ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi-Speech--01

ಉಜಿರೆ, ಅ.29-ಡಿಜಿಟಲ್ ಇಂಡಿಯಾ, ಕ್ಯಾಶ್‍ಲೆಸ್(ನಗದು ರಹಿತ) ವಹಿವಾಟನ್ನು ದೇಶದ ಜನತೆ ಒಪ್ಪಿಕೊಂಡಿದ್ದು, 2022ರ ವೇಳೆಗೆ ಇಡೀ ಭಾರತವನ್ನು ನಗದು ರಹಿತ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.  ವಿಶ್ವದಲ್ಲಿ ಅನೇಕ ರಾಷ್ಟ್ರಗಳು ಇಂದು ನಗದು ರಹಿತವಾಗಿವೆ. ನಮ್ಮಲ್ಲೂ ಕೂಡ ಡಿಜಿಟಲ್ ಇಂಡಿಯಾ ಹಾಗೂ ನಗದು ರಹಿತ ವ್ಯವಹಾರವನ್ನು ಜನತೆ ಹಂತ ಹಂತವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಇದರಿಂದ ಭಾರತಕ್ಕೆ ಉಜ್ವಲ ಭವಿಷ್ಯವಿದೆ ಎಂದು ನುಡಿದರು.  ಇಲ್ಲಿನ ರತ್ನವರ್ಮ ಕ್ರೀಡಾಂಗಣದಲ್ಲಿ ಧರ್ಮಸ್ಥಳದ ಗ್ರಾಮೀಣಾಭಿವೃದ್ದಿ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ರುಪೇ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಸುದೀರ್ಘ ಭಾಷಣದಲ್ಲಿ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದರು.

ನಾವು ನೋಟು ಅಮಾನೀಕರಣದಂತಹ ದಿಟ್ಟ ನಿರ್ಧಾರ ಕೈಗೊಂಡಾಗ ದೇಶದ ಅನೇಕ ಜನ ನಮ್ಮನ್ನು ಪ್ರಶ್ನೆ ಮಾಡಿದರು. ಪ್ರಧಾನಿಯವರು ಏಕೆ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ನನಗೆ ಪ್ರತಿದಿನ ಎಲ್ಲೆಡೆ ಪ್ರಶ್ನೆಗಳು ಬರುತ್ತಿದ್ದವು. ಈಗ ನನ್ನ ನಿರ್ಧಾರ ಸರಿಯಾಗಿದೆಯೇ ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ ತೆಗೆದುಕೊಂಡ ಕೆಲವು ದಿಟ್ಟ ನಿರ್ಧಾರದಿಂದಾಗಿ ಭ್ರಷ್ಟರು, ಕಾಳದಂಧೆಕೋರರು ಚಡಪಡಿಸುತ್ತಿದ್ದಾರೆ. ನಮ್ಮ ಯೋಜನೆಗಳು ಸಿಂಹಸ್ವಪ್ನವಾಗಿದ್ದರಿಂದಲೇ ಅವರು ವಿರೋಧಿಸುತ್ತಿದ್ದಾರೆ. ದೇಶದಲ್ಲಿ ಡಿಜಿಟಲೀಕರಣದಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ ಎಂಬುದನ್ನು ಯಾರೊಬ್ಬರು ಮರೆಯಬಾರದು ಎಂದರು.

ದೇಶದಲ್ಲಿ ಪ್ರತಿಯೊಬ್ಬರು ಆರ್ಥಿಕ ವಹಿವಾಟಿನ ಬಗ್ಗೆ ಪ್ರಶ್ನಿಸುವ ನಿರ್ಧಾರಕ್ಕೆ ಬಂದಿರುವುದು ಉತ್ತಮ ಬೆಳವಣಿಗೆ. ಬಡವರಿಗೆ ಅನೇಕ ಯೋಜನೆಗಳ ಬಗ್ಗೆ ತಿಳಿದಿರುವುದಿಲ್ಲ. ವಿದ್ಯಾವಂತರು ಇದರ ಬಗ್ಗೆ ವಿಶೇಷ ಗಮನಹರಿಸಬೇಕೆಂದು ಪ್ರಧಾನಿ ಮನವಿ ಮಾಡಿದರು.

ದೃಢ ಸಂಕಲ್ಪ ಮಾಡೋಣ:

2022ಕ್ಕೆ ದೇಶಕ್ಕೆ ಸ್ವತಂತ್ರ ಬಂದು 75 ವರ್ಷ ಪೂರ್ಣಗೊಳ್ಳುತ್ತದೆ. ಪ್ರತಿಯೊಬ್ಬ ಪ್ರಜೆಯೂ ಒಂದು ದೃಢ ಸಂಕಲ್ಪ ಮಾಡಬೇಕು. ವಿಶ್ವದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ಹನಿ ಹೆಚ್ಚು ಬೆಳೆ( ಒನ್ ಡ್ರಾಪ್ ಮೋರ್ ಕ್ರಾಪ್)ಗೆ ಆದ್ಯತೆ ನೀಡಬೇಕು. ಇದಕ್ಕಾಗಿ ಪ್ರತಿಯೊಬ್ಬರು ಇಂದಿನಿಂದಲೇ ನನ್ನ ಜೊತೆ ಕೈ ಜೋಡಿಸಿ ಎಂದು ಕೋರಿದರು. ಜಲಕ್ಷಾಮ ಉಂಟಾಗುವ ಮೊದಲೇ ನಾವು ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಒಂದು ಹನಿ ನೀರು ಉಪಯೋಗಿಸುವ ಮೊದಲು 10 ಬಾರಿ ಯೋಚಿಸಬೇಕು. ಮುಂದಿನ ಪೀಳಿಗೆಗೆ ಇದರ ಮಹತ್ವವನ್ನು ಹೆಚ್ಚು ಪ್ರಚುರಪಡಿಸಿ ಎಂದು ಸಲಹೆ ಮಾಡಿದರು.
ರೈತರು ಸಾವಯವ ಕೃಷಿಗೆ ವಿಶೇಷ ಒತ್ತು ನೀಡಬೇಕು. 2020ರ ವೇಳೆಗೆ ದೇಶದಲ್ಲಿ ಶೇ.50ರಷ್ಟು ಯೂರಿಯ ಗೊಬ್ಬರ ಬಳಕೆ ಕಡಿಮೆ ಮಾಡೋಣ. ಸಾವಯವ ಕೃಷಿಯಿಂದ ರೈತರಿಗೆ ಅನೇಕ ರೀತಿಯ ಲಾಭವಿದೆ. ಇದಕ್ಕೆ ಧರ್ಮಸ್ಥಳವೇ ನಿದರ್ಶನ ಎಂದು ಕೊಂಡಾಡಿದರು.

ಪೂರ್ವಜರ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವುದೆಂದರೆ ಕೇವಲ ಉಪದೇಶ ಮಾಡುವುದಲ್ಲ. ಅವರು ಕಂಡಿದ್ದ ಕನಸುಗಳನ್ನು ನಾವು ನನಸು ಮಾಡಬೇಕೆಂದರೆ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಭೂಮಿ ತಾಯಿಗೆ ನಮ್ಮ ಕರ್ತವ್ಯವನ್ನು ಸಮರ್ಪಿಸಿಕೊಳ್ಳವ ಸಮಯ ಬಂದಿದೆ. ಇದಕ್ಕಾಗಿ ಎಲ್ಲರೂ ಸಿದ್ದರಾಗಿ ಎಂದು ಮೋದಿ ಕರೆಕೊಟ್ಟರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಸಂಸದ ನಳೀನ್‍ಕುಮಾರ್ ಕಟೀಲ್, ಶಾಸಕ ವಸಂತ್ ಬಂಗೇರ ಮತ್ತಿತರರು ಇದ್ದರು.

ಇದಕ್ಕೂ ಮುನ್ನ ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಮಂಗಳೂರಿ ಬಜ್ಪ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.  ಅಲ್ಲಿಂದ ನೇರವಾಗಿ ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್‍ನಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದರು. ಬಳಿಕ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

Facebook Comments

Sri Raghav

Admin