ಕನ್ನಡದ ಹೆಮ್ಮೆ ‘ಕುರುಕ್ಷೇತ್ರ’

ಈ ಸುದ್ದಿಯನ್ನು ಶೇರ್ ಮಾಡಿ

kuru-1
ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ಅದ್ಧೂರಿ ಚಿತ್ರವನ್ನು ನಿರ್ಮಿಸಲು ಮುಂದಾಗಲಿದ್ದಾರಂತೆ ನಿರ್ಮಾಪಕ ಮುನಿರತ್ನ. ಈ ಭಾರೀ ರಿಯಲ್‍ಸ್ಟಾರ್ ಉಪೇಂದ್ರ, ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್, ಕಿಚ್ಚ ಸುದೀಪ್‍ರನ್ನು ಒಳಗೊಂಡಂತೆ ಚಾಣಾಕ್ಯ ಚಂದ್ರಗುಪ್ತ ಎಂಬ ಶಿರ್ಷಿಕೆಯೊಂದಿಗೆ ಚಿತ್ರ ನಿರ್ಮಿಸುವ ಆಸೆಯನ್ನು ವ್ಯಕ್ತಪಡಿಸಿದ್ದು, ಈ ಮೂವರು ಕಲಾವಿದರೊಂದಿಗೆ ಚರ್ಚಿಸುವ ನಿರ್ಧಾರವನ್ನು ಹೊಂದಿದ್ದಾರಂತೆ.

ಬಹಳಷ್ಟು ನಿರೀಕ್ಷೆಯನ್ನು ಹುಟ್ಟಿಹಾಕಿರುವಂತಹ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ವಿಶೇಷ ದಾಖಲೆ ಮಾಡುವಂಥ ಚಿತ್ರ ಎನ್ನಲಾಗಿರುವ ಮುನಿರತ್ನ ಕುರುಕ್ಷೇತ್ರ ಈ ವರ್ಷ ಬಿಡುಗಡೆಯಾಗಲಿದೆ. ಅದ್ಧೂರಿ ಚಿತ್ರಗಳ ನಿರ್ಮಾಪಕ ಎಂದೇ ಹೆಸರಾದ ಮುನಿರತ್ನ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ದುರ್ಯೋಧನನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ದುರ್ಯೋಧನನ ಪತ್ನಿ ಭಾನಾಮತಿಯಾಗಿ ಮೇಘನಾರಾಜ್ ಬಣ್ಣ ಹಚ್ಚಿದ್ದಾರೆ. ನಾಗಣ್ಣ ಅವರ ನಿರ್ದೇಶನದ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಕೊನೇ ಹಂತದ ಚಿತ್ರೀಕರಣ ಹೈದರಾಬಾದ್‍ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿತ್ತು. ಶೂಟಿಂಗ್ ನೋಡಲೆಂದು ನಿರ್ಮಾಪಕರು ಪತ್ರಕರ್ತರನ್ನು ರಾಮೋಜಿ ಫಿಲಂ ಸಿಟಿಗೆ ಆಹ್ವಾನಿಸಿದ್ದರು.

kuru-4

ಸಾವಿರಾರು ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ರಾಮೋಜಿ ಫಿಲಂ ಸಿಟಿಯಲ್ಲಿನ ಹಲವಾರು ಲೋಕೇಷನ್‍ಗಳಲ್ಲಿ ಕುರುಕ್ಷೇತ್ರದ ಚಿತ್ರೀಕರಣ ನಡೆಸಲಾಗಿದೆ. ನಾವೆಲ್ಲ ಹೋದಂಥ ಸಂದರ್ಭದಲ್ಲಿ ಚಿತ್ರದ ಆರಂಭದಲ್ಲಿ ಬರುವ ದುರ್ಯೋಧನ ಇಂಟ್ರಡಕ್ಷನ್ ಸಾಂಗ್ ಚಿತ್ರೀಕರಣ ನಡೆಯುತ್ತಿತ್ತು. ಇನ್ನೊಂದು ಜಾಗದಲ್ಲಿ ಯುದ್ಧ ಭೂಮಿಯ ಸನ್ನಿವೇಶಗಳನ್ನು ಸೆರೆಹಿಡಿಯಲಾಗುತ್ತಿತ್ತು. ನಿರ್ಮಾಪಕ ಮುನಿರತ್ನ ಮಾತನಾಡಿ, ಇಂಥದ್ದೊಂದು ಚಿತ್ರ ಮಾಡಬೇಕು ಎಂದು ಬಹಳ ದಿನಗಳಿಂದ ಆಸೆಯಿತ್ತು. ನಾವು ಬೇರೆ ಭಾಷೆಗಳಿಗಿಂತ ಯಾವುದರಲ್ಲೂ ಕಮ್ಮಿಯಿಲ್ಲ ಎಂದು ತೋರಿಸುವ ಪ್ರಯತ್ನ ಮಾಡಿದ್ದೇವೆ. ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್‍ಗಳು ಈ ಚಿತ್ರದಲ್ಲಿದ್ದಾರೆ. ಜನವರಿ 5 ರಂದು ಚಿತ್ರೀಕರಣ ಮುಕ್ತಾಯಗೊಳ್ಳಲಿದೆ. ಕಳೆದ ಆಗಸ್ಟ್ 9 ರಿಂದ ಆರಂಭಿಸಿ ಈವರೆಗೆ 130 ರಿಂದ 140 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಮಾರ್ಚ್ 2 ರಂದು ಸೆನ್ಸಾರ್ ಮಾಡಿಸಿ 9 ರಂದು ರಿಲೀಸ್ ಮಾಡಬೇಕೆಂಬ ಪ್ಲ್ಯಾನ್ ಇದೆ. ಫೆಬ್ರವರಿ ಕೊನೆಗೆ ರೀರೆಕಾರ್ಡಿಂಗ್ ಮುಗಿಯುತ್ತದೆ. ಚಿತ್ರವನ್ನು 3ಡಿ ಹಾಗೂ 2ಡಿ ಎರಡೂ ವರ್ಷನ್‍ನಲ್ಲಿ ಚಿತ್ರೀಕರಿಸುತ್ತಿದ್ದೇವೆ. ಸಾಮಾನ್ಯವಾಗಿ ಬೇರೆ ಭಾಷೆಗೆ ಡಬ್ ಮಾಡಲು ಅನುಕೂಲವಾಗಲೆಂದು ಇತರ ಚಿತ್ರರಂಗದ ನಟರನ್ನು ಹಾಕಿಕೊಳ್ತಾರೆ. ಆದರೆ ನಾವು ಇಡೀ ಚಿತ್ರದಲ್ಲಿ ಕನ್ನಡದವರೇ ಇರಬೇಕೆಂದು ಎಲ್ಲಾ ಕನ್ನಡ ನಟರನ್ನೇ ಬಳಸಿಕೊಂಡಿದ್ದೇವೆ.

kuru-2

ಮಹಾಭಾರತದ ಕಥೆಯನ್ನು ನಾವು ಯಾರ ಮೇಲೆ ಬೇಕಾದರೂ ಮಾಡಬಹುದು. ಧರ್ಮರಾಯ, ಅರ್ಜುನ, ಭೀಮ, ಶ್ರೀಕೃಷ್ಣ, ಕುಂತಿ, ದ್ರೌಪದಿ ಹೀಗೆ ಯಾರ ಪಾತ್ರವನ್ನಾದರೂ ಕೇಂದ್ರೀಕೃತವಾಗಿಸಿ ಚಿತ್ರ ನಿರ್ಮಿಸಬಹುದಾಗಿದೆ. ನಾವು ದುರ್ಯೋಧನನ್ನು ಇಟ್ಟುಕೊಂಡು ಈ ಕಥೆಯನ್ನು ಹೇಳಿದ್ದೇವೆ. ಇಡೀ ಚಿತ್ರ ಸೆಟ್‍ಗಳಲ್ಲಿಯೇ ಚಿತ್ರೀಕರಣಗೊಳ್ಳುತ್ತಿದೆ ಎಂದು ಹೇಳಿದರು. ನಟ ದರ್ಶನ್ ಮಾತನಾಡಿ, ಚಿತ್ರದ ಮುಹೂರ್ತ ದಿನದಂದು ಹೆಚ್ಚಿಗೆ ಮಾತನಾಡಲು ಆಗಲ್ಲ ಇಂಥ ಸಿನಿಮಾವನ್ನು ಮುನಿರತ್ನ ಅವರು ಮಾಡಹೊರಟಿರುವುದೇ ದೊಡ್ಡ ವಿಷಯ. ಪೌರಾಣಿಕ, ಐತಿಹಾಸಿಕ ಸಿನಿಮಾಗಳಿಗೆ ನಾನು ಎಂದೂ ಕ್ಯೂ ಇಟ್ಟುಕೊಳ್ಳಲ್ಲ. ಇಂಥ ಸಿನಿಮಾಗಳ ಮೂಲಕ ಮುಂದಿನ ಜನರಿಗೆ ತಿಳಿಸಿಕೊಡಬೇಕು. ದುರ್ಯೋಧನನ ಪಾತ್ರಕ್ಕೆ ತುಂಬಾ ವಿಶೇಷತೆಗಳಿವೆ. ಪ್ರತಿದಿನ ನನ್ನ ಮೈಮೇಲೆ 50-60 ಕೆಜಿ ಆಭರಣ, ಕಾಸ್ಟ್ಯೂಮ್ ಇರುತ್ತದೆ. ಕಿರೀಟವೇ 20 ಕೆಜಿ ಇದೆ. ಅಲ್ಲದೆ ನನ್ನ ಇಡೀ ಕಾಸ್ಟ್ಯೂಮ್ಸ್‍ನ್ನು ಮುನಿರತ್ನ ಅವರೇ ಫೈನಲ್ ಮಾಡಿದ್ದಾರೆ. ಕಲಾವಿದರಿಗೆ ತೊಂದರೆಯಾಗಬಾರದೆಂದು ದರ್ಬಾರ್‍ಹಾಲ್‍ಗೆ ಎಸಿ ಅಳವಡಿಸಿದ್ದರು. ಇಡೀ ಸಿನಿಮಾದಲ್ಲಿ ಅದ್ಧೂರಿ ಸೆಟ್ ಅದಾಗಿದೆ. ನನ್ನ ತಂದೆಯ ಕಾಲದಿಂದ ಈ ಕಾಲದವರೆಗಿನ ಅಷ್ಟು ಜನರ ಜೊತೆ ಕೆಲಸ ಮಾಡಿದ ಖುಷಿಯಿದೆ ಎಂದು ಹೇಳಿದರು.

ಭಾನಾಮತಿ ಪಾತ್ರ ಮಾಡಿದ ಮೇಘನಾರಾಜ್ ಮಾತನಾಡಿ ಇದೇ ಮೊದಲ ಬಾರಿಗೆ ನಾನು ಪೌರಾಣಿಕ ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ದರ್ಶನ್ ಅವರ ಜೊತೆ ಫಸ್ಟ್ ಟೈಂ ಅದೂ ಅವರ 50ನೇ ಚಿತ್ರದಲ್ಲಿ ನಾಯಕಿಯಾಗಿರುವುದು ಖುಷಿಕೊಟ್ಟಿದೆ ಎಂದು ಹೇಳಿದರು. ನಿರ್ದೇಶಕ ನಾಗಣ್ಣ ಮಾತನಾಡಿ, ಇಡೀ ಸಿನಿಮಾದ ಹಿಂದಿರುವ ಯಜಮಾನ ಮುನಿರತ್ನ ಇಂಥ ಸಿನಿಮಾ ಮಾಡುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಪೂರ್ವಜನ್ಮದ ಸುಕೃತ. 16 ದಿನಗಳ ಕಾಲ ಕುರುಕ್ಷೇತ್ರ ಯುದ್ಧವನ್ನು ಚಿತ್ರೀಕರಿಸಿದ್ದೇವೆ. ಶೂಟಿಂಗ್ ಜೊತೆಗೆ ಆನ್‍ಲೈನ್ ಎಡಿಟಿಂಗ್ ಕೂಡ ನಡೆದಿದೆ ಎಂದು ಹೇಳಿದರು. ಈ ಚಿತ್ರಕ್ಕೆ ಸಾಹಿತಿ ಹಾಗೂ ನಿರ್ದೇಶಕ ಡಾ. ನಾಗೇಂದ್ರಪ್ರಸಾದ್ ಕೂಡ ನಿರ್ದೇಶನದ ಜವಾಬ್ದಾರಿಯಲ್ಲಿ ಕೈ ಜೋಡಿಸಿದ್ದಾರಂತೆ. ಈ ಚಿತ್ರದಲ್ಲಿ ದುಶ್ಯಾಸನನಾಗಿರುವ ಚೇತನ, ಭೀಮನ ಪಾತ್ರ ನಿರ್ವಹಿಸಿದ ಡ್ಯಾನಿಷ್ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು ಹಾಗೂ ಈ ಚಿತ್ರದ ನಿರ್ಮಾಪಕರ ಬೆನ್ನೆಲುಬಾಗಿ ಜಯಶ್ರೀ ದೇವಿ ಹಾಗೂ ವಾಸು ಕಾರ್ಯನಿರ್ವಹಿಸುತ್ತಿದ್ದು, ಚಿತ್ರವನ್ನು ಅದ್ಧೂರಿಯಾಗಿ ಸಿದ್ದಪಡಿಸಲು ಹಗಲಿರುಳೆನ್ನದೆ ಒಂದು ದೊಡ್ಡ ತಂಡವೇ ಚಿತ್ರಕ್ಕಾಗಿ ದುಡಿಯುತ್ತಿದೆ.

Facebook Comments

Sri Raghav

Admin