ಕಮಾಲ್ ಮಾಡಿ ಟೀಮ್ ಇಂಡಿಯಾ ಗೆಲ್ಲಿಸಿದ ಕಾರ್ತಿಕ್

ಈ ಸುದ್ದಿಯನ್ನು ಶೇರ್ ಮಾಡಿ

cricket

ಕೊಲಂಬೊ, ಮಾ.18- ಯುಗಾದಿ ಹಬ್ಬದ ಬೆಲ್ಲವನ್ನು ನಾಡಿನ ಜನತೆಗೆ ಹಂಚಬೇಕೆಂದು ಬಯಸಿದ ರೋಹಿತ್‍ಶರ್ಮಾರ ಬಳಗಕ್ಕೆ ಬಾಂಗ್ಲಾದ ಸೌಮ್ಯಸರ್ಕಾರ್ ಎಸೆದ ಕೊನೆಯ ಚೆಂಡು ಸಿಹಿಯಾಗುತ್ತದೆಯೋ ಕಹಿಯ ಅನುಭವ ನೀಡುತ್ತದೋ ಎಂದು ಎಲ್ಲರೂ ನಿಬ್ಬೆರಗಾಗಿ ನೋಡುತ್ತಿದ್ದರು. ಕೊನೆಯ ಓವರ್‍ಅನ್ನು ಎದುರಿಸಲು ಸಜ್ಜಾಗಿದ್ದ ವಿಜಯಶಂಕರ್ ಮೊದಲ ಎಸೆತದಲ್ಲಿ ರನ್ ಗಳಿಸದಿದ್ದಾಗ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸೋಲಿನ ಭೀತಿ ಆದರೆ ಅದೇ ಓವರ್‍ನಲ್ಲಿ ಶಂಕರ್ ಬೌಂಡರಿ ಗಳಿಸಿದಾಗ ಗೆಲುವಿನ ಹುಮ್ಮಸ್ಸು, ಪಂದ್ಯದ ಅಂತಿಮ ಎರಡನೇ ಎಸೆತದಲ್ಲಿ ಭಾರಿ ಹೊಡೆತಕ್ಕೆ ಕೈ ಹಾಕಿ ಔಟಾದಾಗ ಭಾರತ ಸೋತು ಬೇವಿನ ಕಹಿ (ಸೋಲು) ನೀಡುತ್ತದೆ ಎನ್ನುತ್ತಿದ್ದಾಗಲೇ ಕೊನೆಯ ಓವರ್ ಎಸೆತದಲ್ಲಿ ಗೆಲ್ಲಲು 5 ರನ್‍ಗಳು ಬೇಕಾಗಿದ್ದಾಗ ದಿನೇಶ್‍ಕಾರ್ತಿಕ್ ಸೌಮ್ಯ ಸರ್ಕಾರ್‍ರ ಚೆಂಡನ್ನು ಲೀಲಾಜಾಲವಾಗಿ ಸಿಕ್ಸರ್ ಸಿಡಿಸಿದಾಗ ಭಾರತೀಯ ಪಾಳೆಯದಲ್ಲಿ ಸಂಭ್ರಮೋ ಸಂಭ್ರಮ. ಈ ಮೂಲಕ ದಿನೇಶ್ ಕಾರ್ತಿಕ್ ಪಂದ್ಯವನ್ನು ಗೆಲ್ಲಿಸಿದ್ದೇ ಅಲ್ಲದೆ ಎಲ್ಲರ ಕಣ್ಮಣಿಯಾಗಿ ಮೆರೆದು ಭಾರತಕ್ಕೆ ನಿದಾಸ್ ಟ್ರೋಫಿಯನ್ನು ಗೆದ್ದು ಕೊಟ್ಟರು.

ಧವನ್- ರೋಹಿತ್ ಮಿಂಚು:  ಟಾಸ್ ಗೆದ್ದು ಫೀಲ್ಡಿಂಗ್ ಮಾಡಿದ ರೋಹಿತ್ ಬಳಗ ಬಾಂಗ್ಲಾ ತಂಡವನ್ನು 166ರನ್‍ಗಳಿಗೆ ಕಟ್ಟಿ ಹಾಕಿತು. ಈ ಕಠಿಣ ಸವಾಲನ್ನು ಬೆನ್ನಟ್ಟಿದ ಟೀಂ ಇಂಡಿಯಾದ ಆರಂಭಿಕ ಜೋಡಿ ರೋಹಿತ್ ಹಾಗೂ ಧವನ್ ಶಕೀಬ್ ಪಡೆಯ ಬೌಲರ್‍ಗಳನ್ನು ದಂಡಿಸಿ 2.4 ಓವರ್‍ಗಳಲ್ಲೇ ಮೊದಲ ವಿಕೆಟ್‍ಗೆ 32 ರನ್‍ರ ಕಾಣಿಕೆ ನೀಡಿ ಗೆಲುವಿನ ಹುಮ್ಮಸ್ಸು ಮೂಡಿಸಿತು. ಆದರೆ ಭಾರೀ ಹೊಡೆತಕ್ಕೆ ಕೈ ಹಾಕಿದ ಧವನ್ (10ರನ್, 1 ಸಿಕ್ಸರ್) ಶಕೀಬ್‍ರ ಬೌಲಿಂಗ್‍ನಲ್ಲಿ ಔಟಾಗಿ ಪೆವಿಲಿಯನ್‍ಗೆ ಹೆಜ್ಜೆ ಹಾಕಿದ ಬೆನ್ನಲ್ಲೇ ಬಂದ ಸುರೇಶ್‍ರೈನಾ ಖಾತೆಯನ್ನು ತೆರೆಯಾದೆ ರುಬೆಲ್‍ಹುಸೇನ್‍ಗೆ ವಿಕೆಟ್ ಒಪ್ಪಿಸಿದಾಗ ಭಾರತ ಪಾಳೆಯದಲ್ಲಿ ಆತಂಕ ಮೂಡಿತು.

ರೋಹಿತ್- ರಾಹುಲ್ ಉತ್ತಮ ಜೊತೆಯಾಟ:  ಸುರೇಶ್‍ರೈನಾ ಔಟಾಗುತ್ತಿದ್ದಂತೆ ಆಂಗಳಕ್ಕೆ ಇಳಿದ ಕನ್ನಡಿಗ ಕೆ.ಎಲ್.ರಾಹುಲ್, ನಾಯಕ ರೋಹಿತ್‍ರೊಂದಿಗೆ ಸೊಗಸಾದ ಇನ್ನಿಂಗ್ಸ್ ಕಟ್ಟಿ ಅರ್ಧಶತಕದ ಜೊತೆಯಾಟ ಆಡುವ ಮೂಲಕ ಗೆಲುವಿನ ಹುಮ್ಮಸ್ಸನ್ನು ಮೂಡಿಸಿತು. ಈ ಜೋಡಿಯು 3ನೇ ಜೊತೆಯಾಟಕ್ಕೆ 51 ರನ್‍ಗಳಿಸಿದ್ದಾಗ ಸಿಕ್ಸರ್ ಬಾರಿಸುವ ರಭಸದಲ್ಲಿ ಕೆ.ಎಲ್.ರಾಹುಲ್ (24 ರನ್,2 ಬೌಂಡರಿ, 1 ಸಿಕ್ಸರ್) ರುಬೆಲ್ ಹುಸೇನ್ ಬೌಲಿಂಗ್‍ನಲ್ಲಿ ಶಬ್ಬೀರ್‍ರೆಹಮಾನ್ ಹಿಡಿತ ಅದ್ಭುತ ಕ್ಯಾಚ್‍ನಿಂದ ಪೆವೆಲಿಯನ್ ತೊರೆದರು. ನಂತರ ಬಂದ ಮತ್ತೊಬ್ಬ ಕನ್ನಡಿಗ ಮನೀಷ್‍ಪಾಂಡೆ, ರೋಹಿತ್‍ಗೆ ಸಾಥ್ ನೀಡಿದರಾದರೂ ಅರ್ಧಶತಕ ಗಳಿಸಿದ್ದ ರೋಹಿತ್ (56 ರನ್,4 ಬೌಂಡರಿ, 3 ಸಿಕ್ಸರ್) ನಜ್‍ಮುಲ್ ಇಸ್ಲಾಂಗೆ ವಿಕೆಟ್ ಒಪ್ಪಿಸಿದರು.  ರೋಹಿತ್ ಔಟಾಗುತ್ತಿದ್ದಂತೆ ಕ್ರೀಸ್‍ಗೆ ದಿನೇಶ್ ಕಾರ್ತಿಕ್ ಬದಲು ವಿಜಯ್‍ಶಂಕರ್ ಇಳಿದಾಗ ಎಲ್ಲರಲ್ಲೂ ಅಚ್ಚರಿ ಮೂಡಿತು. ಈ ನಡುವೆ ಮನೀಷ್ ಪಾಂಡೆ (28 ರನ್,3 ಬೌಂಡರಿ)ಮುಷ್ತಾಫಿಜುರ್ ರೆಹಮಾನ್‍ಗೆ ವಿಕೆಟ್ ಒಪ್ಪಿಸಿದರು.

ದಿನೇಶ್ ಬಿರುಗಾಳಿ:  ಬಾಂಗ್ಲಾ ಬೌಲರ್ ಮುಷ್ತಾಫಿಜುರ್ ರೆಹಮಾನ್‍ರ 18ನೆ ಓವರ್ ಮೇಡಿನ್ ಓವರ್‍ನಲ್ಲಿ ಪಾಂಡೆ ಔಟಾದ ನಂತರ ಕ್ರೀಸ್‍ಗೆ ಇಳಿದ ದಿನೇಶ್‍ಕಾರ್ತಿಕ್ ಬ್ಯಾಟಿಂಗ್ ಸುನಾಮಿಯನ್ನೇ ಸೃಷ್ಟಿಸಿದರು. ಗೆಲ್ಲಲು 12 ಎಸೆತಗಳಲ್ಲಿ 34 ರನ್ ಗಳಿಸುವ ಗುರಿಯನ್ನು ಭಾರತ ಹೊಂದಿತ್ತಾದರೂ ದಿನೇಶ್‍ಕಾರ್ತಿಕ್ ( 29 ರನ್, 8 ಎಸೆತ, 2 ಬೌಂಡರಿ, 3 ಸಿಕ್ಸರ್) ತಮ್ಮ ಬ್ಯಾಟಿಂಗ್ ಅಬ್ಬರದಿಂದ ಕೊನೆಯ ಎಸೆತವನ್ನು ಸಿಕ್ಸರ್’ಗೆ ಅಟ್ಟುವ ಮೂಲಕ ಭಾರತಕ್ಕೆ ಜಯ ತಂದಿಟ್ಟರು.

ಬಾಂಗ್ಲಾ ಪರ ರುಬೆಲ್ ಹುಸೇನ್ 2 ವಿಕೆಟ್ ಕಬಳಿಸಿದರೆ, ಶಕೀಬ್ ಅಲ್ ಹಸನ್, ನಜ್‍ಮುಲ್‍ಇಸ್ಲಾಂ,ಮುಷ್ತಾಫಿಜುರ್ ರೆಹಮಾನ್, ಸೌಮ್ಯಸರ್ಕಾರ್ ತಲಾ 1 ವಿಕೆಟ್ ಕಬಳಿಸಿದರು.

ಶಬ್ಬೀರ್ ಸ್ಫೋಟಕ ಬ್ಯಾಟಿಂಗ್: ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ದೇಶ ಶಬ್ಬೀರ್ ರಹಮಾನ್‍ರ ಸ್ಫೋಟಕ ಬ್ಯಾಟಿಂಗ್ (77 ರನ್, 7 ಬೌಂಡರಿ, 4 ಸಿಕ್ಸರ್), ಮಹಮದುಲ್ಲಾ (21ರನ್,2 ಬೌಂಡರಿ)ರ ತಾಳ್ಮೆಯುತ ಆಟದಿಂದಾಗಿ ನಿಗದಿತ ಓವರ್‍ಗಳಲ್ಲಿ 8 ವಿಕೆಟ್ ಕಳೆದುಕೊಂಡು 166 ರನ್‍ಗಳನ್ನು ಗಳಿಸಿತು.

ಭಾರತದ ಪರ ಯಜುವೇಂದ್ರಚಹಾಲ್ 3 ವಿಕೆಟ್, ಜಯದೇವ್ ಉನದ್ಕಟ್ 2, ವಾಷಿಂಗ್ಟನ್ ಸುಂದರ್ 1 ವಿಕೆಟ್ ಕಬಳಿಸಿದರು. ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ದಿನೇಶ್‍ಕಾರ್ತಿಕ್ ಪಂದ್ಯಪುರುಷೋತ್ತಮರಾದರೆ, ವಾಷಿಂಗ್ಟನ್ ಸುಂದರ್ ಸರಣಿಶ್ರೇಷ್ಠರಾದರು.

ಸಂಕ್ಷಿಪ್ತ ಸ್ಕೋರ್:
ಬಾಂಗ್ಲಾದೇಶ: 20 ಓವರ್‍ಗಳಲ್ಲಿ 166/8
ಭಾರತ: 20 ಓವರ್‍ಗಳಲ್ಲಿ 168/6

Facebook Comments

Sri Raghav

Admin