ಕಪ್ಪ ಕಾಣಿಕೆ ಡೈರಿ ಎಫೆಕ್ಟ್, ಸಂಪುಟ ಸರ್ಜರಿಗೆ ಮುಂದಾದ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--CM

ಬೆಂಗಳೂರು, ಫೆ.25- ಹೈಕಮಾಂಡ್‍ಗೆ ನೀಡಿರುವ ಕಪ್ಪ ಕಾಣಿಕೆ ವಿವರ ಒಳಗೊಂಡ ಡೈರಿ ಬಯಲಾಗಿರುವ ಪ್ರಕರಣ ಸಿದ್ದರಾಮಯ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.  ನಾಲ್ಕು ವರ್ಷ ಅವಧಿ ಮುಗಿಸಿರುವ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರನ್ನು ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಹೈಕಮಾಂಡ್ ವರಿಷ್ಠರೊಂದಿಗೆ ಮುಖ್ಯಮಂತ್ರಿಗಳು ಗಂಭೀರ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.  ಡೈರಿ ಬಿಡುಗಡೆ ಕಾಂಗ್ರೆಸ್‍ಗೆ ಮುಳುವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ನಾಳೆ ಸಮನ್ವಯ ಸಮಿತಿ ಸಭೆಯಲ್ಲಿ ಹಿರಿಯ ಮುಖಂಡರೊಂದಿಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಮುಖಂಡ ದಿಗ್ವಿಜಯ್‍ಸಿಂಗ್ ನಗರಕ್ಕೆ ಆಗಮಿಸಲಿದ್ದು, ನಾಳೆ ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಿರಿಯ ಸಚಿವರಾದ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಎಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ಟಿ.ಬಿ.ಜಯಚಂದ್ರ ಮುಂತಾದವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರನ್ನು ನೇಮಕ ಮಾಡಿಕೊಳ್ಳಲು ಗಂಭೀರ ಚರ್ಚೆ ನಡೆಸಿರುವುದು ತಿಳಿದುಬಂದಿದೆ.  ಇವರನ್ನು ಪಕ್ಷ ಸಂಘಟನೆಗೆ ಬಳಸಿಕೊಂಡು ಹೊಸಬರನ್ನು ಸಚಿವರನ್ನಾಗಿ ನೇಮಿಸಿ ಡೈರಿ ಮುಜುಗರದಿಂದ ಪಾರಾಗಲು ಕಾಂಗ್ರೆಸ್ ಪ್ಲಾನ್ ರೂಪಿಸಿದೆ. ಜತೆಯಲ್ಲಿಯೇ ಬಿಜೆಪಿ ಅವಾಂತರಗಳು ಹಾಗೂ ಯಡಿಯೂರಪ್ಪನವರ ಭ್ರಷ್ಟಾಚಾರದ ಪ್ರಕರಣಗಳನ್ನು ಮತ್ತೆ ಕೆದಕಲು ತೀರ್ಮಾನಿಸಲಾಗಿದೆ.

ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಸಿಕ್ಕ ಡೈರಿಯಲ್ಲಿ ಉಲ್ಲೇಖವಾಗಿರುವ ಸಚಿವರ ಹೆಸರುಗಳು, ಹೈಕಮಾಂಡ್‍ಗೆ ಸಲ್ಲಿಸಿರುವ ಕಪ್ಪ ಕಾಣಿಕೆಯ ವಿವರಗಳು ಕಾಂಗ್ರೆಸ್ ಮುಖಂಡರನ್ನು ಕಾನೂನಿನ ಕುಣಿಕೆಯಲ್ಲಿ ಸಿಲುಕಿಸುವ ಸಾಧ್ಯತೆಗಳು ಹೆಚ್ಚಾಗಿವೆ.   ಹೀಗಾಗಿ ಕಾಂಗ್ರೆಸ್ ಪಕ್ಷ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಕಾನೂನು ಹೋರಾಟ ಒಂದೆಡೆಯಾದರೆ, ಮುಜುಗರದಿಂದ ತಪ್ಪಿಸಿಕೊಳ್ಳಲು ಸಂಪುಟಕ್ಕೆ ಸರ್ಜರಿ ಮಾಡುವ ಉದ್ದೇಶ ಹೊಂದಿದ್ದು, ಬಜೆಟ್ ನಂತರ ಸಂಪುಟಕ್ಕೆ ಮೇಜರ್ ಸರ್ಜರಿಯಾಗುವ ಸಾಧ್ಯತೆ ಇದೆ.

ರಾಜ್ಯಮಟ್ಟದಲ್ಲಿ ಈ ಹಗರಣ ಚರ್ಚೆಗೆ ಕಾರಣವಾಗಿದ್ದು, ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್‍ಗೆ ಕಂಟಕವಾಗುವ ಸಾಧ್ಯತೆಯಿದೆ ಎಂಬ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರು ರಾಜ್ಯ ಸರ್ಕಾರದ ಪ್ರಮುಖರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.  ಗೋವಿಂದರಾಜುರಂತಹ ವ್ಯಕ್ತಿಯನ್ನು ಆಪ್ತ ಬಳಗದಲ್ಲಿಟ್ಟುಕೊಂಡು ಇಡೀ ಕಾಂಗ್ರೆಸ್ ಬುಡಕ್ಕೆ ಸಿದ್ದರಾಮಯ್ಯ ತಂದಿಟ್ಟಿದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.  ಈಗಾಗಲೇ ಸಿದ್ದು ವಿರುದ್ಧ ಸಮರ ಸಾರಿದ್ದ ಹಿರಿಯ ಕಾಂಗ್ರೆಸಿಗರು, ಮೂಲ ಕಾಂಗ್ರೆಸಿಗರಿಗೆ ಡೈರಿ ಅಸ್ತ್ರ ಪ್ರಬಲವಾಗಿ ಸಿಕ್ಕಂತಾಗಿದೆ. ನಾಳೆ ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಸಿದ್ದು ಬಣದ ಮೇಲೆ ಹರಿಹಾಯಲು ಕತ್ತಿ ಮಸೆಯುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin