ಕದ್ದ ಬೈಕ್ಗಳಲ್ಲಿ ಸರಣಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Arrest

ಬೆಂಗಳೂರು,ಸೆ.23- ರಸ್ತೆಯಲ್ಲಿ ಒಂಟಿಯಾಗಿ ನಡೆದು ಹೋಗುತ್ತಿದ್ದ ಸಾರ್ವಜನಿಕರನ್ನು ಸರಣಿ ದರೋಡೆ ಮಾಡಿ ಪರಾರಿಯಾಗುತ್ತಿದ್ದ ದರೋಡೆಕೋರರ ಗ್ಯಾಂಗ್ವೊಂದನ್ನು ಆರ್ಎಂಸಿಯಾರ್ಡ್ ಪೊಲೀಸರು ಬಂಧಿಸಿದ್ದಾರೆ.  ಕೆ.ಜಿ.ಹಳ್ಳಿಯ ಅಯೂಬ್ ಖಾನ್ (19) ಶಿವಾಜಿನಗರದ ಖಾಖಾ ಮೊಯಿನ್(23), ನದೀಮ್ ಷರೀಫ್(23), ಮೊಹಮದ್ ಆವೇಜ್(18), ಫರ್ಹಾನ್ ಖಾನ್(19) ಮತ್ತು ಮಹಮದ್ ಖಾಷೀಸ್(18) ಬಂಧಿತ ದರೋಡೆಕೋರರು.  ಆರೋಪಿಗಳಿಂದ 15,100 ನಗದು ಸೇರಿದಂತೆ ಮೂರು ಲಕ್ಷ ರೂ. ಬೆಲೆಯ 20 ಮೊಬೈಲ್, ಕಳ್ಳತನ ಮಾಡಿದ್ದ ನಾಲ್ಕು ಬಜಾಜ್ ಪಲ್ಸರ್ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಇವರ ಬಂಧನದಿಂದ ಆರ್ ಎಂಸಿಯಾರ್ಡ್, ಪೀಣ್ಯ ವಾಪ್ತಿಯ ಪ್ರಕರಣ, ಮಲ್ಲೇಶ್ವರಂ ಯಶವಂಪುರದಲ್ಲಿ ನಡೆದ ನಾಲ್ಕು ಪ್ರಕರಣ ಹಾಗೂ ಚಿಕ್ಕಪೇಟೆ, ರಾಜಾಜಿನಗರ, ಕೊಡಿಗೆಹಳ್ಳಿ, ಅಮೃತಹಳ್ಳಿ ವ್ಯಾಪ್ತಿಯಲ್ಲಿ ನಡೆದಿದ್ದ ನಾಲ್ಕು ಬೈಕ್ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.  ಆರೋಪಿಗಳು ಕಳ್ಳತನ ಮಾಡಿದ್ದ ಬೈಕ್ಗಳನ್ನು ದರೋಡೆಗೆ ಬಳಸುತ್ತಿದ್ದರು. ಮೂರು ಬೈಕ್ಗಳಲ್ಲಿ ಆರು ಜನ ನಗರದ ವಿವಿಧೆಡೆ ಸುತ್ತಾಡುತ್ತ ದರೋಡೆ ಮಾಡುತ್ತಿದದ್ದು ವಿಚಾರಣೆಯಿಂದ ತಿಳಿದುಬಂದಿದೆ.

ಸೆಪ್ಟೆಂಬರ್ 18ರಂದು ಬೆಳಗಿನ ಜಾವ 2.10ರಲ್ಲಿ ಆರ್ಎಂಸಿಯಾರ್ಡ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಗಸ್ತಿನಲ್ಲಿದ್ದಾಗ ಬಜಾಜ್, ಪಲ್ಸರ್ ಮೋಟಾರ್ ಬೈಕ್ಗಳಲ್ಲಿ 6 ಮಂದಿಯ ಗ್ಯಾಂಗ್ ಉತ್ತರ ವಿಭಾಗದಲ್ಲಿ ಆರು ಸರಣಿ ದರೋಡೆ ಮಾಡಿ ಪರಾರಿಯಾಗುತ್ತಿದ್ದ ಬಗ್ಗೆ ಮಾಹಿತಿ ಲಭಿಸಿದೆ.  ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ದರೋಡೆಕೋರರನ್ನು ಬೆನ್ನತ್ತಿದಾಗ ಆರೋಪಿಗಳು ಪೊಲೀಸರಿಗೆ ಲಾಂಗುಮಚ್ಚು ತೋರಿಸಿ ಅವರ ಮೇಲಿಯೇ ಹಲ್ಲೆ ಮಾಡಲು ಮುಂದಾದರು.  ತಕ್ಷಣ ಇನ್ಸ್ಪೆಕ್ಟರ್ ಮೊಹಮ್ಮದ್ ಮುಕಾರಮ್ ಅವರು ತಮ್ಮ ಸರ್ವೀಸ್ ಪಿಸ್ತೂಲಿನಿಂದ ಮೂರು ಸುತ್ತು ಗುಂಡು ಹಾರಿಸಿ ದರೋಡೆಕೋರರ ಪೈಕಿ ಅಯೂಬ್ ಖಾನ್ ಎಂಬಾತನನ್ನು ಬೈಕ್ ಸಮೇತ ಹಿಡಿದು ತೀವ್ರ ವಿಚಾರಣೆಗೊಳಪಡಿಸಿದಾಗ ತನ್ನ ಗ್ಯಾಂಗ್ನ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈತನ ಹೇಳಿಕೆ ಮೇರೆಗೆ ಇನ್ನುಳಿದ ಆರೋಪಿಗಳನ್ನು ಬಂಧಿಸುವಲ್ಲಿ ಆರ್ಎಂಸಿಯಾರ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೂಚನೆ: ರಾತ್ರಿ ವೇಳೆ ಮೊಬೈಲ್ ದರೋಡೆಯಾಗಿದ್ದು ಮೊಬೈಲ್ ಕಳೆದುಕೊಂಡವರು ಯಾರಾದರೂ ಇದ್ದಲ್ಲಿ ಉತ್ತರ ವಿಭಾಗದ ಡಿಸಿಪಿ ಲಾಬೂರಾಮ್ ಅಥವಾ ಆರ್ಎಂಸಿಯಾರ್ಡ್ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin