ಕಮ್ಮನಹಳ್ಳಿ ಕಾಮುಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ

ಈ ಸುದ್ದಿಯನ್ನು ಶೇರ್ ಮಾಡಿ

Kammanahalli---New-Year

ಬೆಂಗಳೂರು,ಜ.5-ಕಮ್ಮನಹಳ್ಳಿಯಲ್ಲಿ ನಡೆದ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಕಾಮಾಂಧರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಣಸವಾಡಿ ನಿವಾಸಿಗಳೇ ಆಗಿರುವ ಸ್ನೇಹಿತಾದ ಬಿಕಾಂ ವಿದ್ಯಾರ್ಥಿ ಲಿನೋ, ಟಾಟಾ ಏಸ್ ಚಾಲಕ ಅಯ್ಯಪ್ಪ , ಸೋಮ ಅಲಿಯಾಸ್ ಚಿನ್ನು ಮತ್ತು ರಾಜ ಬಂಧಿತರು. ಇವರೆಲ್ಲರೂ ಬಾಣಸವಾಡಿಯ ಸಿಡ್ವಿಕ್ ಎಂಬ ಹೋಟೆಲ್‍ನಲ್ಲಿ ಪಾರ್ಟ್‍ಟೈಂ ಕೆಲಸ ಮಾಡುತ್ತಿದ್ದು , ಅಲ್ಲಿ ಸ್ನೇಹಿತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಯುವತಿ ಸಾಮಾನ್ಯವಾಗಿ ಸಿಡ್ವಿಕ್ ಹೋಟೆಲ್‍ನಿಂದ ಆನ್‍ಲೈನ್ ಮೂಲಕ ಊಟ ತರಿಸಿಕೊಳ್ಳುತ್ತಿದ್ದು, ಊಟ ನೀಡಲು ಇವರುಗಳೇ ಹೋಗುತ್ತಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಒಂಟಿ ಯುವತಿಯರನ್ನು ಹಿಂಬಾಲಿಸುತ್ತಿದ್ದ ಆರೋಪಿಗಳು ಕಳೆದ ಒಂದು ವಾರದಿಂದ ಸಂತ್ರಸ್ತೆಯ ಬೆನ್ನು ಬಿದ್ದಿದ್ದರಲ್ಲದೆ ದಿನವೂ ಸಹಚರರ ಜೊತೆ ಫಾಲೋ ಮಾಡುತ್ತಿದ್ದರು ಎಂದು ಆರೋಪಿಗಳು ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ.

ಡಿ.31ರ ರಾತ್ರಿ ಸಂತ್ರಸ್ತ ಯುವತಿ ಸಿಡ್ವಿಕ್ ಹೋಟೆಲ್‍ಗೆ ಸ್ನೇಹಿತರ ಜೊತೆ ಊಟಕ್ಕೆ ಹೋಗಿದ್ದು , ಅಲ್ಲಿಂದ ವಾಪಸ್ಸಾಗುವಾಗ ಆರೋಪಿಗಳು ಆಕೆಯನ್ನು ಹಿಂಬಾಲಿಸಿ ಬಂದಿದ್ದರು. ಆಟೋದಿಂದ ಇಳಿದು ಮನೆಗೆ ತೆರಳುತ್ತಿದ್ದ ಯುವತಿಯನ್ನು ಬೈಕ್‍ನಲ್ಲಿ ಬಂದು ಅಡ್ಡಗಟ್ಟಿ ಹಿಡಿದು ಎಳೆದಾಡಿದ್ದ ಆರೋಪಿ ಬಿಕಾಂ ವಿದ್ಯಾರ್ಥಿ ಲಿನೋ, ಕೃತ್ಯ ನಡೆಯುತ್ತಿದ್ದಾಗ ದ್ವಿಚಕ್ರ ವಾಹನ ನಿಲ್ಲಿಸಿಕೊಂಡಿದ್ದವ ಟಾಟಾ ಏಸ್ ಚಾಲಕ ಅಯ್ಯಪ್ಪ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯ ವೇಳೆ ಬೈಕ್‍ನಲ್ಲಿ ರಸ್ತೆಯಲ್ಲಿ ಕಾದಿದ್ದ ಇನ್ನು ನಾಲ್ವರು ಆರೋಪಿಗಳ ಪೈಕಿ ಸೋಮ ಅಲಿಯಾಸ್ ಚಿನ್ನು ಮತ್ತು ರಾಜ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಇನ್ನು ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಘಟನೆ ಸಂಬಂಧ 6 ಸಿಸಿಟಿವಿಗಳ ದೃಶ್ಯ ಪರಿಶೀಲಿಸಿರುವ ಪೊಲೀಸರು 6 ಆರೋಪಿಗಳ ಚಹರೆ ಪತ್ತೆ ಹಚ್ಚಿದ್ದಾರೆ.  ಡಿ.31ರ ರಾತ್ರಿ 8.48ರಿಂದ 8.56ರವರೆಗೆ ಕಮ್ಮನಹಳ್ಳಿ ಸರ್ಕಲ್‍ನಲ್ಲಿರುವ ಬಕೆಟ್ ಬಿರಿಯಾನಿ ಹೋಟೆಲ್ ಬಳಿ ಇದ್ದರಲ್ಲದೆ ಸುಲ್ತಾನ್ ಬಾಯ್ ಎಂಬಾತನ ಜತೆ ಮಾತನಾಡಿದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದರು.  ಈ ಹಿನ್ನೆಲೆಯಲ್ಲಿ ಸುಲ್ತಾನ್ ಬಾಯ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅಲ್ಲದೆ ಸೋಮನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸುತ್ತಿದ್ದಂತೆ ಆತ ಘಟನೆ ಬಗ್ಗೆಯೇ ಬಾಯಿ ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಕೆಆರ್‍ಪುರಂ ಉಪವಿಭಾಗದ ಎಸಿಪಿ ರವಿಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಕೃತ್ಯ ನಡೆದ ಕಮ್ಮನಹಳ್ಳಿಯ ಲಾರೆನ್ಸ್ ರಸ್ತೆಯ ನಿವಾಸಿ ಫ್ರಾನ್ಸಿಸ್ ಎಂಬುವರು ತಮ್ಮ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಲೈಂಗಿಕ ದೌರ್ಜನ್ಯದ ದೃಶ್ಯಾವಳಿಗಳನ್ನು ಜ.2ರ ಸಂಜೆ ಪೊಲೀಸರಿಗೆ ನೀಡಿದ್ದರು  ಇದರ ಆಧಾರದಲ್ಲಿ ತನಿಖೆ ನಡೆಸಿದ ಪೂರ್ವ ವಿಭಾಗದ ಪೊಲೀಸರು ನಿನ್ನೆ ಸಂಜೆ ವೇಳೆಗೆ 12 ಜನ ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಅವರಲ್ಲಿ ನಾಲ್ವರು ಕೃತ್ಯದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin