ಕದ್ದೊಯ್ಯುತ್ತಿದ್ದ 15 ಲಕ್ಷ ಮೌಲ್ಯದ ಸಿದ್ಧ ಉಡುಪು ವಶ : ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

3-Arrestefd

ಬೆಂಗಳೂರು, ಆ.23- ಸಿದ್ಧ ಉಡುಪುಗಳನ್ನು ಕಳವು ಮಾಡಿಕೊಂಡು ಆಟೋದಲ್ಲಿ ಹೋಗುತ್ತಿದ್ದ ಮೂವರನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿ 15 ಲಕ್ಷ ರೂ. ಬೆಲೆಯ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.  ಶ್ರೀರಾಮಪುರದ ಶ್ರೀನಿವಾಸ್ (28), ವಿನಯ್ (29) ಮತ್ತು ಕುರುಬರಹಳ್ಳಿಯ ಭರತ್ (23) ಬಂಧಿತ ಆರೋಪಿಗಳು.  ಮಲ್ಲೇಶ್ವರಂ ವ್ಯಾಪ್ತಿಯ 8ನೆ ಕ್ರಾಸ್ ಬಳಿ ಅಪೆ ಆಟೋದಲ್ಲಿ ತುಂಬಿರುವ ಚೀಲಗಳನ್ನಿಟ್ಟುಕೊಂಡು 8ನೆ ಕ್ರಾಸ್ನಲ್ಲಿ ಅನುಮಾನಾಸ್ಪದವಾಗಿ ಈ ಮೂವರು ಹೋಗುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ಅನುಮಾನಗೊಂಡು ಆಟೋ ತಡೆದು ಪರಿಶೀಲಿಸುತ್ತಿದ್ದಂತೆ ಆಟೋ ಇಳಿದು ಒಬ್ಬಾತ ಪರಾರಿಯಾಗಿದ್ದಾನೆ.

ಈ ವೇಳೆ ಮೂವರನ್ನು ಬಂಧಿಸಿ ಆಟೋದಲ್ಲಿದ್ದ 15 ಲಕ್ಷ ರೂ. ಬೆಲೆಯ ಸಿದ್ಧ ಉಡುಪುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಅಪೆ ಲಗೇಜ್ ಆಟೋ, ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಆ.3ರಂದು ಕೆಂಗೇರಿಯ ಸ್ಪೀಡಕ್ಸ್ ಟ್ರಾನ್ಸ್ ಕೆರಿಯರ್ ಪ್ರೈವೇಟ್ ಲಿಮಿಟೆಡ್ನ ಗೋಡೌನ್ನಲ್ಲಿ ಲಾರಿಗೆ ಸಿದ್ಧ ಉಡುಪುಗಳನ್ನು ಲೋಡ್ ಮಾಡುತ್ತಿದ್ದುದನ್ನು ಗಮನಿಸಿ ದ್ವಿಚಕ್ರ ವಾಹನ ಹಾಗೂ ಲಗೇಜ್ ಆಟೋದಲ್ಲಿ 5 ಜನ ಹಿಂಬಾಲಿಸಿಕೊಂಡು ಜಾಲಹಳ್ಳಿಯ ಎಂಇಎಸ್ ರೈಲ್ವೆ ಗೇಟ್ ಬಳಿ ನಿಲ್ಲಿಸಿದ್ದ ಲಾರಿಯನ್ನು ಹತ್ತಿ ಚಾಲಕನಿಗೆ ಹೊಡೆದು ಕೈ-ಕಾಲು ಕಟ್ಟಿ ಸೀಟಿನ ಹಿಂಬದಿ ಮಲಗಿಸಿ ತದನಂತರ ಲಾರಿಯನ್ನು ಚಾಲನೆ ಮಾಡಿಕೊಂಡು ಹೋಗಿದ್ದರು.

ಮಾರ್ಗಮಧ್ಯೆ ನಾಗಮಂಗಲದ ಬಳಿ ಲಾರಿ ನಿಲ್ಲಿಸಿ ಅದರಲ್ಲಿದ್ದ ಸಿದ್ಧ ಉಡುಪುಗಳ ಪೈಕಿ ಕೆಲವು ಸಿದ್ಧ ಉಡುಪುಗಳನ್ನು ಅಪೆ ಲಗೇಜ್ ಆಟೊದಲ್ಲಿ ತುಂಬಿಕೊಂಡು ಇಬ್ಬರು ಬೆಂಗಳೂರಿಗೆ ಬಂದಿದ್ದರು. ಉಳಿದ ಮೂವರು ಮಾಲು ಸಮೇತ ಲಾರಿಯನ್ನು ಚಲಾಯಿಸಿಕೊಂಡು ಕೊಡಗು ಜಿಲ್ಲೆಯ ಶುಂಠಿಕೊಪ್ಪ ಪೊಲೀಸ್ ಠಾಣೆ ಸರಹದ್ದಿನಲ್ಲಿ ನಿಲ್ಲಿಸಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ.  ಮಲ್ಲೇಶ್ವರಂ ಠಾಣೆ ಇನ್ಸ್ಪೆಕ್ಟರ್ ವೆಂಕಟಾಚಲಯ್ಯ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin