ಕನ್ನಡ ನಾಡು, ನುಡಿ, ಜಲಕ್ಕಾಗಿ ಪ್ರಾಣ ಕೊಡಲೂ ಸಿದ್ಧ : ರಾಘವೇಂದ್ರ ರಾಜ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

Raghavendra-01

ಬೆಂಗಳೂರು, ಜು.21-ಕನ್ನಡ ನಾಡು, ನುಡಿ, ಜಲ ವಿಚಾರದಲ್ಲಿ ಅಪಾಯ ಎದುರಾದರೆ ನಾವು ಪ್ರಾಣ ಕೊಡಲು ಸಿದ್ಧ ಎಂದು ವರನಟ ಡಾ.ರಾಜ್‍ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್‍ಕುಮಾರ್ ಇಂದಿಲ್ಲಿ ಘೋಷಣೆ ಮಾಡಿದ್ದಾರೆ. ಯಡಿಯೂರು ವಾರ್ಡ್‍ನ ಮಾಧವನ್‍ರಾವ್ ವೃತ್ತದಿಂದ ನಾಗಸಂದ್ರ ವೃತ್ತದವರೆಗಿನ ರಸ್ತೆಗೆ ಡಾ.ಪಾರ್ವತಮ್ಮ ರಾಜ್‍ಕುಮಾರ್ ಅವರ ಹೆಸರು ನಾಮಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರ ಕನ್ನಡ ಧ್ವಜ ಬದಲಾವಣೆ ಕುರಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮಗೆ ನಾಡು, ನುಡಿ, ಜಲ ಮುಖ್ಯ. ಇದಕ್ಕೆ ಕಂಟಕ ಬಂದರೆ ನಮ್ಮ ಕುಟುಂಬ ಪ್ರಾಣ ಕೊಡಲು ಸಿದ್ಧ ಎಂದರು.

ನಿರ್ಗತಿಕ ಮತ್ತು ಹೆಣ್ಣು ಮಕ್ಕಳಿಗೆ ಆತ್ಮಸ್ಥೈರ್ಯ ಹಾಗೂ ಸ್ವಾವಲಂಬನೆ ಜೀವನ ನಡೆಸಲು ನಮ್ಮ ತಾಯಿಯವರು ಮೈಸೂರಿನಲ್ಲಿ ಶಕ್ತಿಕೇಂದ್ರ ಪ್ರಾರಂಭಿಸಿದ್ದಾರೆ. ನಮ್ಮ ತಾಯಿಯವರ ಹೆಸರು ಮತ್ತಷ್ಟು ಚಿರಸ್ಥಾಯಿಯಾಗಿ ಉಳಿಯುವ ದೃಷ್ಟಿಯಿಂದ ಪ್ರತಿ ಜಿಲ್ಲೆಗೊಂದು ಶಕ್ತಿಕೇಂದ್ರ ಸ್ಥಾಪನೆಗೆ ನಮ್ಮ ಕುಟುಂಬ ತೀರ್ಮಾನಿಸಿದೆ ಎಂದರು. ಜೊತೆಗೆ ಅಪ್ಪಾಜಿಯವರ ಹೆಸರಿನಲ್ಲಿ ಡಾ.ರಾಜ್‍ಕುಮಾರ್ ಅಕಾಡೆಮಿಯ ಮೂಲಕ ನೂರಾರು ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಉಚಿತ ತರಬೇತಿ ನೀಡಲು ತೀರ್ಮಾನಿಸಲಾಗಿದೆ ಎಂದರು.

Raghavendra-02

ಕಳೆದ 60-70ವರ್ಷಗಳಿಂದ ನಮ್ಮನ್ನು ಸಾಕುತ್ತಿರುವವರು ಅಭಿಮಾನಿ ದೇವರು. ಇನ್ನು ಮುಂದೆಯೂ ನಿಮ್ಮ ಶ್ರೀರಕ್ಷೆ ನಮ್ಮ ಮೇಲಿರಲಿ. ನಾವೂ ಸಹ ನಿಮ್ಮ ಸೇವೆಗೆ ಸದಾ ಸಿದ್ಧರಿದ್ದೇವೆ ಎಂದರು.  ನಮ್ಮ ಕುಟುಂಬಕ್ಕೆ ಮೂರು ದೇವರುಗಳು. ಒಂದು ಪರಮಾತ್ಮ, ತಾತ-ಅಜ್ಜಿ ಹಾಗೂ ಮೂರನೆಯವರು ಅಭಿಮಾನಿಗಳು. ಅವರ ಆಶೀರ್ವಾದ ನಮ್ಮ ಕುಟುಂಬದ ಮೇಲಿದೆ. ಅವರ ಈ ಪ್ರೀತಿಗೆ ಸದಾ ಚಿರಋಣಿಯಾಗಿರುತ್ತೇವೆ ಎಂದರು. ಕಸ್ತೂರಿ ನಿವಾಸದ ಮಾದರಿಯ ಪ್ರತಿಮೆ ಮುಂಭಾಗವಿರುವ ರಸ್ತೆಗೆ ನಮ್ಮ ತಾಯಿಯವರ ಹೆಸರಿಟ್ಟಿರುವುದು ತುಂಬಾ ಒಳ್ಳೆಯ ಕೆಲಸ. ಬರೀ ಹೆಸರಿಟ್ಟರೆ ಸಾಲದು, ಈ ರಸ್ತೆಯನ್ನು ಸದಾ ಹಸಿರಾಗಿರುವಂತೆ ನೋಡಿಕೊಳ್ಳಬೇಕು. ಇಲ್ಲಿಗೆ ಬರುವ ಜನರು ಪ್ರಕೃತಿ ಸೌಂದರ್ಯ ನೋಡಿ ಆನಂದಿಸಬೇಕು ಎಂದರು.

ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಮಾತನಾಡಿ, ಇಡೀ ವಿಶ್ವದಲ್ಲೇ ಆದರ್ಶಪ್ರಾಯ ವ್ಯಕ್ತಿ ಇದ್ದರೆ ಅದು ಡಾ.ರಾಜ್‍ಕುಮಾರ್ ಮಾತ್ರ. ಅವರ ನಟನೆಯ ಬಂಗಾರದ ಮನುಷ್ಯ ಚಿತ್ರ ಸಾವಿರಾರು ಜನರ ಮನಪರಿವರ್ತನೆಗೆ ಆದರ್ಶವಾಗಿದೆ. ಅದೇ ರೀತಿ ಜೀವನಚೈತ್ರ ಚಿತ್ರದಿಂದ ಅದೆಷ್ಟೋ ಬಾರ್‍ಗಳಿಗೆ ಬೀಗ ಹಾಕಲಾಗಿದೆ. ಇಂತಹ ನಟ ಜಗತ್ತಿನಲ್ಲಿ ಮತ್ತೆಲ್ಲೂ ಸಿಗುವುದಿಲ್ಲ. ಇಂಥವರ ಪ್ರತಿಮೆ ನಮ್ಮ ವಾರ್ಡ್‍ನಲ್ಲಿರುವ ಹೆಮ್ಮೆಯ ಸಂಗತಿಯಾಗಿದೆ. ಅವರ ಶಕ್ತಿಗೆ ಪ್ರೇರಣೆಯಾಗಿದ್ದ ಪಾರ್ವತಮ್ಮ ಅವರ ಹೆಸರನ್ನು ಮಾಧವನ್‍ರಾವ್ ವೃತ್ತಕ್ಕೆ ನಾಮಕರಣ ಮಾಡಿರುವುದು ಹೆಮ್ಮೆಯ ಸಂಗತಿ. ಈ ರಸ್ತೆಯನ್ನು ಇಡೀನಗರಕ್ಕೆ ಮಾದರಿ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಈ ರಸ್ತೆಯಲ್ಲಿ ಹಿಂದೆ ಶಾಂತಿ ಚಿತ್ರಮಂದಿರವಿತ್ತು. ಈ ಚಿತ್ರಮಂದಿರದಲ್ಲಿ ಪಾರ್ವತಮ್ಮ ರಾಜ್‍ಕುಮಾರ್ ಅವರು ನಿರ್ಮಿಸಿದ್ದ 31 ಚಿತ್ರಗಳ ಪೈಕಿ 27 ಚಿತ್ರಗಳು ಶತದಿನೋತ್ಸವ ಆಚರಿಸಿದ್ದವು. ಈ ಚಿತ್ರಮಂದಿರದ ಬಳಿಯೇ ಪಾರ್ವತಮ್ಮ ರಾಜ್‍ಕುಮಾರ್ ರಸ್ತೆ ನಾಮಕರಣವಾಗಿದೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ನಟ ವಿನಯ್‍ರಾಜ್‍ಕುಮಾರ್, ನಿರ್ಮಾಪಕ ಚಿನ್ನೇಗೌಡ, ರಾಜ್‍ಕುಮಾರ್ ಸಹೋದರಿ ನಾಗಮ್ಮ, ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತ್‍ಕುಮಾರ್, ಉಪಮೇಯರ್ ಎಸ್.ಆನಂದ್, ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin