆಯನ್ನು ಎತ್ತಲು ಹಣೆಯ ಸ್ನಾಯುಗಳನ್ನು ಪರಿಣಾಮಕಾರಿಯಾಗಿ ಬಳಸಬಹುದು. ಸ್ನಾಯದೌರ್ಬಲ್ಯದಂಥ ಕೆಲವು ನರರೋಗಗಳಿಗೆ ಮಾತ್ರೆಗಳ ಮೂಲಕ ಚಿಕಿತ್ಸೆ ನೀಡಬಹುದಾಗಿದೆ.  ವಿರಳ ಪ್ರಕರಣಗಳಲ್ಲಿ, ಕೆಲವು ಟೋಸಿಸ್ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುವುದು ಸುರಕ್ಷಿತವಲ್ಲ. ಇಂಥ ರೋಗಿಗಳಿಗೆ ಕಣ್ಣು ತೆರೆಯಲು ನೆರವಾಗುವ ಕನ್ನಡಕಗಳನ್ನು ಬಳಸಲು ಶಿಫಾರಸು ಮಾಡಲಾಗುತ್ತದೆ.

# ಟೋಸಿಸ್ ಶಸ್ತ್ರಚಿಕಿತ್ಸೆಯ ಫಲಿತಾಂಶಗಳೇನು..?
ಟೋಸಿಸ್ ಶಸ್ತ್ರಕ್ರಿಯೆ ಆದ ಮೇಲೆ ಅಂತಿಮ ಫಲಿತಾಂಶವು 6 ವಾರಗಳ ನಂತರ ಕಂಡುಬರುತ್ತದೆ. ಪ್ರತಿಯೊಬ್ಬರ ದೇಹವು ಸ್ವಲ್ಪ ವಿಭಿನ್ನ ರೀತಿಯಲ್ಲಿ ಚೇತರಿಸಿಕೊಳ್ಳುವುದೇ ಇದಕ್ಕೆ ಕಾರಣ ಹತ್ತು ರೋಗಿಗಳಲ್ಲಿ ಎಂಟು ಮಂದಿಯ ಕಣ್ಣುರೆಪ್ಪೆಗಳನ್ನು ಸರಿಯಾದ ಸ್ಥಳಕ್ಕೆ ಎತ್ತಿ ಕೂರಿಸಬಹುದಾಗಿದೆ. ಇಬ್ಬರು ರೋಗಗಳಿಗೆ ಸ್ವಲ್ಪ ಮೇಲೆ ಅಥವಾ ಕೆಳಗೆ ಕಣ್ಣುರೆಪ್ಪೆ ಇರಬಹುದು. ಸಾಮಾನ್ಯವಾಗಿ ರೋಗಿಯು ನೇರವಾಗಿ ನೋಡಿದಾಗ ಕಣ್ಣುರೆಪ್ಪೆಗಳು ಎತ್ತರಕ್ಕೆ ಸಮನಾಗಿರುತ್ತದೆ. ಆದರೆ, ರೋಗಿಯು ಮೇಲಕ್ಕೆ ಅಥವಾ ಕೆಳಗೆ ನೋಡಿದಾಗ ಕೆಲವು ವ್ಯತ್ಯಾಸ ಕಂಡುಬರುತ್ತದೆ. ಇನ್ನು ಕೆಲವು ರೋಗಿಗಳಲ್ಲಿ, ಶಸ್ತ್ರಚಿಕಿತ್ಸೆ ನಂತರ ರೋಗಿಯು ಮಲಗಿದ್ದಾಗ ಕಣ್ಣುಗುಡ್ಡೆಗಳಲ್ಲಿ ಸ್ವಲ್ಪ ಅಂತರ ತೆರೆದುಕೊಂಡಿರಬಹುದಾಗಿರುತ್ತದೆ. ಸಿಲಿಕಾನ್ ತೂಗುದಾರ ಬಳಸಿದಾಗ, ಹೊಂದಾಣಿಕೆಗೆ ಅನುಕೂಲವಾಗಿದ್ದು, ಸ್ವಾಭಾವಿಕ ಕಣ್ಣು ಮಿಟುಕಿಸುವಿಕೆಗೆ ಸಹಕಾರಿಯಾಗುತ್ತದೆ. ಅಗತ್ಯವಿದ್ದರೆ ಇದನ್ನು ಮರು ಹೊಂದಾಣಿಕೆ ಮಾಡಬಹುದಾಗಿದೆ.

# ಶಸ್ತ್ರಚಿಕಿತ್ಸೆಯಿಂದ ಕಲೆ ಉಳಿದುಕೊಳ್ಳುತ್ತದೆಯೇ..?
ಸ್ನಾಯುವನ್ನು ಬಲಗೊಳಿಸುವ ಶಸ್ತ್ರಚಿಕಿತ್ಸೆಯಲ್ಲಿ ರೆಪ್ಪೆ ಗೆರೆಯಲ್ಲಿ ಸೂಕ್ಷ್ಮ ದಾರವನ್ನು ಇರಿಸಲಾಗುತ್ತದೆ. ಇದರಿಂದ ಅದು ಕಣ್ಣಿಗೆ ಕಾಣುವುದಿಲ್ಲ ಹಾಗೂ ಸಾಮಾನ್ಯವಾಗಿ ತೀರಾ ಮಸುಕಾದ ಕಲೆಯನ್ನು ಉಳಿಸುತ್ತದೆ. ಸ್ಲಿಂಗ್ ಸರ್ಜರಿ (ತೂಗುದಾರ ಶಸ್ತ್ರಕ್ರಿಯೆ) ವಿಧಾನದಲ್ಲಿ ಎತ್ತುವ ಸ್ನಾಯುವಿನ ಮೂರು ಕಡೆ ಹೊಲಿಗೆಗಳನ್ನು ಹಾಕಲಾಗುತ್ತದೆ ಹಾಗೂ ಎದ್ದು ಕಾಣುವ ಕಲೆ ಉಳಿಯುವುದು ತೀರಾ ವಿರಳ.

# ಜಟಿಲತೆಗಳು ಮತ್ತು ಗಂಡಾಂತರಗಳೇನು..?
ಶಸ್ತ್ರಚಿಕಿತ್ಸೆ ನಂತರ ಮೊದಲ ಕೆಲವು ವಾರಗಳ ವರೆಗೆ ಕಲೆ ಮತ್ತು ಅಲ್ಪ ಊತ ಕಂಡುಬರುತ್ತದೆ ಹಾಗೂ ಕೆಲವು ವಾರಗಳ ಬಳಿಕ ಅವು ಉಪಶಮನಗೊಳ್ಳುತ್ತವೆ. ರಕ್ತಸ್ರಾವ ಮತ್ತು ಸೋಂಕು ವಿರಳ. ಅಪರೂಪದ ಪ್ರಕರಣಗಳಲ್ಲಿ ಮತ್ತೆ ಗೋಚರಿಸುವ ಟೋಸಿಸ್‍ಗೆ ಮತ್ತೆ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ.
ಶಸ್ತ್ರಚಿಕಿತ್ಸೆ ನಡೆಸಿದ ತಕ್ಷಣ ನೇತ್ರ ಶುಷ್ಕತೆ ಸಾಧ್ಯತೆ ಇರುತ್ತದೆ. ಕಣ್ಣು ಒಣಗುವುದನ್ನು ತಡೆಯಲು ಒಂದು ತಿಂಗಳ ಕಾಲ ಐ ಡ್ರಾಪ್‍ಗಳನ್ನು ರೋಗಿಯು ಬಳಸಬೇಕಾಗುತ್ತದೆ. ಕಣ್ಣು ವಿಪರೀತ ಕೆಂಪಾಗಿದ್ದರೆ, ನೋವು ಕಂಡುಬಂದರೆ ಮತ್ತು ಕಣ್ಣಿನಲ್ಲಿ ನೀರು ತುಂಬಿಕೊಂಡರೆ, ರೋಗಿಯು ತಕ್ಷಣ ನೇತ್ರ ತಜ್ಞರನ್ನು ಸಂಪರ್ಕಿಸಬೇಕು.

Facebook Comments

Sri Raghav

Admin