ಕನ್ನಡ ಚಿತ್ರಗಳಿಗೆ ಚೆನ್ನೈನಲ್ಲೂ ಮನ್ನಣೆ : ಚಿತ್ರೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

dgasfdhgafdshg

ಬೆಂಗಳೂರು, ಆ.5- ಕರ್ನಾಟಕ ಚಲನಚಿತ್ರ ಅಕಾಡೆಮಿ ಚನ್ನೈನಲ್ಲಿ ಆಯೋಜಿಸಿದ್ದ ಮೂರು ದಿನಗಳ ಚಿತ್ರೋತ್ಸವದಲ್ಲಿ ನಿರೀಕ್ಷೆಗೂ ಮೀರಿ ಜನ ಪಾಲ್ಗೊಂಡು ತೋರಿರುವ ಉತ್ತಮ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಮುಂಬೈ, ಕೋಲ್ಕತಾ ಮತ್ತು ತಿರುವನಂತಪುರಂನಲ್ಲಿ ಕನ್ನಡ ಚಿತ್ರೋತ್ಸವ ಆಯೋಜಿಸುವ ಚಿಂತನೆ ನಡೆದಿದೆ.   ಕನ್ನಡ ಚಿತ್ರಗಳಿಗೆ ಹೊರ ರಾಜ್ಯಗಳಲ್ಲೂ ಉತ್ತಮ ಪ್ರತಿಕ್ರಿಯೆ ದೊರೆತಿರುವುದರಿಂದ ಇತರೆ ರಾಜ್ಯಗಳಾದ ಮಹಾರಾಷ್ಟ್ರ, ಕೇರಳಗಳಲ್ಲಿ ಚಿತ್ರೋತ್ಸವ ನಡೆಸಲು ಅಕಾಡೆಮಿ ಸಜ್ಜಾಗಿದೆ ಎಂದು ರಿಜಿಸ್ಟ್ರಾರ್ ಎಚ್.ಬಿ.ದಿನೇಶ್ ಹೇಳಿದ್ದಾರೆ.
ಚನ್ನೈನ ಆಳ್ವಾನ್‍ಪೇಟೆಯ ರಷ್ಯನ್ ಸೆಂಟರ್ ಆಫ್ ಸೈನ್ಸನ್ ಕಲ್ಚರ್ ಸಭಾಂಗಣದಲ್ಲಿ ಚನ್ನೈ ಕನ್ನಡ ಚಲನಚಿತ್ರೋತ್ಸವವನ್ನು ಆಯೋಜಿಸಿ ಕನ್ನಡದ ಪ್ರಖ್ಯಾತ ಚಿತ್ರಗಳಾದ ರಂಗಿತರಂಗ, ಹರಿವು, ತಿಥಿ, ಯೂಟರ್ನ್, ಗೋಧಿಬಣ್ಣ ಸಾಧಾರಣ ಮೈಕಟ್ಟು, ಇಷ್ಟಕಾಮ್ಯ, ಕರ್ವ, ಫಸ್ಟ್‍ರ್ಯಾಂಕ್ ರಾಜು, ಶಿವಲಿಂಗ ಸೇರಿದಂತೆ 11 ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಈ ಚಿತ್ರೋತ್ಸವಕ್ಕೆ ನಿರೀಕ್ಷೆಗೂ ಮೀರಿ ಬಂದ ಜನ ಕನ್ನಡ ಚಿತ್ರಗಳ ಬಗ್ಗೆ ತೋರಿದ ಒಲವು ಮೂಖ ವಿಸ್ಮಿತರನ್ನಾಗಿಸಿತು. ಕೆಲವು ಚಿತ್ರಗಳಿಗಂತೂ ನೂಕು ನುಗ್ಗಲು ಉಂಟಾಯಿತು.
ಈ ಹಿನ್ನೆಲೆಯಲ್ಲಿ ಆ ಚಿತ್ರಗಳನ್ನು ಮತ್ತೊಮ್ಮೆ ಪ್ರದರ್ಶಿಸಬೇಕಾಯಿತು. ಅವುಗಳಲ್ಲಿ ತಿಥಿ, ಗೋಧಿಬಣ್ಣ ಸಾಧಾರಣ ಮೈಕಟ್ಟು ಹಾಗೂ ಯುಟರ್ನ್ ಚಿತ್ರಗಳು ಪ್ರೇಕ್ಷಕರ ಮನ ತಣಿಸಿತು.
ಒಂದು ಗಂಟೆಗೂ ಮುನ್ನವೇ ಬಂದು ಕಾದು ಕುಳಿತು ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಒಂದೆಡೆಯಾದರೆ ತಮಿಳು ಚಿತ್ರರಂಗದ ಕಲಾವಿದರು, ನಿರ್ದೇಶಕರು ಕೂಡ ಚಿತ್ರ ವೀಕ್ಷಣೆಗೆ ಬಂದಿದ್ದು ವಿಶೇಷವಾಗಿತ್ತು.  ನಟಿ ಸುಹಾಸಿನಿಗೆ ಆರಂಭದಲ್ಲಿ ಚಿತ್ರ ನೋಡಲು ಸ್ಥಳಾವಕಾಶದ ಕೊರತೆಯಾದರೂ ಕೊನೆಗೆ ಜಾಗದ ವ್ಯವಸ್ಥೆ ಮಾಡಿಕೊಂಡು ಚಿತ್ರ ವೀಕ್ಷಿಸಿದರು.  ಇದಲ್ಲದೆ ನಿರ್ದೇಶಕ ಕೆ.ಎಸ್.ವಾಸು, ವಿಕ್ರಂನ್, ನಟ ಕೋಕಿಲಾ ಮೋಹನ್, ಬಿ.ಸರೋಜಾದೇವಿ, ಲಕ್ಷ್ಮಿ, ಅಂಬಿಕಾ, ಕುಟ್ಟಿಪದ್ಮಿನಿ, ಛಾಯಾಸಿಂಗ್ ಯುವ ಕಲಾವಿದರು, ಯುವ ನಿರ್ದೇಶಕರು ದಿನದ ಎಲ್ಲಾ ಪ್ರದರ್ಶನ ವೀಕ್ಷಿಸಿ ಸಂತಸಪಟ್ಟರು.

ಮೂರು ದಿನಗಳ ಕಾಲ ಆಯೋಜಿಸಿದ್ದ ಈ ಚಲನಚಿತ್ರೋತ್ಸವಕ್ಕೆ ದೊರೆತ ಉತ್ತಮ ಪ್ರತಿಕ್ರಿಯೆಯಿಂದ ಚನ್ನೈನ ವುಡ್‍ಲ್ಯಾಂಡ್ಸ್, ದೇವಿ ಚಿತ್ರಮಂದಿರದವರೂ ಸಹ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡಲು ಮುಂದಾಗಿದ್ದಾರೆ.  ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು ಮಾತನಾಡಿ, ಕನ್ನಡ ಚಿತ್ರಗಳ ಬಗ್ಗೆ ಚನ್ನೈನವರೆಗೂ ಒಲವಿದೆ. ಕನ್ನಡ ಚಿತ್ರರಂಗದಲ್ಲಿ ಆಗಿರುವ ಉತ್ತಮ ಬೆಳವಣಿಗೆಗಳು ಎಲ್ಲರ ಗಮನ ಸೆಳೆದಿವೆ. ಹೊರ ರಾಜ್ಯದಲ್ಲೂ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಇದೆ ಎನ್ನುವುದನ್ನು ಈ ಚಿತ್ರೋತ್ಸವ ಸಾಬೀತು ಮಾಡಿದೆ ಎಂದು ಸಂತಸ ಹಂಚಿಕೊಂಡರು. ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಪವನ್‍ಕುಮಾರ್, ಮುನಿರತ್ನ, ಗಂಗರಾಜು ಮತ್ತಿತರರು ಪಾಲ್ಗೊಂಡಿದ್ದರು.

Facebook Comments

Sri Raghav

Admin