ಕಮಲ ಬಿಟ್ಟು ‘ಕೈ’ಸೇರಲು ಮುಂದಾದ ಸೋಮಣ್ಣನವರದು ಬ್ಲಾಕ್‍ಮೇಲ್ ತಂತ್ರವೇ..?

ಈ ಸುದ್ದಿಯನ್ನು ಶೇರ್ ಮಾಡಿ

V.Somanna-Somanna

ಬೆಂಗಳೂರು,ಜ.20- ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ಕಮಲ ಬಿಟ್ಟು ಕೈ ಹಿಡಿಯಲಿದ್ದಾರೆಯೇ, ಇಲ್ಲವೇ ಇದೊಂದು ಬ್ಲಾಕ್‍ಮೇಲ್ ತಂತ್ರವೇ ಎಂಬ ಪ್ರಶ್ನೆ ಉದ್ಭವಿಸಿದೆ.  ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆ ಎಂದು ಸೋಮಣ್ಣ ಹೇಳಿಕೊಂಡಿದ್ದಾರೆಯೇ, ಇಲ್ಲವೆ ಬೆಂಬಲಿಗರ ಮೂಲಕ ಹೇಳಿಸುತ್ತಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಹಲವರ ವಿರೋಧದ ನಡುವೆಯೂ ಕಾಂಗ್ರೆಸ್‍ನಿಂದ ಬಿಜೆಪಿಗೆ ಸೋಮಣ್ಣ ಅವರನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆತಂದಿದ್ದರು. ಗೋವಿಂದರಾಜನಾಗರ ವಿಧಾನಸಭೆಕ್ಷೇತ್ರದ ಉಪ ಚುನಾವಣೆಯಲ್ಲಿ ಪರಾಭವಗೊಂಡರೂ ವಿಧಾನಪರಿಷತ್‍ಗೆ ನಾಮನಿರ್ದೇಶನ ಮಾಡಿದ್ದಲ್ಲದೆ, ಸಚಿವ ನೀಡಲಾಯಿತು.

ಮೂಲತಃ ಜನತಾ ಪರಿವಾರದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಸೋಮಣ್ಣ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ದಿ.ಜೆ.ಎಚ್.ಪಟೇಲ್ ಅವರ ಗರಡಿಯಲ್ಲಿ ಪಳಗಿ ಅವರನ್ನೇ ತಮ್ಮ ರಾಜಕೀಯ ಗುರುಗಳೆಂದು ಹೇಳಿದ್ದರು. ಬಳಿಕ ಜನತಾದಳ ವಿಭಜನೆಯಾದಾಗ ಇದೇ ಸೋಮಣ್ಣ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಕಾಂಗ್ರೆಸ್ ಸೇರಿಕೊಂಡರು. ಅಧಿಕಾರ ಇದ್ದ ಕಡೆ ಅಂಗಿ ಬಿಚ್ಚಿದಷ್ಟೆ ವಲಸೆ ಹೋಗುವ ಪ್ರವೃತ್ತಿ ಸೋಮಣ್ಣ ಅವರಿಗೆ ಹೊಸದಲ್ಲ. ಕಾಂಗ್ರೆಸ್‍ನಲ್ಲೂ ತಮ್ಮನ್ನು ಹಾಗೂ ತಾವು ಪ್ರತಿನಿಧಿಸುವ ಸಮುದಾಯವನ್ನೂ ಕಡೆಗಣಿಸಲಾಗುತ್ತದೆ ಎಂದು ಬೊಬ್ಬೆ ಹಾಕಿ ಕೊನೆಗೆ ಆಪರೇಷನ್ ಕಮಲಕ್ಕೆ ಒಳಗಾದರು. ಇಂತಹ ಸೋಮಣ್ಣನವರನ್ನು ಪಕ್ಷದ ಹಲವರ ವಿರೋಧದ ನಡುವೆಯೂ ಯಡಿಯೂರಪ್ಪ ಎಲ್ಲ ಸ್ಥಾನಮಾನಗಳನ್ನು ನೀಡಿದರು.

ಇದೀಗ ಇದ್ದಕ್ಕಿದ್ದಂತೆ ನನ್ನನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಹೇಳುತ್ತಿರುವ ಹಿಂದಿನ ಉದ್ದೇಶವಾದರೂ ಏನೆಂಬುದನ್ನು ಅವಲೋಕಿಸಿದರೆ ಇದು ಬ್ಲಾಕ್‍ಮೇಲ್ ಅಲ್ಲದೆ ಮತ್ತೇನೂ ಅಲ್ಲ ಎಂಬ ಮಾತು ಬಿಜೆಪಿಯಲ್ಲಿ ಹಬ್ಬಿದೆ. ಏಕೆಂದರೆ ಇತ್ತೀಚೆಗೆ ನಡೆದ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಎರಡನೇ ಬಾರಿಗೆ ಸೋಮಣ್ಣಅವರನ್ನು ಆಯ್ಕೆ ಮಾಡಲು ಸ್ವತಃ ಯಡಿಯೂರಪ್ಪ ವಿರೋಧಿಸಿದ್ದರು.  ರಾಜ್ಯಾಧ್ಯಕ್ಷರ ವಿರೋಧದ ನಡುವೆಯೂ ಅವರಿಗೆ ಬೆಂಬಲವಾಗಿ ನಿಂತಿದ್ದು ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ಪ್ರಮುಖರಾದ ಜಗದೀಶ್‍ಶೆಟ್ಟರ್, ಪ್ರಹ್ಲಾದ್‍ಜೋಷಿ, ಆರ್.ಅಶೋಕ್ ಅವರು ಬಿಎಸ್‍ವೈ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.

ಬಿಬಿಎಂಪಿ ಚುನಾವಣೆಯಲ್ಲೂ ವಿಜಯನಗರ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಮತ್ತಿತರ ಕಡೆ ಅವರು ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು.
ಈಗಲೂ ಬಿಜೆಪಿಯಲ್ಲಿ ಅವರನ್ನು ಒಬ್ಬ ಹಿರಿಯ ನಾಯಕನೆಂದೇ ಪರಿಗಣಿಸಲಾಗುತ್ತಿದೆ. ಇಷ್ಟೆಲ್ಲಾ ಸ್ಥಾನಮಾನ ಪಡೆದರೂ ನನ್ನನ್ನು ಕಡೆಗಣಿಸಲಾಗಿದೆ ಎಂದು ಹೇಳುತ್ತಿರುವುದರ ಹಿಂದಿನ ಮರ್ಮ ಏನೆಂಬುದು ಅರ್ಥವಾಗುತ್ತಿಲ್ಲ.

ಮಹತ್ವಾಕಾಂಕ್ಷೆ ಇತ್ತು:

ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿಗೆ ಹೋದಾಗ ಪಕ್ಷದಲ್ಲಿ ಇನ್ನು ನಾನೇ ಲಿಂಗಾಯಿತ ಸಮುದಾಯದ ನಾಯಕ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆದಿತ್ತು. ಯಡಿಯೂರಪ್ಪ ಇಲ್ಲದೆ ಬಿಜೆಪಿ ಇಲ್ಲ ಎಂಬುದು ಕಮನ ನಾಯಕರಿಗೆ ಅರ್ಥವಾಗುತ್ತಿದ್ದಂತೆ ಅವರನ್ನು ಒಂದು ಬಣ ಕರೆ ತರುವಲ್ಲಿ ಯಶಸ್ವಿಯಾಯಿತು. ಯಾವಾಗ ಬಿಎಸ್‍ವೈ ಮಾತೃಪಕ್ಷಕ್ಕೆ ಬಂದರೋ ಅಂದಿನಿಂದಲೇ ಸೋಮಣ್ಣ ಮೇಲೆ ಒಂದು ಕಣ್ಣು ಇಟ್ಟಿದ್ದರು.  2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಿಟ್ಟು ಕೆಜೆಪಿಗೆ ಬರುತ್ತೇನೆಂದು ಸುಳ್ಳು ಹೇಳಿದ್ದರಿಂದ ಯಡಿಯೂರಪ್ಪ ಅವರನ್ನು ತಮ್ಮ ಬಣದಿಂದ ದೂರ ಸರಿಸಿದ್ದರು.

ಯಾವಾಗ ಹಂತ ಹಂತವಾಗಿ ಬಿಎಸ್‍ವೈ ಮನಸ್ಸಿನಿಂದ ಸೋಮಣ್ಣ ದೂರವಾದರೂ ಇನ್ನು ಬಿಜೆಪಿಯಲ್ಲಿ ತಾನು ಅಪ್ರಸ್ತುತ ಎಂಬುದು ಅವರಿಗೆ ಮನವರಿಕೆಯಾಗಿತ್ತು.
ಹಿಂದೆ ಸಚಿವರಾದ ವೇಳೆ ಮೈಸೂರು ಭಾಗದಲ್ಲಾದರೂ ಪ್ರಬಲ ವೀರಶೈವ ಸಮುದಾಯದ ನಾಯಕನಾಗಬೇಕೆಂಬ ಕನಸು ಕಂಡಿದ್ದರು. ಚಾಮರಾಜನಗರ ಜಿಲ್ಲೆ ಉಸ್ತುವಾರಿ ಸಚಿವರಾದಾಗಲೂ ಅಲ್ಲಿ ಇವರ ಸಾಧನೆ ಶೂನ್ಯವಾಗಿತ್ತು. ಏಕೆಂದರೆ ಈ ಭಾಗದಲ್ಲಿ ಲಿಂಗಾಯಿತ ಸಮುದಾಯದ ಪ್ರಭಾವಿ ನಾಯಕರಾಗಿದ್ದವರು ಇತ್ತೀಚೆಗಷ್ಟೆ ಹೃದಯಾಘಾತದಿಂದ ತೀರಿಕೊಂಡ ಎಚ್.ಎಸ್.ಮಹದೇವಪ್ರಸಾದ್.

ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವರಾದಾಗಲೂ ಬಿಜೆಪಿ ಹೇಳಿಕೊಳ್ಳುವಂತಹ ಸಾಧನೆ ಮಾಡಿರಲಿಲ್ಲ. ಇದೀಗ ಮಹದೇವಪ್ರಸಾದ್ ನಿಧನರಾಗಿರುವುದರಿಂದ ತಮ್ಮ ಬಹುದಿನಗಳ ಕನಸಾದ ವೀರಶೈವ ಸಮುದಾಯದ ನಾಯಕನಾಗಬೇಕೆಂಬ ಕನಸನ್ನು ಕಂಡು ಕೊಂಡಿದ್ದಾರೆ. ಅದಕ್ಕಾಗಿಯೇ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಹದೇವಪ್ರಸಾದ್ ಅವರ ಸ್ಥಾನವನ್ನು ತುಂಬಿಕೊಡುವ ಭರವಸೆ ಕೊಟ್ಟಿದ್ದರಾದರೂ ರಾಜಕೀಯ ಸಮೀಕರಣ ಅವರು ಅಂದುಕೊಂಡಷ್ಟು ಸರಳವಾಗಿಲ್ಲ.

ಏಕೆಂದರೆ ಈಗಾಗಲೇ ಅವರ ಕಾಂಗ್ರೆಸ್ ಸೇರ್ಪಡೆಗೆ ಹಾಲಿ ಪ್ರಬಲ ಸಚಿವರೊಬ್ಬರೇ ವಿರೋಧ ವ್ಯಕ್ತಪಡಿಸಿದ್ದಾರೆ. ಸೋಮಣ್ಣ ಅವರನ್ನು ಪಕ್ಷಕ್ಕೆ ಕರೆತರುವುದು ಉಚಿತವಲ್ಲ. ಅಂತಹ ನಿರ್ಧಾರ ಕೈಗೊಂಡರೆ ನಾನೂ ಕೂಡ ಪಕ್ಷದಲ್ಲಿ ಉಳಿಯುವ ಬಗ್ಗೆ ಮರು ಚಿಂತನೆ ನಡೆಸುತ್ತೇನೆ ಎಂಬ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಪ್ರಥಮ ಚುಂಬನ ದಂತ ಭಗ್ನ ಎಂಬ ಸ್ಥಿತಿ ಸೋಮಣ್ಣನವರದ್ದಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin