ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

Kannada-award

ಬೆಂಗಳೂರು, ಆ.18-ಕನ್ನಡ ಪುಸ್ತಕೋದ್ಯಮದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯನ್ನು ಬೆಂಗಳೂರಿನ ಅನ್ವೇಷಣೆ ಪ್ರಕಾಶನಕ್ಕೆ ನೀಡಿ 2015ನೆ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಪ್ರಕಟಿಸಿದೆ.  ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್, ಪ್ರಾಧಿಕಾರದಿಂದ ನೀಡುವ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ 2015ನೆ ಸಾಲಿನಲ್ಲಿ ಅನ್ವೇಷಣೆ ಪ್ರಕಾಶನ ಗಳಿಸಿದ್ದು, ಒಂದು ಲಕ್ಷ ರೂ. ಬಹುಮಾನ ಪಡೆಯಲಿದೆ ಎಂದರು. ಉತ್ತಮ ವಿನ್ಯಾಸ ಮತ್ತು ಅಚ್ಚುಕಟ್ಟಾದ ಮುದ್ರಣ ಸೇರಿದಂತೆ ಸದಭಿರುಚಿಯ, ವೈವಿಧ್ಯಮಯ ನಾಡು-ನುಡಿಯ ಹಿರಿಮೆ ಸಾರುವ ಪುಸ್ತಕಗಳನ್ನು ಕಳೆದ ಮೂರು ದಶಕಗಳಿಂದ ಪ್ರಕಟಿಸುತ್ತಿರುವ ಅನ್ವೇಷಣೆ ಪ್ರಕಾಶನ ಈ ಬಾರಿ ಈ ಗೌರವಕ್ಕೆ ಪಾತ್ರವಾಗಿದೆ ಎಂದು ಹೇಳಿದರು.

ಇದಲ್ಲದೆ ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ(75 ಸಾವಿರ) ಯನ್ನು ಬಳ್ಳಾರಿಯ ಡಾ.ಬಿ.ಶೇಷಾದ್ರಿ ಅವರಿಗೆ, ಡಾ.ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ (50 ಸಾವಿರ) ದಾವಣಗೆರೆಯ ಶಶಿಕಲಾ ಬೆಳಗಲಿ ಅವರಿಗೆ ಸಂದಿದೆ.  ಡಾ.ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿ(25 ಸಾವಿರ)ಯನ್ನು ಮೈಸೂರಿನ ಡಾ.ಎಸ್.ಪಿ.ಯೋಗಣ್ಣ, ಕನ್ನಡ ಪುಸ್ತಕ ಸೊಗಸು 2015ರ ಬಹುಮಾನವನ್ನು ಜನವರಿ 2015 ರಿಂದ ಡಿಸೆಂಬರ್ 2015ರ ಅವಧಿಯಲ್ಲಿ ಪ್ರಕಟವಾದ ಕೃತಿಗಳಿಗೆ ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟ ಪರಿಗಣಿಸಿ ವಿವಿಧ ವಿಭಾಗಗಳಲ್ಲಿ ಬಹುಮಾನ ನೀಡಲಾಗುತ್ತಿದೆ.   ಎಂ.ಎಂ.ಪಬ್ಲಿಕೇಷನ್ ಪ್ರಕಟಿಸಿರುವ ಅನುರಕ್ತಿ ಪುಸ್ತಕ ಮೊದಲ ಬಹುಮಾನ ಪಡೆದಿದ್ದು, ಬಳ್ಳಾರಿಯ ಪಲ್ಲವ ಪ್ರಕಾಶನ ಪ್ರಕಟಿಸಿರುವ ಪ್ರೀತಿ ಎಂಬುದು ಚಂದ್ರನ ದಯೆ ಎಂಬ ಪುಸ್ತಕಕ್ಕೆ ದ್ವೀತಿಯ, ಬೆಂಗಳೂರು ಅನಿಕೇತನ ಪ್ರಕಾಶನದ ಅಸ್ಮಿತಾಕ್ಕೆ ತೃತೀಯ ಬಹುಮಾನ ಲಭಿಸಿದೆ.
ಮಕ್ಕಳ ಪುಸ್ತಕ ಸೊಗಸು ಬಹುಮಾನವನ್ನು ಕೋಲಾರದ ಅನನ್ಯ ಪ್ರಕಾಶನದ ಮತ್ತೊಂದು ಮಹಾಭಾರತ, ಮುಖಪುಟ ಚಿತ್ರ ವಿನ್ಯಾಸದ ಮೊದಲನೆ ಬಹುಮಾನವನ್ನು ಬಿಡಿಮುತ್ತು ಎಂಬ ಪುಸ್ತಕಕ್ಕೆ ಕಲಾವಿದ ಯು.ಟಿ.ಸುರೇಶ್ ಅವರಿಗೆ, 2ನೆ ಬಹುಮಾನ ಪೇಶೆಂಟ್ ಪಾರ್ಕಿಂಗ್ ಪುಸ್ತಕಕ್ಕೆ ಕಲಾವಿದ ಸುಧಾಕರ್ ದರ್ಬೆ ಅವರಿಗೆ ಸಂದಿದೆ.

ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನಕ್ಕೆ ಈ ಬಾರಿ 25 ಮಂದಿ ಆಯ್ಕೆಯಾಗಿದ್ದು, 15ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದಕ್ಕಾಗಿ 118 ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಮಹಾಸಮುದ್ರ ಕೃತಿಯ ಪ್ರೀತಿಲಕ್ಷ್ಮೀಕಾಂತ ಎನ್.ಎಸ್., ಅವ್ವ ಕಾಯುತ್ತಿದ್ದಾಳೆ ಕೃತಿಯ ಅನಿತಾ ಎಂ.ಎಸ್, ಕವನಗಳು ಕೃತಿಯ ಕಾ.ಶಿ.ಮೋಹನ್ಕುಮಾರ್ ಸೇರಿದಂತೆ ಒಟ್ಟು 25 ಮಂದಿಗೆ ನೀಡಲಾಗುತ್ತಿದೆ ಎಂದು ವಿವರಿಸಿದರು.  ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಮಹದೇವಯ್ಯ, ಸದಸ್ಯರಾದ ರಾಜಶೇಖರ ಹತಗುಂದಿ, ಸಾ.ರಘುನಾಥ್, ಬೋರೇಗೌಡ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಆರ್.ಜಿ.ಹಳ್ಳಿ ಹರ್ಷ..
kakakaಬೆಂಗಳೂರು, ಆ.18- ಕನ್ನಡ ಪುಸ್ತಕ ಪ್ರಾಧಿಕಾರ ಅತ್ಯುತ್ತಮ ಪ್ರಕಾಶನಕ್ಕೆ ನೀಡುವ ಪ್ರಶಸ್ತಿಗೆ ಆರ್.ಜಿ.ಹಳ್ಳಿ ನಾಗರಾಜ್ರವರ ಅನ್ವೇಷಣೆ ಪ್ರಕಾಶನಕ್ಕೆ ಪ್ರಶಸ್ತಿ ದೊರೆತಿರುವುದಕ್ಕೆ ನಾಗರಾಜ್ರವರು ಹರ್ಷ ವ್ಯಕ್ತಪಡಿಸಿದ್ದಾರೆ.  1984ರಲ್ಲಿ ಪ್ರಾರಂಭವಾದ ಅನ್ವೇಷಣೆ ಪ್ರಕಾಶನ ಸಂಸ್ಥೆ ರಾಜ್ಯದ ಜನತೆಗೆ ಸಾಮಾಜಿಕ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯದಲ್ಲಿ ಪ್ರಗತಿಪರತೆಯ ಉತ್ತಮ ಪುಸ್ತಕಗಳನ್ನು ಪ್ರಕಟಿಸುತ್ತ ಬಂದಿದೆ.  ಭಾಷಾ ಚಳವಳಿ, ರೈತ ಚಳವಳಿ, ದಲಿತ, ಬಂಡಾಯ, ಸಾಹಿತ್ಯ ಚಳವಳಿಗಳಿಗೆ ಮುಖಾಮುಖಿಯಾಗುವ ಅನೇಕ ಪ್ರಕಟಣೆಗಳು ಈ  ಪ್ರಕಾಶನದಿಂದ ಹೊರಬಂದಿವೆ.   ಬಂಡಾಯ ಪುಸ್ತಕ ಜಾಥಾವನ್ನು ಈ ಅನ್ವೇಷಣೆ ಪ್ರಕಾಶನದ ಮೂಲಕ ಹಮ್ಮಿಕೊಳ್ಳುವಲ್ಲಿ ನಮ್ಮ ಪಾತ್ರ ಪ್ರಮುಖವಾಗಿತ್ತು ಎಂದಿದ್ದಾರೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin