ಕನ್ನಡಿಗರಿಂದ ಕಾವೇರಿಯನ್ನು ಕಿತ್ತುಕೊಳ್ಳುವಂತಹ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Supreme_Court_of_India_-_Retouched

ಬೆಂಗಳೂರು. ಸೆ.18 : ಕಾವೇರಿ ನದಿ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟ್ ಇಂದು ನೀಡಿರುವ ತೀರ್ಪಿನಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರೊಂದಿಗೆ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆದೇಶಿಸಿರುವುದು ರಾಜ್ಯದ ಪಾಲಿಗೆ ಮರಣ ಶಾಸನವೆನ್ನಲಾಗಿದೆ. ಪದೇ, ಪದೇ ಕಾವೇರಿ ನದಿ ನೀರನ್ನು ಬಿಡುವಂತೆ ಆದೇಶಿಸಲು ಆಗದು. 4 ವಾರದೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರಚಿಸಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಕಾವೇರಿ ನಿರ್ವಹಣಾ ಮಂಡಳಿ ರಚನೆಯಿಂದಾಗಿ ಕರ್ನಾಟಕಕ್ಕೆ ಭಾರೀ ಅನ್ಯಾಯವಾಗಲಿದೆ. ಇನ್ನು ಮುಂದೆ ಕಾವೇರಿ ನದಿ ನೀರಿನ ವಿಚಾರದ ಎಲ್ಲಾ ತೀರ್ಮಾನಗಳನ್ನು ನಿರ್ವಹಣಾ ಮಂಡಳಿಯೇ ಕೈಗೊಳ್ಳಲಿದೆ. ಕಾವೇರಿ ಕೊಳ್ಳದ ಡ್ಯಾಂ ಗಳೆಲ್ಲಾ ಮಂಡಳಿ ವ್ಯಾಪ್ತಿಗೆ ಬರಲಿದ್ದು, ಕುಡಿಯುವ ನೀರು, ನೀರಾವರಿ ಮತ್ತಿತರ ನಿರ್ಧಾರಗಳನ್ನೆಲ್ಲಾ ಮಂಡಳಿಯೇ ಕೈಗೊಳ್ಳಲಿದ್ದು, ರಾಜ್ಯದ ಅಧಿಕಾರ ಕೈ ತಪ್ಪಲಿದೆ.

ಇನ್ನುಮುಂದೆ ಮಂಡಳಿಯ ತೀರ್ಮಾನದಂತೆ ನಾಲೆಗಳಿಗೆ ನೀರು ಹರಿಸಬೇಕಾಗುತ್ತದೆ. ಕರ್ನಾಟಕದ ಕೈ ತಪ್ಪಲಿರುವ ಕಾವೇರಿ, ಕೇಂದ್ರ ಸರ್ಕಾರದ ಕೈ ಸೇರಲಿದೆ. ಯಾವಾಗಲೂ ಕೇಂದ್ರದ ಮೇಲೆ ಹಿಡಿತ ಸಾಧಿಸುವ ತಮಿಳುನಾಡು ಕಾವೇರಿ ವಿಚಾರದಲ್ಲಿಯೂ ಮೇಲುಗೈ ಸಾಧಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಚೆನ್ನೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ಸಲ್ಲಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಮೊದಲ ಬೇಡಿಕೆ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರಚಿಸಬೇಕೆಂಬುದಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಿಂದ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು 4 ವಾರಗಳ ಅವಧಿಯಲ್ಲಿ ರಚಿಸಬೇಕಿದೆ. ಮಂಡಳಿಯಲ್ಲಿ ಕೇಂದ್ರ, ಕರ್ನಾಟಕ ಹಾಗೂ ತಮಿಳುನಾಡು ಪ್ರತಿನಿಧಿಗಳು ಇದ್ದರೂ, ಎಂದಿನಂತೆಯೇ ತಮಿಳುನಾಡು ಒತ್ತಡದ ಮೂಲಕ ಹೆಚ್ಚಿನ ನೀರನ್ನು ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇನ್ನೂ ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕ ತೀರ್ಮಾನ ಕೈಗೊಳ್ಳುವಂತಿಲ್ಲ. ನಾಲೆಗಳಿಗೆ ನೀರು ಹರಿಸುವುದರಿಂದ ಹಿಡಿದು ಎಲ್ಲಾ ತೀರ್ಮಾನಗಳನ್ನು ಮಂಡಳಿಯೇ ಕೈಗೊಳ್ಳಲಿದೆ. ಒಟ್ಟಿನಲ್ಲಿ ಮಂಡಳಿ ರಚನೆಯಾದಲ್ಲಿ ಕಾವೇರಿ ಕೈ ತಪ್ಪಲಿದೆ ಎಂದು ಹೇಳಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin