ಕಬ್ಬನ್‍ಪಾರ್ಕ್‍ನಲ್ಲಿ ವಾಹನ ಸಂಚಾರ ನಿರ್ಬಂಧ..?

ಈ ಸುದ್ದಿಯನ್ನು ಶೇರ್ ಮಾಡಿ

cubbon-park
ಬೆಂಗಳೂರು, ಮೇ 23- ನಗರ ಕೇಂದ್ರ ಭಾಗದಲ್ಲಿರುವ ಪ್ರಮುಖ ಉದ್ಯಾನ ಕಬ್ಬನ್ ಪಾರ್ಕ್‍ನಲ್ಲಿ ಭಾನುವಾರ ವಾಹನ ನಿಷೇಧಗೊಳಿಸಿದ್ದು ತಿಳಿದಿರುವ ವಿಚಾರ. ಆದರೆ, ವಾರದ ಎಲ್ಲಾ ದಿನವೂ ವಾಹನ ಪ್ರವೇಶ ನಿರ್ಬಂಧಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ ಎನ್ನುವುದು ಹೊಸ ವಿಚಾರ.
ಕಬ್ಬನ್ ಉದ್ಯಾನ ಸಾಮಾನ್ಯವಾಗಿ ಉದ್ಯಾನ  ಅನ್ನುವುದಕ್ಕಿಂತ ನಗರ ಕೇಂದ್ರಭಾಗದ ವಿವಿಧ ಭಾಗವನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ.ಕಾರ್ಪೊರೇಷನ್, ಇನ್ನೊಂದೆಡೆ ಯುಬಿ ಸಿಟಿ, ಮಹಾತ್ಮ ಗಾಂಧಿ ರಸ್ತೆ, ವಿಧಾನಸೌಧ, ಹೈಕೋರ್ಟ್, ಕೆಆರ್ ವೃತ್ತ, ನೃಪತುಂಗ ರಸ್ತೆ ಸೇರಿದಂತೆ ಹಲವು ಪ್ರಮುಖ ತಾಣಗಳ ಮಧ್ಯ ಇರುವ ಉದ್ಯಾನ ಈ ತಾಣಗಳನ್ನು ಪರಸ್ಪರ ಸಂಪರ್ಕಿಸುವ ಸರಳ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ.  ಸಾವಿರಾರು ವಾಹನಗಳು ಇದರ ಒಳಗಿನಿಂದಲೇ ನಿತ್ಯ ಹಾದು ಹೋಗುತ್ತಿದ್ದು, ಉದ್ಯಾನಕ್ಕೆ ಆಗಮಿಸುವವರಿಗೆ, ಪಕ್ಷಿಗಳು, ಜೀವ ಸಂಕುಲಗಳಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಇದನ್ನು ಪರಿಸರವಾದಿಗಳು ಕೂಡ ತೀವ್ರವಾಗಿ ವಿರೋಧಿಸುತ್ತಿದ್ದಾರೆ.   ಇದರಿಂದ ಎಲ್ಲರ ಒತ್ತಡ ಕೇಳಿ ಬಂದ ಹಿನ್ನೆಲೆ ವಾರಕ್ಕೊಮ್ಮೆ ವಾಹನ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಲಾಗಿತ್ತು. ಇದರ ಯಶಸ್ಸು ಕಂಡು ಇದೀಗ  ಪಾರ್ಕ್‍ನ ಎರಡು ಮಾರ್ಗಗಳನ್ನು ಹೊರತುಪಡಿಸಿ ಉಳಿದೆಲ್ಲ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ಶಾಶ್ವತವಾಗಿ ನಿರ್ಬಂಧಿಸಲು ತೊಟಗಾರಿಕೆ ಇಲಾಖೆ ತಿರ್ಮಾನಿಸಿದೆ.

ಹೈಕೊರ್ಟ್‍ನಿಂದ ಯುಬಿ ಸಿಟಿಗೆ ಸಾಗುವ ಹಾಗೂ ಯುಬಿ ಸಿಟಿಯಿಂದ ಎಂಎಸ್ ಬಿಲ್ಡಿಂಗ್ ಸಂಪರ್ಕಿಸುವ ಮಾರ್ಗ ಹೊರತುಪಡಿಸಿ ಉಳಿದ ಮಾರ್ಗ ಮುಚ್ಚಲು ಮುಂದಾಗಿದೆ. ಈ ಮಾರ್ಗಗಳಿಗೆ ಮಾತ್ರ ಸದ್ಯ ವಿನಾಯಿತಿ ನೀಡಲಾಗಿದೆ.  ಇಲಾಖೆಯ ಈ ಕ್ರಮದಿಂದ ಕಬ್ಬನ್ ಪಾರ್ಕ್ ಒಳಗಿನಿಂದ ಸಾಗುವ ಹಡ್ಸನ್ ವೃತ್ತ, ಬಾಲಭವನ, ಕೆ.ಆರ್.ವೃತ್ತ ಮಾರ್ಗಗಳಲ್ಲಿ ವಾಹನ ಸಂಚಾರ ಇರುವುದಿಲ್ಲ. ಈ ಮಾರ್ಗಗಳಲ್ಲಿ ಉದ್ಯಾನವನ ಅಭಿವೃದ್ಧಿ ಪಡಿಸಲು ಕೂಡ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.

 

ಪ್ರವೇಶದ್ವಾರ ಸಂಪೂರ್ಣ ಬಂದ್:

ಹಡ್ಸನ್ ವೃತ್ತ ಸೇರಿ ಇತರೆಡೆ ಗುರುತಿಸಿರುವ ಮಾರ್ಗಗಳನ್ನು ಶಾಶ್ವತವಾಗಿ ಮುಚ್ಚಲು ತಿರ್ಮಾನಿಸಲಾಗಿದೆ. ಹಡ್ಸನ್ ವೃತ್ತ ಹಾಗೂ ಕೆ.ಆರ್. ವೃತ್ತದಿಂದಲೂ ನಿತ್ಯ ಸಾವಿರಾರು ವಾಹನಗಳು ಪ್ರವೇಶಿಸುತ್ತವೆ. ಈ ಗೇಟ್‍ಗಳನ್ನು ಮುಚ್ಚುವುದು ಕಬ್ಬನ್ ಪಾರ್ಕ್‍ನ ಪಾಲಿಗೆ ಮಹತ್ವದ ತಿರ್ಮಾನವಾಗಿದೆ.  ಬಿಬಿಎಂಪಿ ಬಳಿಯಿಂದ ವಿಧಾನಸೌಧ ತಲುಪಲು ಹಡ್ಸನ್ ವೃತ್ತದ ಮಾರ್ಗ ಪ್ರಮುಖವಾಗಿ ಬಳಕೆಯಾಗುತಿತ್ತು. ಸುತ್ತುಹಾಕಿ ವಿಧಾನಸೌಧ ತಲುಪುವುದಕ್ಕೂ ಬ್ರೆಕ್ ಹಾಕಲಾಗಿತ್ತು. ಆದರೆ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚಳವಾಗುತ್ತಿರುವುದರಿಂದ ಉದ್ಯಾನವನದ ಪರಿಸರಕ್ಕೆ ಧಕ್ಕೆಯಾಗುತ್ತಿದೆ.  ಆದರೆ, ನೃಪತುಂಗ ರಸ್ತೆ ಕಾಮಗಾರಿಯಿಂದ ಉಂಟಾಗಿರುವ ನಷ್ಟ ಸರಿದೂಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಪರಿಸರ ದೃಷ್ಟಿಯಿಂದ ಉದ್ಯಾನವನ್ನು ಉಳಿಸುವುದರ ಕಡೆ ಒತ್ತು ನೀಡಬೇಕೆಂದು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಒತ್ತಾಯಿಸಿತ್ತು.

ಕಳೆದ 2-3 ತಿಂಗಳಿಂದ ನೃಪತುಂಗ ರಸ್ತೆಯಲ್ಲಿ ಟೆಂಡರ್‍ಶೂರ್ ಕಾಮಗಾರಿ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್‍ನಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ ಉದ್ಯಾನವನದಲ್ಲಿನ ಸಾವಿರಾರು ಪಕ್ಷಿಗಳು ಸಾವನ್ನಪ್ಪಿದವು. ಅಲ್ಲದೇ ಮಾಲಿನ್ಯ ಹೆಚ್ಚಾಗಿ 7,300 ಮರಗಳ ಮೆಲೂ ಪರಿಣಾಮ ಬೀರಿತ್ತು. ಇದೀಗ ನೃಪತುಂಗ ರಸ್ತೆಯಲ್ಲಿ ಮತ್ತೆ ಸಂಚಾರ ಆರಂಭವಾಗಿದ್ದು, ಕಬ್ಬನ್‍ಪಾರ್ಕ್‍ನಲ್ಲಿ ಕೆಲ ಬದಲಾವಣೆ ತರಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಕಬ್ಬನ್ ಪಾರ್ಕ್‍ಗೆ ಒಟ್ಟು 7 ಪ್ರವೇಶ ದ್ವಾರಗಳಿವೆ. ಈ ಪೈಕಿ 4 ಪ್ರವೇಶದ್ವಾರಗಳು ಮುಚ್ಚಲಿದ್ದು, ಎರಡು ಕಡೆಗಳಲ್ಲಿ ಮೂರು ಪ್ರವೇಶದ್ವಾರಗಳು ಸಂಚಾರಕ್ಕೆ ತೆರೆದಿರಲಿವೆ.

ಹೈಕೊರ್ಟ್‍ನಿಂದ ಯುಬಿ ಸಿಟಿ ಸಂಪರ್ಕಿಸುವ ಮಾರ್ಗದಲ್ಲೂ ಸಾವಿರಾರು ವಾಹನಗಳು ಓಡಾಡುತ್ತಿವೆ.  ಈ ಮಾರ್ಗ ಮುಚ್ಚಿದರೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ತಕ್ಷಣಕ್ಕೆ ಕಷ್ಟವಾಗಲಿದೆ.  ಇದರಿಂದ ಹೊರಭಾಗದಲ್ಲಿ ಟ್ರಾಫಿಕ್ ಹೆಚ್ಚಾಗುವುದರಿಂದ ಸದ್ಯಕ್ಕೆ ಈ ಮಾರ್ಗಗಳನ್ನು ಮುಚ್ಚುತ್ತಿಲ್ಲವೆಂದು ತೊಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರದ ಒಪ್ಪಿಗೆ ನಿರೀಕ್ಷೆ:ಸಂಚಾರ ಮುಕ್ತಗೊಳಿಸಲು ತೊಟಗಾರಿಕೆ ಇಲಾಖೆ ತಿರ್ಮಾನಿಸಿದ್ದು, ಸರ್ಕಾರದ ಒಪ್ಪಿಗೆಗೆ ಕಾಯುತ್ತಿದೆ. ಆದೇಶ ಹೊರಬೀಳುತ್ತಿದ್ದಂತೆ ಪ್ರವೇಶದ್ವಾರಗಳನ್ನು ಮುಚ್ಚಿ, ಮುಂದಿನ ಹಂತದಲ್ಲಿ ಈ ಮಾರ್ಗಗಳಲ್ಲಿ ನಡಿಗೆದಾರ ಪಥವನ್ನು ನಿರ್ಮಿಸಲು ಚಿಂತನೆ ನಡೆಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin