ಕಪ್ಪತ್ತಗುಡ್ಡಕ್ಕೆ ಕನ್ನ ಹಾಕುವವರ ಕೈ ಮೇಲಾಗಲು ಬಿಡುವುದಿಲ್ಲ : ಹೊರಟ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

basavaraj--horati
ಗದಗ,ಸೆ.3- ಉತ್ತರ ಕರ್ನಾಟಕದ ಸಹ್ಯಾದ್ರಿಯೆಂದೇ ಪ್ರಖ್ಯಾತಿ ಹೊಂದಿರುವ ಜಿಲ್ಲೆಯ ಕಪ್ಪತ್ತಗುಡ್ಡದ 17872 ಹೆಕ್ಟೇರ್ ಅರಣ್ಯ ಪ್ರದೇಶಕ್ಕೆ ಕಳೆದ ವರ್ಷ ನೀಡಿದ್ದ ಸಂರಕ್ಷಿತ ಪ್ರದೇಶವೆಂಬ ಮೀಸಲು ಸ್ಥಾನಮಾನವನ್ನು ಹಿಂಪಡೆಯಲು ನಿರ್ಧರಿಸುವುದು ಅತ್ಯಂತ ವಿಷಾದದ ಸಂಗತಿ ಇದರ ಹಿಂದೆ ಕಪ್ಪತ್ತಗುಡ್ಡದ ಸಂಪತ್ತಿಗೆ ಕನ್ನ ಹಾಕುವವರ ಒಳಸಂಚು ಸಂಚು ಅಡಗಿದೆ ಎಂದು ಮಾಜಿ ಸಚಿವ ವಿಧಾನಪರಿಷತ್ತಿನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ತೀವ್ರವಾಗಿ ಆಕ್ಷೇಪಿಸಿದ್ದಾರೆಂದು ಅವ್ವ ಸೇವಾ ಟ್ರಸ್ಟ್ ಸಂಚಾಲಕ ಡಾ. ಬಸವರಾಜ ಧಾರವಾಡ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಅವರು ಬರೆದ ಪತ್ರದಲ್ಲಿ ಅಮೂಲ್ಯ ಔಷಧ ಸಸ್ಯ ಹಾಗೂ ಉತ್ಕಷ್ಟ  ಖನಿಜ ಸಂಪತ್ತನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಕಪ್ಪತ್ತಗುಡ್ಡ ಈ ನಾಡಿನ ಅಮೂಲ್ಯ ಅರಣ್ಯ ಸಂಪತ್ತು. ಈ ಗುಡ್ಡದ ಮೇಲೆ ದಶಕಗಳಿಂದಲೂ ಗಣಿಮಾಫಿಯಾದ ಕೆಂಗಣ್ಣು ಬಿದ್ದಿದೆ. ಈಗಾಗಲೇ ರಾಜ್ಯದ ಹಲವಾರು ಪ್ರದೇಶಗಳ ಪರಿಸರವನ್ನು ಗಣಿ ಮಾಫಿಯಾ ಅರಣ್ಯ ಸಂಪತ್ತನ್ನು ನಾಶಮಾಡಿದ ಗಣಿಗಳ್ಳರು ಕಪ್ಪತ್ತಗುಡ್ಡವನ್ನೂ ನುಂಗುವ ನಿಟ್ಟಿನಲ್ಲಿ ಹಲವಾರು ಬಾರಿ ಮಾಡಿದ ಪ್ರಯತ್ನಗಳು ಸಫಲವಾಗಿಲ್ಲ ಎಂದಿದ್ದಾರೆ.

ವಿಧಾನಸಭೆ ಒಳಗೆ, ಹೊರಗೆ ಮಾಡಿದ ಹೋರಾಟಗಳು, ಕಳೆದ ಮೂರು ದಶಕಗಳಿಂದ ಅನೇಕ ಪರಿಸರಪ್ರೇಮಿಗಳು, ಹೋರಾಟಗಾರರು, ಬುದ್ಧಿ ಜೀವಿಗಳು, ಸ್ವಾಮೀಜಿಗಳು, ಸಮಾಜಮುಖಿ ಹೋರಾಟಗಾರರು, ಗಣಿಗಳ್ಳರ ವಿರುದ್ಧ ಹೊರಾಟ ನಡೆಸುತ್ತಾ ಬಂದಿದ್ದಾರೆ. ಅರಣ್ಯ ಸಂಪತ್ತನ್ನು ಉಳಿಸುವ ಈ ಎಲ್ಲ ಹೋರಾಟಗಾರರ ಫಲವಾಗಿ ಸರಕಾರ ಕಳೆದ ಡಿಸೆಂಬರ್‍ನಲ್ಲಿ ಕಪ್ಪತ್ತಗುಡ್ಡ ಮೀಸಲು ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಆದರೆ ಸರಕಾರ ಕಳೆದ ಎರಡು ದಿನಗಳ ಹಿಂದೆ ತಾನೆ ತೆಗೆದುಕೊಂಡ ನಿರ್ಧಾರವನ್ನು ಈಗ ಹಿಂದೆ ಪಡೆಯುವ ಮೂಲಕ ಪರಿಸರ ವಿರೋಧಿ ನೀತಿ ಅನುಸರಿಸುವುದರ ಜೊತೆಗೆ ದ್ವಂದ್ವ ನೀತಿಯನ್ನು ಅನುಸರಿಸುತ್ತಿರುವುದು ಕಪ್ಪತ್ತಗುಡ್ಡವನ್ನು ಪ್ರೀತಿಸುತ್ತಿದ್ದ ಅನೇಕ ಜನರಿಗೆ ತೀವೃ ನಿರಾಸೆಯಾಗಿದೆ. ಇಂತಹ ಕ್ರಮಗಳು ಶೋಭೆ ತರುವಂತದ್ದಲ್ಲ ಎಂದು ತಿಳಿಸಿದ್ದಾರೆ.
ಸರಕಾರ ತನಗೆ ಬೇಕೆನಿಸಿದಾಗ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡುವುದು ಬೇಡವಾದಾಗ ಹಿಂಪಡೆವ ಇಬ್ಬಗೆ ನೀತಿಯಿಂದ ಸಾಕಷ್ಟು ಅನುಮಾನಗಳು, ಕಾಣದ ಕೈಗಳ ಕಸರತ್ತು ಇಲ್ಲಿ ಕೆಲಸಮಾಡಿದ್ದು ಸ್ಪಷ್ಟವಾಗುತ್ತದೆ. ನಿಸರ್ಗವನ್ನು ಹುಟ್ಟು ಮಾಡುವುದು ಯಾವ ಬ್ರಹ್ಮನಿಂದಲೂ ಸಾಧ್ಯವಿಲ್ಲ. ಔಷಧಿ ಸಸ್ಯಗಳನ್ನು ಸಂರಕ್ಷಿಸುವುದರಿಂದ ಸರ್ವ ರೋಗಕ್ಕೂ ರಾಮಬಾಣವಾದ ಆಯುರ್ವೇದಿಕ್ ಔಷಧಿ ಸಸ್ಯಗಳು ಇಲ್ಲಿನ ಗಿಡಮೂಲಿಕೆಗಳು, ದೇಶದಲ್ಲಿಯೇ ಅಪರೂಪವಾದವುಗಳು. ಇಂತಹ ಅರಣ್ಯ ಅಮೂಲ್ಯ ಸಂಪತ್ತು ಹಾಗೂ ಔಷಧೀಯ ಸಸ್ಯಗಳನ್ನು ಕಾಪಾಡುವುದು ಸಂರಕ್ಷಿಸುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯ. ಮುಂದಿನ ಪೀಳಿಗೆಗೆ ನಿಸರ್ಗವನ್ನು ಉಳಿಸಿಕೊಂಡು ಹೋಗುವುದು ಅತೀ ಅವಶ್ಯವಿದೆ ಎಂದು ಹೇಳಿದ್ದಾರೆ.
ಆದೇಶ ಹಿಂಪಡೆಯಲು ಸರ್ಕಾರ ಕೊಟ್ಟ ಕುಂಟು ನೆಪ ಎಂತದ್ದು ಎನ್ನುವುದು ಎಂತಹ ಸರ್ವೇ ಸಾಮಾನ್ಯ ಜನರಿಗೂ ಅರ್ಥವಾಗುತ್ತದೆ. ಕಪ್ಪತ್ತಗುಡ್ಡವನ್ನು ಸಂರಕ್ಷಣಾ ಮೀಸಲು ಪ್ರದೇಶ ಎಂದು ಘೋಷಿಸುವ ಪೂರ್ವದಲ್ಲಿ ಸ್ಥಳೀಯರಿಂದ ಅರ್ಜಿ, ಅಭಿಪ್ರಾಯ, ಅಹವಾಲು, ಸ್ವೀಕರಿಸಿ ವಿಚಾರಣೆ ಮಾಡಲಿಲ್ಲ ಎಂಬ ಕುಂಟು ನೆಪದಿಂದ ಅಧಿಸೂಚನೆಯನ್ನು ರದ್ದು ಮಾಡಿದ್ದರ ಹಿಂದಿನ ರಹಸ್ಯ ಏನು ಎಂಬುದು ಅರ್ಥವಾಗದೇ ಇರುವುದು ಈ ಕಾರ್ಯಕ್ಕೆ ಅಡ್ಡಿಯಾದವರು ಯಾವ ಜನಸಾಮಾನ್ಯರ ಅರ್ಜಿ, ತಂಟೆ ತರಕಾರು ತೆಗೆದವರಾರು, ಅಂತಹವರ ವಿವರವನ್ನು ಸರಕಾರ ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಾಣದ ಕೈಗಳ ಆಟ ಇಲ್ಲಿ ನಡೆದಿರುವುದು ಸ್ಪಷ್ಟವಾಗಿದೆ. ಅಲ್ಲದೇ ಅವರ ಕೈ ಮೇಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅರಣ್ಯ ಸಂಪತ್ತನ್ನು ಲೂಟಿ ಮಾಡುವವರ ಲಾಬಿ ಇಲ್ಲಿ ದೊಡ್ಡಮಟ್ಟದ ಕೆಲಸ ಮಾಡಿದೆ. ಸಂರಕ್ಷಿತ ಅರಣ್ಯ ಮೀಸಲು ಪ್ರದೇಶದಲ್ಲಿ ಅರಣ್ಯೇತರ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳುವುದು ಸುಲಭವಲ್ಲ. ಜೊತೆಗೆ ಅರಣ್ಯ ಇಲಾಖೆಯ ಜೊತೆ ಕೇಂದ್ರ ವನ್ಯ ಜೀವಿ ಮಂಡಳಿ ಪರವಾನಿಗೆಯು ಅದಕ್ಕೆ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಪ್ರಮುಖ ಗಣಿ ಮಾಲಿಕರಿಗೆ, ಕಂಪನಿಗಳಿಗೆ ಅನುಕೂಲ ಮಾಡ ಲೆಂದು ಇಂತಹ ನಿರ್ಧಾರಕ್ಕೆ ಸರಕಾರ ಬಂದಿದೆ ಎಂದು ಹೊರಟ್ಟಿಯವರು ತೀವ್ರವಾಗಿ ಆರೋಪಿಸಿದ್ದಾರೆ ಎಂದು ಡಾ. ಬಸವರಾಜ ಧಾರವಾಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಸರ್ಕಾರದ ಈ ನಿರ್ಧಾರದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುವ ಮೂಲಕ ಕಪ್ಪತ್ತಗುಡ್ಡಕ್ಕೆ ಕನ್ನ ಹಾಕುವವರ ಕನಸಿಗೆ ಕಲ್ಲು ಹಾಕುವುದು ನಿಶ್ಚಿತ ಎಂದು ಬಸವರಾಜ ಹೊರಟ್ಟಿಯವರು ತಿಳಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin