ಕಣ್ಮರೆಯಾದ ಬಡವರ ಫ್ರಿಡ್ಜ್

ಈ ಸುದ್ದಿಯನ್ನು ಶೇರ್ ಮಾಡಿ

Mud-Pot

ಆಧುನಿಕ ಆಹಾರ ಶೈಲಿಯಿಂದ ಹೆಸರೇಳಲಾಗಂತಹ ಕಾಯಿಲೆಗಳು ನಮ್ಮನ್ನು ಕಾಡುತ್ತಿವೆ. ಅತಿಯಾದ ಆಹಾರ ಕಲಬೆರಕೆ ಹಾಗೂ ಹೆಚ್ಚಿದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಸೇವಿಸುವ ಆಹಾರವೆಲ್ಲ ವಿಷವಾಗಿ ಪರಿಣಮಿಸಿದೆ.  ಮಾನವ ಒಂದು ದಿನ ಆಹಾರವಿಲ್ಲದಿದ್ದರೂ ನೀರು ಕುಡಿದು ಬದುಕಬಹುದು. ಆದರೆ, ಆ ನೀರು ಕೂಡ ಇತ್ತೀಚೆಗೆ ಮಲಿನವಾಗಿದೆ. ಇನ್ನೇನು ತಿಂದು ಬದುಕಬೇಕೊ ಗೊತ್ತಿಲ್ಲ. ಬೇಸಿಗೆ ಕಾಲ ಪ್ರಾರಂಭವಾದರೆ ಸಾಕು ನಾವು ಆಹಾರಕ್ಕಿಂತ ನೀರನ್ನೆ ಹೆಚ್ಚಾಗಿ ಬಳಸುತ್ತೇವೆ. ಮಳೆಯ ಕೊರತೆಯಿಂದ ಅಂತರ್ಜಲ ಮಟ್ಟ ಪಾತಾಳ ತಲುಪಿದ್ದು, ಪ್ಲೊರೈಡ್‍ಯುಕ್ತ ನೀರು ಸೇವನೆಯಿಂದ ಇದು ಕೂಡ ವಿಷವಾಗುತ್ತಿದೆ.

ಹಾಗಾಗಿ ವೈದ್ಯರು ಶುದ್ಧೀಕರಿಸಿದ ನೀರನ್ನು ಸೇವಿಸಿ ಎಂದು ಸಲಹೆ ಮಾಡುತ್ತಿದ್ದಾರೆ. ಇದಕ್ಕಾಗಿ ಹಲವಾರು ನೀರು ಶುದ್ಧೀಕರಣ ಯಂತ್ರಗಳು (ವಾಟರ್ ಪ್ಯೂಯರ್) ಮಾರುಕಟ್ಟೆಗೆ ಬಂದಿವೆ. ಬೇಸಿಗೆ ಕಾಲದಲ್ಲಿ ಇವುಗಳ ಮಾರಾಟ ಜೋರಾಗಿಯೇ ನಡೆಯತ್ತವೆ. ಉಳ್ಳವರು ಈ ಯಂತ್ರಗಳನ್ನು ಖರೀದಿಸುತ್ತಾರೆ. ಆದರೆ, ಬಡವರ ಪಾಡೇನು..? ಇವರಿಗೂ ಒಂದು ಉಪಾಯವಿದೆ. ಅದು ಏನಂತೀರಾ..? ಅದೇ ಬಡವರ ಫ್ರಿಡ್ಜ್ ಎಂದು ಕರೆಸಿಕೊಳ್ಳುವ ಊಜಿ ಅಥವಾ ಮಣ್ಣಿನ ಕೊಡ. ಇದೇನ್ರಿ ಇಂದು ಬಗೆ ಬಗೆಯ ಆಕರ್ಷಣೀಯ ಸ್ಟಿಲ್ ಪಾತ್ರೆಗಳು ಅಡುಗೆ ಮನೆಯನ್ನು ಪ್ರವೇಶಿಸಿರುವಾಗ ಮಣ್ಣಿನ ಮಡಕೆ ಯಾರು ಬಳಸುತ್ತಾರೆ ಎಂದು ಉಬ್ಬು ಎಗರಿಸಬೇಡಿ, ನಿರ್ಲಕ್ಷ್ಯ ಕೂಡ ಮಾಡಬೇಡಿ. ಇದರಲ್ಲಿರುವ ಆರೋಗ್ಯದ ಗುಟ್ಟೆ ಬೇರೆ.

ಅದೃಷ್ಟವೊ, ದುರಾದೃಷ್ಟವೊ ಗೊತ್ತಿಲ್ಲ. ನಮ್ಮ ಜನ ತಿಳಿಯದೆ ಮಣ್ಣಿನ ಮಡಕೆಗಳನ್ನು ಮನೆಯ ಸೌಂದರ್ಯ ಹೆಚ್ಚಿಸಿಕೊಳ್ಳಲು ಬಳಸುತ್ತಿದ್ದಾರೆ.  ಒಮ್ಮೆ ಮಡಕೆ ಊಜಿ ನೀರನ್ನು ಕುಡಿದು ನೋಡಿ ಅದರ ರುಚಿಯೇ ಬೇರೆ. ಹಾಗಾಗಿಯೇ ಗ್ರಾಮೀಣರು ಹಿಂದೆ ಮಡಕೆಯಲ್ಲಿ ಸಂಗ್ರಹಿಸಿಟ್ಟಿದ್ದ ನೀರಿನಿಂದ ಆಹಾರ ಸೇವಿಸುತ್ತಿದ್ದರು. ಆದ್ದರಿಂದಲೇ ಹೆಚ್ಚು ಆರೋಗ್ಯವಾಗಿರುತ್ತಿದ್ದರು. ಆದರೆ, ಇಂದು ಅವುಗಳ ಬಳಕೆ ಅವಮಾನದಂತಾಗಿದೆ.  ನಿಮಗೆ ಅನುಮಾನವಿದ್ದರೆ ಒಂದು ಮಡಕೆಯಲ್ಲಿ ತರಕಾರಿ ಇಟ್ಟು ನೋಡಿ ಬಹಳ ದಿನ ಕೆಡುವುದಿಲ್ಲ. ಇದು ಆಧುನಿಕ ಫ್ರಿಡ್ಜ್‍ಗಳಿಗೆ ಸವಾಲು ಹಾಕುತ್ತವೆ. ತರಕಾರಿ ಅಷ್ಟೆ ಅಲ್ಲ, ದಿನಸಿ ಸಾಮಗ್ರಿಗಳನ್ನು ಮಡಕೆಯಲ್ಲಿಟ್ಟರೆ ಯಾವುದೆ ಕ್ರಿಮಿ-ಕೀಟಗಳು ಹೋಗಲು ಸಾಧ್ಯವಿಲ್ಲ. ಇಂತಹ ಬಹುಪಯೋಗಿ ಮಡಕೆ ಕಸುಬು ಇತಿಹಾಸ ಪುಟ ಸೇರುತ್ತಿರುವುದು ವಿಷಾದನೀಯ.

ಸಂಕಷ್ಟದಲ್ಲಿ ಕುಂಬಾರರ ಬದುಕು, ರಾಜ್ಯದ ಬಹುತೇಕ ಭಾಗಗಳಲ್ಲಿ ಕುಂಬಾರರ ಜನಾಂಗವಿದ್ದು, ಅದರಲ್ಲೂ ತುಮಕೂರು ಜಿಲ್ಲೆಯ ಕೋಳಾಲ, ದೊಡ್ಡಬಳ್ಳಾಪುರ, ಮೇಳೆಕೋಟೆ, ಕೊರಟಗೆರೆ ಸೇರಿದಂತೆ ಮತ್ತಿತರ ಕಡೆ ಕುಂಬಾರಿಕೆಯನ್ನೆ ಕುಲಕಸುಬಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರ ಬದುಕು ಇಂದು ಮೂರಾಬಟ್ಟೆಯಾಗಿದೆ. ಕಾರಣ, ಆಧುನಿಕತೆ ಭರಾಟೆಯಲ್ಲಿ ಕುಂಬಾರರು ತಮ್ಮ ಕುಲ ಕಸುಬನ್ನು ಬಿಟ್ಟು ಇಂದು ಅನ್ಯ ಕಸುಬುಗಳನ್ನು ಪ್ರಾರಂಭಿಸಿದ್ದಾರೆ.
ಇದರ ಬಗ್ಗೆ ಹಲವು ವರ್ಷಗಳಿಂದ ಮಡಕೆ, ಕುಡಿಕೆ, ವಾಡೆ, ಹೂಜಿ, ಪಾಟುಗಳನ್ನು ಮಾಡಿಕೊಂಡು ಬರುತ್ತಿದ್ದ ಕೋಳಾಲ ಗ್ರಾಮದ ರುದ್ರಯ್ಯ ಅವರು ಅಯ್ಯೋ ನಮ್ಮ ಕುಲಕಸುಬಿನ ಬಗ್ಗೆ ಏನ್ ಹೇಳೋದು ಸ್ವಾಮಿ, ತರೇವಾರಿ ಸ್ಟೀಲ್ ಪಾತ್ರೆಗಳ ಆಗಮನದಿಂದ ನಮ್ಮ ಮಣ್ಣಿನ ಮಡಕೆಗಳು ಮೂಲೆ ಸೇರಿವೆ.
ಇನ್ನು ಮಡಕೆ ಮಾಡಲು ಬಳಸುತ್ತಿದ್ದ ಟಿಗ್ರಿ, ಸೋಳ, ಅಚ್ಚುಗಳೆಲ್ಲ ಮಾಯವಾಗಿವೆ. ನಾವೂ ಕಸುಬನ್ನು ಬಿಟ್ಟು ಬೇರೆ ಕೆಲಸ ಮಾಡುತ್ತಿದ್ದೇವೆ. ನಾವು ಕೆಲಸ ಮಾಡಬೇಕಾದರೆ ಒಂದು ಹೂಜಿ ಬೆಲೆ ಅಮ್ಮಾಮ್ಮ ಅಂದ್ರೆ 10, 20 ಹೆಚ್ಚು ಅಂದ್ರೆ 50 ರೂ. ಆದ್ರೆ ಇಂದು ಬೆಲೆ ಕೇಳಿದರೆ ಎದೆ ಜಲ್ ಅನ್ನುತ್ತದೆ. ಮೊನ್ನೆ ನಾನೇ 150 ರೂ. ನೀಡಿ ಒಂದು ಸಣ್ಣದಾದ ಅರಿವೆಯನ್ನು ತಂದಿದ್ದೇನೆ ಎಂದರು.

ನಾವು ಮಡಕೆ ಮಾಡಲು ಪಡುತ್ತಿದ್ದ ಕಷ್ಟ ಅಷ್ಟಿಷ್ಟಲ್ಲ. ಎಲ್ಲೋ ಕೆರೆಯಿಂದ ಯೋಗ್ಯವಾದ ಜೇಡಿ ಮಣ್ಣು ತಂದು ಅದನ್ನು ಚೆನ್ನಾಗಿ ಹದ ಮಾಡಿ ಟಿಗ್ರಿಯಲ್ಲಿ ಒಂದು ರೂಪ ಕೊಟ್ಟು ನಂತರ ಫೈನಲ್ ಟಚ್ ಕೊಟ್ಟು ಒಣಗಿಸಿ ನಂತರ ಆವಿಗೆಯಲ್ಲಿ ಸುಟ್ಟು ಮಾರಾಟಕ್ಕೆ ಸಿದ್ಧ ಮಾಡುತ್ತಿದ್ದೆವು. ಇಂದು ಕೆರೆಯಲ್ಲಿ ಮಣ್ಣು ಇಲ್ಲ, ಮಾಡೋರೂ ಇಲ್ಲ, ಕೊಳ್ಳುವವರು ಮೊದಲೇ ಇಲ್ಲ. ಹಾಗಾಗಿ ಅನಿವಾರ್ಯವಾಗಿ ನಮ್ಮ ಕಸುಬನ್ನು ಸಂಪೂರ್ಣವಾಗಿ ಬಿಡಲೇಬೇಕಾಗಿದೆ.  ನಗರದ ರಸ್ತೆ ಬದಿಯಲ್ಲಿ ಇತ್ತೀಚೆಗೆ ಸುಂದರವಾಗಿ ಜೋಡಿಸಿಟ್ಟಿರುವ ಮಣ್ಣಿನ ಮಡಕೆಗಳು ನೋಡುಗರನ್ನು ಆಕರ್ಷಿಸುತ್ತಿವೆ. ಮಣ್ಣಿನ ಮಡಿಕೆ (ಫಿಲ್ಟರ್)ಗಳಲ್ಲಿ ನೀರು ಸಂಗ್ರಹಿಸಿಟ್ಟುಕೊಂಡು ಕುಡಿದರೆ ಉತ್ತಮ ಆರೋಗ್ಯ ವೃದ್ಧಿಸುತ್ತದೆ ಎಂಬ ಕಾರಣದಿಂದ ಕೆಲವರು ಮಣ್ಣಿನ ಫಿಲ್ಟರ್‍ನತ್ತ ಮುಖ ಮಾಡಿರುವುದು ಕಂಡು ಬರುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಹಲವು ಬಗೆಯ ಫಿಲ್ಟರ್‍ಗಳು ಬಂದಿರುವುದರಿಂದ ಮಣ್ಣಿನ ಫಿಲ್ಟರ್ ಸೇರಿದಂತೆ ಪಾತ್ರೆಗಳನ್ನು ಬಳಸುವವರ ಸಂಖ್ಯೆ ಕ್ಷೀಣವಾಗುತ್ತಿದೆಯಾದರೂ ನೋಡಲು ಆಕರ್ಷಕವಾಗಿದ್ದರೆ, ಅಂಥ ವಸ್ತುಗಳನ್ನು ಖರೀದಿಸುವವರು ವಿನ್ಯಾಸಪ್ರಿಯರಿದ್ದಾರೆ. ಇಂತಹವರಿ ಗಾಗಿಯೇ ವ್ಯಾಪಾರಿಗಳು ಆಕರ್ಷಕ, ಕಲಾತ್ಮಕ ಮಣ್ಣಿನ ಫಿಲ್ಟರ್‍ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.  ನೋಡಲು ಆಕರ್ಷಣೀಯವಾಗಿ ಜತೆಗೆ ಮನೆಯಲ್ಲಿ ಅಲಂಕಾರಿಕ ವಸ್ತುಗಳ ಸ್ಥಾನ ತುಂಬುವುದರಿಂದ ಒಂದಷ್ಟು ಜನ ಈ ಫಿಲ್ಟರ್‍ಗಳನ್ನು ಖರೀದಿಸಿ ಮನೆಗೆ ಕೊಂಡೊಯ್ಯುತ್ತಿದ್ದಾರೆ. ಇಲ್ಲಿರುವ ಫಿಲ್ಟರ್‍ಗಳು ಬಣ್ಣ, ವಿನ್ಯಾಸ ಮತ್ತು ಕಲಾತ್ಮಕ ಚಿತ್ರಗಳಿಂದ ವಿಭಿನ್ನವಾಗಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin