ಕಪ್ಪತಗುಡ್ಡ ಸರ್ವೆಗೆ ಮುಂದಾಗಿದ್ದ ಅಧಿಕಾರಿಗಳ ವಿರುದ್ಧ ಸಿಎಂ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

kappattagudda--01

ಬೆಂಗಳೂರು, ಫೆ.20– ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯಪ್ರದೇಶ ಎಂದು ಘೋಷಿಸುವ ಅಧಿಕಾರವನ್ನು ರಾಜ್ಯ ವನ್ಯಜೀವಿ ಮಂಡಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದೆ. ಇದೇ ಸಂದರ್ಭದಲ್ಲಿ ಈ ಹಿಂದೆ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲು ಮುಂದಾಗಿದ್ದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆಯೂ ಸಿಎಂ ಸೂಚಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ವನ್ಯಜೀವಿ ಮಂಡಳಿಯ 9ನೇ ವಿಶೇಷ ಸಭೆ ನಡೆಯಿತು.ಇದರಲ್ಲಿ ಪ್ರಮುಖವಾಗಿ ಕಪ್ಪತಗುಡ್ಡ ವಿವಾದದ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಅರಣ್ಯ ಅಧಿಕಾರಿಗಳನ್ನ ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

2008ರಲ್ಲಿ ರಾಜ್ಯಪಾಲರ ಆಡಳಿತ ಜಾರಿಯಲ್ಲಿದ್ದಾಗ ಕಪ್ಪತಗುಡ್ಡದಲ್ಲಿ ಚಿನ್ನದ ನಿಕ್ಷೇಪ ಇರುವ ಕುರಿತು ಸಮೀಕ್ಷೆ ನಡೆಸಲು ಸಂಭವನೀಯ ಅನುಮತಿ ನೀಡಲಾಗಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ಕೆಲವು ಕಂಪೆನಿಗಳು ಗಣಿಗಾರಿಕೆ ನಡೆಸುವ ಪ್ರಯತ್ನವನ್ನೂ ಮುಂದುವರೆಸಿವೆ. ಅಂದಿನಿಂದ ಇಂದಿನವರೆಗೂ 9 ವರ್ಷಗಳ ಕಾಲ ಈ ವಿವಾದ ತಲೆ ಎತ್ತಿರಲಿಲ್ಲ. ಈಗ ನಮ್ಮ ಸರ್ಕಾರವನ್ನು ಗುರಿಯಾಗಿಟ್ಟುಕೊಂಡು ಆರೋಪ ಮಾಡಲಾಗುತ್ತಿದೆ. ಇದಕ್ಕೂ ನಮ್ಮ ಸರ್ಕಾರಕ್ಕೂ ಸಂಬಂಧವಿಲ್ಲ. ಈ ಹಿಂದೆ 2008ರಲ್ಲಿ ಚಿನ್ನದ ನಿಕ್ಷೇಪ ಸಮೀಕ್ಷೆಗೆ ಅನುಮತಿ ನೀಡಿದ ಅಧಿಕಾರಿಗಳು ಯಾರು? ಅವರು ಕೊಟ್ಟ ವರದಿಗಳೇನು ಎಂಬ ಸಮಗ್ರ ವರದಿ ನೀಡುವಂತೆ ಸಿದ್ದರಾಮಯ್ಯ ಸೂಚಿಸಿದರು. ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಾಕೀತು ಮಾಡಿದರು.

ರಾಜ್ಯ ವನ್ಯಜೀವಿ ಮಂಡಳಿ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅರಣ್ಯ ಸಚಿವ ರಮಾನಾಥರೈ, ಈ ಮೊದಲು ಕಪ್ಪತಗುಡ್ಡವನ್ನು ವನ್ಯಜೀವಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ, ವನ್ಯ ಜೀವಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದರೆ ಅಲ್ಲಿರುವ ನಿವಾಸಿಗಳನ್ನು ಒಕ್ಕಲೆಬ್ಬಿಸಬೇಕಾಗುತ್ತದೆ. ಇದರಿಂದ ಅಲ್ಲಿರುವ ನಿವಾಸಿಗಳಿಗೆ ತೊಂದರೆಯಾಗಲಿದೆ. ಸಮಸ್ಯೆಗಳು ಎದುರಾಗುತ್ತವೆ. ರಾಜ್ಯದಲ್ಲಿರುವುದು ಬಂಡೀಪುರ ಮತ್ತು ನಾಗರಹೊಳೆ ಈ ಎರಡು ಪ್ರದೇಶಗಳು ಮಾತ್ರ ಸಂಕರಕ್ಷಿತ ವನ್ಯಜೀವಿ ಪ್ರದೇಶಗಳಾಗಿವೆ. ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಬೇಕು ಎಂಬ ಅಭಿಪ್ರಾಯ ಕೇಳಿಬಂದಿದೆ.

ಈ ಹಿಂದೆ ಸಚಿವ ಸಂಪುಟ ಉಪ ಸಮಿತಿ ಕಪ್ಪತಗುಡ್ಡಕ್ಕೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಿತ್ತು. ವನ್ಯಜೀವಿ ಧಾಮ ಎಂದು ಘೋಷಿಸಲು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಕೈ ಬಿಡಲಾಯಿತು. ಅನಂತರ ಅರಣ್ಯ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಮುಂದಾದಾಗ ಜನರ ಅಭಿಪ್ರಾಯ ಸಂಗ್ರಹಿಸದೆ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂಬ ಆಕ್ಷೇಪಗಳು ಕೇಳಿ ಬಂದಿವೆ. ಇತ್ತೀಚೆಗೆ ನಮ್ಮ ಸರ್ಕಾರ ಜಿಲ್ಲಾಧಿಕಾರಿಯ ಮೂಲಕ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದೆ. ಅದನ್ನು ಮಂಡಳಿಯ ಮುಂದೆ ಮಂಡಿಸಲಾಗಿದೆ. ಇಂದಿನ ಸಭೆಯಲ್ಲಿ ಚರ್ಚೆ ನಡೆಸಿ ಮಂಡಳಿಯ ಎಲ್ಲ ಸದಸ್ಯರು ಮುಖ್ಯಮಂತ್ರಿ ಅವರಿಗೆ ಅಧಿಕಾರ ನೀಡಿದ್ದಾರೆ. ಹಾಗಾಗಿ ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಲು ಮುಖ್ಯಮಂತ್ರಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಈಗ ಕಪ್ಪತಗುಡ್ಡದಲ್ಲಿ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ. ಯಾವ ಅನುಮತಿಯನ್ನೂ ಕೊಟ್ಟಿಲ್ಲ. 2008ರಿಂದ ಈವರೆಗೂ ಯಾವ ಸರ್ಕಾರಗಳು ಇತ್ತ ಗಮನ ಹರಿಸಿರಲಿಲ್ಲ. ನಮ್ಮ ಸರ್ಕಾರ ಅಗತ್ಯ ಪ್ರಯತ್ನ ಮಾಡಿದೆ. ಮಂಡಳಿಯ ಸಭೆ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವುದು ಸಂಪ್ರದಾಯ. ಸಾರ್ವಜನಿಕರ ಪ್ರತಿಭಟನೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಇಂದು ತುರ್ತು ವಿಶೇಷ ಸಭೆ ಕರೆಯಲಾಗಿತ್ತು ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin