ಕನ್ನಡ ಹೋರಾಟಗಾರ ಮೇಲಿನ ಕ್ರಿಮಿನಲ್ ಕೇಸ್ ವಾಪಸ್ : ಸಿಎಂ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--022

ಬೆಂಗಳೂರು, ಅ.14- ಕನ್ನಡ ನಾಡು-ನುಡಿಗೆ ಹೋರಾಟ ಮಾಡಿದವರ ಮೇಲೆ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಕನ್ನಡಿಗರ ಸಮಾವೇಶ ಜಾನಪದ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡು-ನುಡಿ, ಜಲ, ಭಾಷೆ ಸಂರಕ್ಷಣೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿರುವ ಕರವೇ ಅಧ್ಯಕ್ಷ ಟಿ.ಎ.ನಾರಯಣಗೌಡ ಮತ್ತು ಅವರ ತಂಡಕ್ಕೆ ನಾನು ಅಭಿನಂದಿಸುವುದಾಗಿ ಹೇಳಿದರು.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಮನೆಯಲ್ಲಿ ಯಾವುದೇ ಮಾತೃಭಾಷೆ ಇರಲಿ. ಕನ್ನಡ ನಾಡಿನಲ್ಲಿ ಇದ್ದ ಮೇಲೆ ಅವರು ಕನ್ನಡಿಗರು. ತಮಿಳುನಾಡಿನಲ್ಲಿ ತಮಿಳು, ಕೇರಳದಲ್ಲಿ ಮಲೆಯಾಳಂ, ಆಂಧ್ರದಲ್ಲಿ ತೆಲುಗಿಗೆ ಸಿಕ್ಕಿರುವ ಪ್ರಾಧ್ಯಾನ್ಯತೆ ಕರ್ನಾಟಕದಲ್ಲಿ ಕನ್ನಡಕ್ಕೆ ಸಿಗಬೇಕು. ಕನ್ನಡಿಗರಲ್ಲಿ ಭಾಷಾಭಿಮಾನ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿರುವ ನಾರಾಯಣಗೌಡ ಮತ್ತು ಅವರ ತಂಡದ ಶ್ರಮವನ್ನು ಶ್ಲಾಘಿಸುತ್ತೇನೆ ಎಂದರು.
ಕನ್ನಡ ಸಂಘಟನೆಗಳ ಹೋರಾಟದ ಕಷ್ಟ ನನಗೆ ಗೊತ್ತಿದೆ. ಪೊಲೀಸರಿಂದ ಪೆಟ್ಟು ತಿನ್ನಬೇಕು. ಕ್ರಿಮಿನಲ್ ಕೇಸುಗಳನ್ನು ಹಾಕಿಸಿಕೊಳ್ಳಬೇಕು. ಜೈಲಿಗೆ ಹೋಗಬೇಕು ಈ ಎಲ್ಲಾ ಸಂಕಷ್ಟಗಳ ನಡುವೆ ಕನ್ನಡಕ್ಕಾಗಿ ಹೋರಾಟ ಮಾಡಬೇಕು. ಕುವೆಂಪು ಅವರು ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ಹೇಳಿದ್ದಾರೆ. ಅದೇ ರೀತಿ ಕನ್ನಡ ನಾಡನ್ನು ಸರ್ವಜ್ಞರು ಶಾಂತಿತೋಟ ಎಂದು ಬಣ್ಣಿಸಿದ್ದಾರೆ. ಕನ್ನಡ ಎಂದರೆ ಕುವೆಂಪು ಮತ್ತು ರಾಜ್‍ಕುಮಾರ್ ನೆನಪಾಗುತ್ತಾರೆ ಎಂದು ಸ್ಮರಿಸಿದರು.

ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಕುರಿತು ವಿವಾದಾತ್ಮಕ ಹೇಳಿಕೆ ನೀಡಬಾರದು ಮತ್ತು ಮೆಟ್ರೋದಲ್ಲಿ ಅನ್ಯ ಭಾಷೆ ಬಳಕೆಯನ್ನು ವಿರೋಧಿಸಬಾರದಿತ್ತು ಎಂದು ಕೆಲವರು ನನಗೆ ಸಲಹೆ ನೀಡಿದರು. ಆದರೆ, ನಾನು ಮೊದಲು ಕನ್ನಡಿಗ. ಕೇರಳ, ತಮಿಳುನಾಡಿನಲ್ಲಿ ಅನ್ಯಭಾಷೆ ಬಳಕೆ ಕಡಿಮೆ ಇರುವಾಗ ಕರ್ನಾಟಕದಲ್ಲಿ ಏಕೆ ಬಳಸಬೇಕು ಎಂಬುದು ನನ್ನ ವಾದ. ಇದಕ್ಕಾಗಿಯೇ ಕೇಂದ್ರ ಸಚಿವರಿಗೆ ಪತ್ರ ಕೂಡ ಬರೆದಿದ್ದೇನೆ ಎಂದು ಹೇಳಿದರು.

ಪ್ರತ್ಯೇಕ ಧ್ವಜದ ಬಗ್ಗೆ ನನಗೆ ಸ್ಪಷ್ಟ ನಿಲುವಿದೆ. ಅಮೆರಿಕದಲ್ಲಿ ರಾಷ್ಟ್ರೀಯತೆಯ ಜತೆಗೆ ಪ್ರತಿಯೊಂದು ರಾಜ್ಯಗಳು ತಮ್ಮದೇ ಆದ ಸ್ವಂತ ಧ್ವಜಗಳನ್ನು ಹೊಂದಿವೆ. ಕರ್ನಾಟಕ ಪ್ರತ್ಯೇಕ ಧ್ವಜ ಹೊಂದಿದಾಕ್ಷಣ ರಾಷ್ಟ್ರ ಧ್ವಜಕ್ಕೆ ಅಗೌರವವಾಗುತ್ತದೆ ಎಂಬ ಅಭಿಪ್ರಾಯ ಸರಿಯಲ್ಲ ಎಂದರು. ಪ್ರತ್ಯೇಕ ಧ್ವಜ ಇರಬಾರದು ಎಂದು ಸಂವಿಧಾನದಲ್ಲಿ ಹೇಳಿಲ್ಲ. ರಾಷ್ಟ್ರ ಧ್ವಜದ ಕೆಳಗೆ ನಮ್ಮ ರಾಜ್ಯ ಧ್ವಜವನ್ನು ಹಾರಾಟ ಮಾಡಬುದು. ಅದೇ ರೀತಿ ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳು ಪ್ರತ್ಯೇಕ ಧ್ವಜ ರೂಪಿಸಿಕೊಳ್ಳಬಹುದು ಎಂದರು. ಕನ್ನಡ ನಾಡಿನ ಪ್ರತ್ಯೇಕ ಧ್ವಜಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದೆ. ಅದು ವರದಿ ನೀಡಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Facebook Comments

Sri Raghav

Admin