ಕಪ್ಪು ಹಣ ಬದಲಾವಣೆಗೆ ವಾಮಮಾರ್ಗ : ಬಿಲ್ಡರ್ಸ್‍ ಮೇಲೆ ಐಟಿ ಅಧಿಕಾರಿಗಳ ಕಣ್ಣು

ಈ ಸುದ್ದಿಯನ್ನು ಶೇರ್ ಮಾಡಿ

Income-Tax

ನವದೆಹಲಿ,ನ.19- ಅಧಿಕ ಮೌಲ್ಯದ ನೋಟುಗಳನ್ನು ಅಮಾನ್ಯಗೊಳಿಸಿದ ನಂತರ ದೇಶದ ವಿವಿಧೆಡೆ ಕದ್ದು ಮುಚ್ಚಿ ನಡೆಯುತ್ತಿರುವ ಕಪ್ಪು ಹಣ ಬದಲಾವಣೆಗೆ ವಾಮಮಾರ್ಗ ಅನುಸರಿಸುತ್ತಿರುವುದನ್ನು ಬಯಲಿ ಗೆಳೆಯಲು ದಾಳಿಗಳನ್ನು ತೀವ್ರಗೊಳಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇದೀಗ ಬಿಲ್ಡರ್‍ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಚಿನ್ನಾಭರಣ ಮಾರಾಟಗಾರರು, ಚಿನಿವಾರಪೇಟೆ ದಲ್ಲಾಳಿಗಳು, ಸರಾಫ್ ವರ್ತಕರು ಮತ್ತು ಹವಾಲಾ ವಹಿವಾಟುದಾರರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿರುತ್ತಿರುವ ಐಟಿ ಅಧಿಕಾರಿಗಳಿಗೆ ಬಿಲ್ಡರ್‍ಗಳು ಸಹ ವ್ಯವಸ್ಥಿತ ರೀತಿಯಲ್ಲಿ ನಿಷೇಧಿತ ಹಳೆ ನೋಟುಗಳಲ್ಲೇ ಭಾರೀ ವಿನಿಮಯ ವಹಿವಾಟು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ರಾಜಧಾನಿ ದೆಹಲಿ-ಎನ್‍ಸಿಆರ್, ಬೆಂಗಳೂರು, ಮೀರತ್, ಅಲಹಾಬಾದ್, ಲಖನೌ, ಕೋಲ್ಕತ್ತ ಮತ್ತು ಮಧ್ಯಪ್ರದೇಶದ ಇತರ ನಗರಗಳಲ್ಲಿ ಅಕ್ರಮ ವಹಿವಾಟುಗಳಲ್ಲಿ ತೊಡಗಿರುವ ದೊಡ್ಡ ದೊಡ್ಡ ಬಿಲ್ಡರ್‍ಗಳ ಮಾಹಿತಿಯನ್ನು ಕಲೆಹಾಕಿರುವ ಅಧಿಕಾರಿಗಳು ಪಟ್ಟಿಯೊಂದನ್ನು ಸಿದ್ದಗೊಳಿಸಿದ್ದಾರೆ. ಇದರೊಂದಿಗೆ ಅತೀ ಶೀಘ್ರದಲ್ಲೇ ಕಾನೂನು ಬಾಹಿರ ವಹಿವಾಟಿನಲ್ಲಿ ತೊಡಗಿರುವ ಬಿಲ್ಡರ್‍ಗಳ ಮೇಲೆ ದಾಳಿ ನಡೆಸಲು ಸಜ್ಜಾಗುತ್ತಿದ್ದಾರೆ.  ಪ್ರಧಾನಿ ನರೇಂದ್ರಮೋದಿ 500 ಮತ್ತು 1000 ರೂ.ಗಳ ನೋಟುಗಳನ್ನು ಅಮಾನ್ಯಗೊಳಿಸುತ್ತಿದ್ದಂತೆ ವಾಮಮಾರ್ಗಗಳ ಮೂಲಕ ಕ್ರಿಯಾಶೀಲರಾಗಿರುವ ದೊಡ್ಡ ದೊಡ್ಡ ಬಿಲ್ಡರ್‍ಗಳು ಮತ್ತು ಕಟ್ಟಡ ನಿರ್ಮಾತೃಗಳು ಕಮೀಷನ್ ಏಜೆಂಟ್‍ಗಳ ಮೂಲಕ ತಮ್ಮಲ್ಲಿರುವ ಭಾರೀ ಮೊತ್ತದ ಹಣವನ್ನು ಹೊಸ ಕರೆನ್ಸಿಗಳಿಗೆ ತರಾತುರಿಯಲ್ಲಿ ವಿನಿಮಯದಲ್ಲಿ ತೊಡಗಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ.

ಈ ಹಿನ್ನೆಲೆಯಲ್ಲಿ ಬಿಲ್ಡರ್‍ಗಳು ಮತ್ತು ಅವರ ಕಮೀಷನ್ ದಲ್ಲಾಳಿಗಳ ಮೇಲೆ ದೇಶಾದ್ಯಂತ ಸರ್ವೇ ನಡೆಸಿ ಶೀಘ್ರದಲ್ಲೇ ಏಕಕಾಲದಲ್ಲಿ ಅವರ ಮೇಲೆ ಮುಗಿಬೀಳಲು ಷಡ್ಯಂತ್ರ ರೂಪಿಸಿದ್ದಾರೆಂದು ಮೂಲಗಳು ತಿಳಿಸಿವೆ.  ದೇಶದ ಪ್ರಮುಖ ಮಹಾನಗರಗಳಲ್ಲಿ ಇರುವ ಬಿಲ್ಡರ್‍ಗಳ ರಹಸ್ಯ ಸರ್ವೆ ಕಾರ್ಯ ಬಹುತೇಕ ಮುಗಿದಿದ್ದು ಅವರ ಹೆಸರಿನಲ್ಲಿರುವ ಅಸ್ತಿಪಾಸ್ತಿಗಳು, ಹಣಕಾಸು ವಹಿವಾಟುಗಳು, ಷೇರು ವ್ಯವಹಾರಗಳು ಮೊದಲಾದವುಗಳ ಬಗ್ಗೆ ಮಾಹಿತಿ ಕ್ರೋಢೀಕರಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin