ಕಮಲಕ್ಕೆ ತೆನೆ ಹೊತ್ತ ಮಹಿಳೆಯ ಸಾಥ್ : ಬಿಬಿಎಂಪಿಗೆ ಬಿಜೆಪಿ ಮೇಯರ್.. ?

ಈ ಸುದ್ದಿಯನ್ನು ಶೇರ್ ಮಾಡಿ

BBMp--041

ಬೆಂಗಳೂರು, ಆ.14-ಕಾಂಗ್ರೆಸ್ ಸಹವಾಸದಿಂದ ಬೇಸತ್ತಿರುವ ಜೆಡಿಎಸ್ ಮುಂದಿನ ಮೇಯರ್ ಆಯ್ಕೆ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ತನ್ನ ಬೆಂಬಲ ಸೂಚಿಸಲು ಸಮ್ಮತಿಸಿದ್ದು, ಈ ಬಾರಿ ಬಿಜೆಪಿಗೆ ಮೇಯರ್ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ.  ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಈ ಬಗ್ಗೆ ಬಿಜೆಪಿ ಮುಖಂಡರಿಗೆ ಆಶ್ವಾಸನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ಈ ಸಂಜೆಗೆ ಖಚಿತಪಡಿಸಿವೆ.  ಮೇಯರ್ ಸ್ಥಾನ ಬಿಸಿಬಿ ಮಹಿಳೆಗೆ ಮೀಸಲಾಗಿರುವುದರಿಂದ ಬಿಜೆಪಿ ಸದಸ್ಯರಲ್ಲಿ ಮೇಯರ್ ಆಯ್ಕೆ ಬಗ್ಗೆ ಅಷ್ಟೇನೂ ಉತ್ಸಾಹ ಕಂಡು ಬರುತ್ತಿಲ್ಲ. ಆದರೂ ಕಳೆದ ಬಾರಿ ಆದ ಅವಮಾನದಿಂದ ಪಕ್ಷಕ್ಕೆ ಆಗಿರುವ ಹಾನಿಯಿಂದ ಹೊರಬರಲು ಮೇಯರ್ ಸ್ಥಾನವನ್ನು ಪಡೆದೇ ತೀರಬೇಕು ಎಂಬ ಹಠಕ್ಕೆ ಬಿಜೆಪಿ ಬಂದಿದೆ.

ಬಿಜೆಪಿ ಈ ತಂತ್ರಕ್ಕೆ ಪ್ರತಿತಂತ್ರ ಹೆಣೆಯುತ್ತಿರುವ ಕಾಂಗ್ರೆಸ್ ನಗರದಿಂದ ಹೊರಭಾಗದಲ್ಲಿ ವಾಸಿಸುತ್ತಿರುವ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರ ವಿಳಾಸ ಬದಲಾವಣೆಗೆ ಮುಂದಾಗಿವೆ.  ವಿಧಾನಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ರಿಜ್ವಾನ್ ಅರ್ಷದ್, ಆರ್.ಬಿ.ತಿಮ್ಮಾಪುರ, ಅಲ್ಲಂವೀರಭದ್ರಪ್ಪ, ರಾಜ್ಯಸಭೆ ಸದಸ್ಯರಾದ ಕೆ.ಸಿ.ರಾಮಮೂರ್ತಿ, ಆಸ್ಕರ್ ಫರ್ನಾಂಡೀಸ್ ಅವರು ಈಗಾಗಲೇ ಫಾರಂ ನಂ.7ರ ಮೂಲಕ ತಮ್ಮ ವಿಳಾಸಗಳನ್ನು ಬೆಂಗಳೂರಿಗೆ ವರ್ಗಾಯಿಸಿಕೊಂಡಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಮೇಯರನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದ ಶಾಸಕರಾದ ಬೈರತಿ ಬಸವರಾಜ್, ಮುನಿರತ್ನ ಹಾಗೂ ಎಸ್.ಟಿ.ಸೋಮಶೇಖರ್ ಅವರು ಈ ಬಾರಿ ಮೆತ್ತಗಾಗಿದ್ದಾರೆ.

ಕಾಂಗ್ರೆಸ್ ಮೇಯರ್ ಅನ್ನು ಅಧಿಕಾರಕ್ಕೆ ತಂದರೂ ತಮಗೆ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಮತ್ತೆ ಅಂತಹ ಸಾಹಸಕ್ಕೆ ಕೈ ಹಾಕುವ ಗೋಜಿಗೆ ಹೋಗುವುದಿಲ್ಲ ಎಂದು ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.  ಆದರೂ ಪಕ್ಷದ ವರ್ಚಸ್ಸಿನ ಪ್ರಶ್ನೆ ಹಿನ್ನೆಲೆಯಲ್ಲಿ ಮತ್ತೆ ಮೇಯರ್ ಸ್ಥಾನವನ್ನು ದಕ್ಕಿಸಿಕೊಳ್ಳಲೇಬೇಕು ಎನ್ನುವುದು ಕಾಂಗ್ರೆಸ್ ಮುಖಂಡರ ಅಭಿಪ್ರಾಯವಾಗಿದೆ.  ಹೀಗಾಗಿ ಯಾವುದೇ ಪಕ್ಷ ಅಧಿಕಾರ ಹಿಡಿಯಲು ಜೆಡಿಎಸ್‍ನ ಸಹಕಾರ ಅತ್ಯಗತ್ಯವಾಗಿರುವುದರಿಂದ ಪಕ್ಷದ ಮುಖಂಡರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿಯವರನ್ನು ಮನವೊಲಿಸಲು ಹಲವಾರು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ. ಆದರೆ ಕಾಂಗ್ರೆಸ್ ವರ್ತನೆಯಿಂದ ಬೇಸತ್ತಿರುವ ಜೆಡಿಎಸ್ ಮುಖಂಡರು ತಮಗೆ ಬೆಂಬಲ ನೀಡಲು ಹಿಂದೇಟು ಹಾಕಿದರೆ ಪಕ್ಷೇತರರು ಹಾಗೂ ಜೆಡಿಎಸ್ ಬಂಡಾಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಪಕ್ಷದ ಸಂಸದರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಬೆಂಬಲದೊಂದಿಗೆ ಮೇಯರ್ ಸ್ಥಾನ ದಕ್ಕಿಸಿಕೊಳ್ಳಲು ಕಾಂಗ್ರೆಸ್ ಮುಖಂಡರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಆದರೆ ಕಳೆದ ಬಾರಿ ಉಗ್ರಪ್ಪ ಅವರು ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಿದ್ದನ್ನು ಹಾಗೂ ಅವರು ಪಾವಗಡದ ವೆಂಕಟಾಪುರದಲ್ಲಿ ಮತದಾನ ಗುರುತಿನ ಚೀಟಿ ಹೊಂದಿರುವುದನ್ನು ಪ್ರಶ್ನಿಸಿ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು, ಅದರ ತೀರ್ಪು ಇನ್ನೂ ಹೊರಬಿದ್ದಿಲ್ಲ.   ಆದಾಗ್ಯೂ, ಕಾಂಗ್ರೆಸ್ ಮುಖಂಡರು ವಿಧಾನಪರಿಷತ್, ಶಾಸಕರು, ರಾಜ್ಯಸಭಾ ಸದಸ್ಯರ ವಿಳಾಸವನ್ನು ಬೆಂಗಳೂರಿಗೆ ವರ್ಗಾಯಿಸಿಕೊಂಡು ಮೇಯರ್ ಸ್ಥಾನವನ್ನು ಪಡೆದೇ ತೀರಬೇಕೆಂಬ ಹಠಕ್ಕೆ ಬಿದ್ದಿದ್ದಾರೆ.
ಆದರೆ ಕಳೆದ ಬಾರಿ 101 ಸ್ಥಾನಗಳನ್ನು ಹೊಂದಿದ್ದರೂ ಕೂದಲೆಳೆ ಅಂತರದಿಂದ ಅಧಿಕಾರ ವಂಚಿತರಾಗಿ ಅಪಹಾಸ್ಯಕ್ಕೀಡಾಗಿದ್ದ ಬಿಜೆಪಿ ಮುಖಂಡರು ಈ ಬಾರಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದಾರೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್‍ಗೆ ಬೆಂಬಲ ನೀಡುವುದಿಲ್ಲ. ಬಿಜೆಪಿಯವರೊಂದಿಗೆ ಕೈ ಜೋಡಿಸಲು ಸಿದ್ಧ. ಯಾವುದೇ ಆತಂಕಕ್ಕೊಳಗಾಗಬೇಡಿ ಎಂದು ಅಭಯ ನೀಡಿದ್ದಾರೆ ಎನ್ನಲಾಗಿದ್ದು, ಇದರ ಉಸ್ತುವಾರಿಯನ್ನು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರ ಹೆಗಲಿಗೆ ಹೊರಿಸಲಾಗಿದೆ. ಹೀಗಾಗಿ ಸೆ.19 ರಂದು ನಡೆಯಲಿರುವ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಯಾವ ಪಕ್ಷದ ರಾಜಕೀಯ ತಂತ್ರಗಾರಿಕÉ ಯಶಸ್ವಿಯಾಗುವುದೋ, ಆ ಪಕ್ಷದ ಅಭ್ಯರ್ಥಿ ಮೇಯರ್ ಆಗುವುದು ಖಚಿತ.

ನಾವ್ ರೆಡಿ:

ಕಾಂಗ್ರೆಸ್ ವಶದಲ್ಲಿರುವ ಮೇಯರ್ ಸ್ಥಾನವನ್ನು ಈ ಬಾರಿ ನಮ್ಮ ತೆಕ್ಕೆಗೆ ತೆಗೆದುಕೊಳ್ಳಲು ನಾವ್ ರೆಡಿ. ಆದರೆ ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರ ಗ್ರೀನ್ ಸಿಗ್ನಲ್ ಬೇಕು ಅಷ್ಟೆ ಎನ್ನುತ್ತಾರೆ ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ.   ಕಾಂಗ್ರೆಸ್‍ನವರು ಮೇಯರ್ ಸ್ಥಾನ ಉಳಿಸಿಕೊಳ್ಳಲು ಯಾವುದೇ ತಂತ್ರ ಬಳಸಲಿ. ಅದಕ್ಕೆ ಪ್ರತಿತಂತ್ರ ನಮ್ಮ ಬಳಿ ರೆಡಿ ಇದೆ. ವರಿಷ್ಠರು ಎಸ್ ಎಂದರೆ ಸಾಕು ಮುಂದಿನ ನಮ್ಮ ತಂತ್ರ ಏನೆಂಬುದನ್ನು ಸೆ.19ರಂದು ನಡೆಯಲಿರುವ ಚುನಾವಣೆಯಲ್ಲಿ ತೋರಿಸುತ್ತೇವೆ ಎಂದು ಅವರು ಸವಾಲು ಹಾಕಿದ್ದಾರೆ. ಮೇಯರ್ ರೇಸ್‍ನಲ್ಲಿ ಯಾರು? ಸೆ.19 ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರಕಾಶ್‍ನಗರ ವಾರ್ಡ್‍ನ ಜಿ.ಪದ್ಮಾವತಿ ಮೇಯರ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸುವುದು ಬಹುತೇಕ ಖಚಿತ.
ಬಿಜೆಪಿ ಮೇಯರ್ ರೇಸ್‍ನಲ್ಲಿ ಗಣೇಶ ಮಂದಿರ ವಾರ್ಡ್‍ನ ಲಕ್ಷ್ಮೀ ಉಮೇಶ್, ಸಿವಿ ರಾಮನ್ ನಗರದ ಅರುಣಾ ರವಿ, ದೀಪಾಂಜಲಿನಗರ ವಾರ್ಡ್‍ನ ಅನುಪಮಾ ಧರ್ಮಪಾಲ್ ಅವರ ಹೆಸರು ಕೇಳಿ ಬರುತ್ತಿವೆ.   ಕಳೆದ ಬಿಜೆಪಿ ಅವಧಿಯಲ್ಲಿ ಬಹುತೇಕ ಮೇಯರ್‍ಗಳು ದಕ್ಷಿಣ ಭಾಗವನ್ನು ಪ್ರತಿನಿಧಿಸಿದ್ದರಿಂದ ಈ ಬಾರಿ ಕೇಂದ್ರ ಭಾಗಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಹೀಗಾಗಿ ಅರುಣಾ ರವಿ ಅವರನ್ನು ಮೇಯರ್ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಸಂಸದ ಪಿ.ಸಿ.ಮೋಹನ್ ಪಕ್ಷದ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದಾರೆ.  ಗಣೇಶ ಮಂದಿರ ವಾರ್ಡ್‍ನ ಲಕ್ಷ್ಮೀ ಉಮೇಶ್ ಹಾಗೂ ದೀಪಾಂಜಲಿ ನಗರದ ಅನುಪಮಾ ಧರ್ಮಪಾಲ್ ಅವರಿಬ್ಬರೂ ದಕ್ಷಿಣ ಭಾಗವನ್ನು ಪ್ರತಿನಿಧಿಸುತ್ತಿರುವುದರಿಂದ ಯಾರಿಗೆ ಅವಕಾಶ ಸಿಗುವುದೋ ಕಾದು ನೋಡಬೇಕು.

Facebook Comments

Sri Raghav

Admin