ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ ಪ್ರಕರಣ : ನಾಲ್ವರು ಶಂಕಿತರ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

Bengaluru-Sexual

ಬೆಂಗಳೂರು, ಜ.4 :  ಕಮ್ಮನಹಳ್ಳಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಘಟನೆ ಸಂಬಂಧ ಪೂರ್ವವಿಭಾಗದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಶಂಕಿತ ನಾಲ್ವರಲ್ಲಿ 2 ಆರೋಪಿಗಳು ಕೃತ್ಯ ಎಸಗಿರಬಹುದು ಎಂಬ ಅನುಮಾನವಿದ್ದು, ತನಿಖೆ ಮುಂದುವರೆದಿದೆ.  ಪೂರ್ವವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರ ನೇತೃತ್ವದಲ್ಲಿ ಘಟನೆ ಕುರಿತು ಬಾಣಸವಾಡಿ ಠಾಣೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಡಿಸಿಪಿಗಳಾದ ಡಾ.ಹರ್ಷಾ, ಅಜಯ್ ಹಿಲೋರಿ, ಡಾ.ಬೋರಲಿಂಗಯ್ಯ ಹಾಗೂ ಕಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಘಟನೆ ಕುರಿತ ಕೆಲವು ಮಾಹಿತಿಗಳ ಬಗ್ಗೆ ಚರ್ಚೆ ನಡೆದಿದ್ದು, ನಂತರ ಶಂಕಿತರನ್ನು ಠಾಣೆಗೆ ಕರೆತಂದು ವಿಚಾರಣೆ ಆರಂಭಿಸಿದ್ದಾರೆ. ಕಮ್ಮನಹಳ್ಳಿಯ ರಸ್ತೆಗಳಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅಲ್ಲದೆ ಕೃತ್ಯ ನಡೆದ ರಸ್ತೆಯ ನಿವಾಸಿಗಳಿಂದಲೂ ಮಾಹಿತಿ ಪಡೆಯುತ್ತಿದ್ದಾರೆ.

ಘಟನೆ ಹಿನ್ನೆಲೆ:

ಹೊಸ ವರ್ಷಾಚರಣೆ ವೇಳೆ ಮಹಿಳೆಯರ ಮೇಲೆ ಕೆಲ ದುಷ್ಕರ್ಮಿಗಳು ನಡೆಸಿದ ಲೈಂಗಿಕ ಕಿರುಕುಳ ಪ್ರಕರಣ ರಾಷ್ಟ್ರವ್ಯಾಪಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ನಗರದಲ್ಲಿ ಮತ್ತೊಂದು ಇಂತಹ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಬೆಂಗಳೂರಿನ ಮಾನ ಅಂತಾರಾಷ್ಟ್ರೀಯ ಮಾನ ಹರಾಜಾಗಿದ್ದು, ದುಷ್ಕರ್ಮಿಗಳನ್ನು ಪತ್ತೆ ಮಾಡದಿರುವ ಪೊಲೀಸರ ಕ್ರಮಕ್ಕೆ ರಾಷ್ಟ್ರವ್ಯಾಪಿ ಖಂಡನೆ ವ್ಯಕ್ತವಾಗಿದೆ.

ಡಿ.31 ರಂದು ಕಮ್ಮನಹಳ್ಳಿಯ 5ನೆ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಾಮುಕರು ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ನಡುರಸ್ತೆಯಲ್ಲೇ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಇದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಾಮುಕರ ಮುಖಗಳು ಅಸ್ಪಷ್ಟವಾಗಿ ಕಾಣುತ್ತಿದೆ. ಮಹಿಳೆಯನ್ನು ಬಲವಂತವಾಗಿ ಎಳೆದಾಡಿರುವ ಈ ದುಷ್ಕರ್ಮಿಗಳು ಪ್ರತಿರೋಧಿಸಿದಕ್ಕೆ ಹಲ್ಲೆಯನ್ನೂ ನಡೆಸಿದ್ದಾರೆ. ಈ ಘಟನೆಯಿಂದ ಬೆಂಗಳೂರಿನಲ್ಲಿ ಮಹಿಳೆಯರಿಗೆ ಎಷ್ಟರಮಟ್ಟಿಗೆ ಸುರಕ್ಷತೆ ಇದೆ ಎಂಬ ಪ್ರಶ್ನೆ ಉದ್ಭವಿಸಿದೆ. ನಡುರಸ್ತೆಯಲ್ಲೇ ಈ ಘಟನೆ ನಡೆದಿದ್ದರೂ ಮಹಿಳೆಯನ್ನು ರಕ್ಷಣೆ ಮಾಡಲು ಯಾರೊಬ್ಬರೂ ಮುಂದಾಗಿಲ್ಲ.

ಡಿ.31ರಂದು ಮಹಿಳೆಯೊಬ್ಬರು ಹೊಸ ವರ್ಷಾಚರಣೆ ತೆರಳಿದ್ದರು. ಬಳಿಕ ಆಟೋದಲ್ಲಿ ಮನೆಗೆ ಹಿಂತಿರುಗಲು ಆಟೋ ಹತ್ತಿ ಮನೆಯ ಸ್ವಲ್ಪ ದೂರದಲ್ಲಿ ಇಳಿದು ನಡೆದುಹೋಗುತ್ತಿದ್ದ ವೇಳೆ ಅಚಾಕನಕ್ಕಾಗಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೊದಲು ಆಕೆಯ ದುಪ್ಪಟ್ಟ ಎಳೆದಾಡಿದ್ದಾರೆ.  ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಆಕೆಯ ಮೇಲೆ ಹಲ್ಲೆ ನಡೆಸಿ ಎಳೆದಾಡಿದ್ದಾರೆ. ಇಡೀ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

ಈ ಸಂಬಂಧ ಮಹಿಳೆ ಈವರೆಗೂ ದೂರು ನೀಡಿಲ್ಲವಾದರೂ, ಘಟನೆ ನಡೆದಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದರಿಂದ ಸ್ವಯಂ ಪ್ರೇರಿತ ದೂರು ದಾಖಲಿಸುವ ಸಾಧ್ಯತೆ ಇದೆ.
ಕಳೆದ ಶನಿವಾರ ರಾತ್ರಿ ಹೊಸ ವರ್ಷಾಚರಣೆ ವೇಳೆ ಬ್ರಿಗೇಡ್ ರಸ್ತೆಯಲ್ಲಿ ಕೆಲ ದುಷ್ಕರ್ಮಿಗಳು ಮಹಿಳೆಯರನ್ನು ಮನಬಂದಂತೆ ಎಳೆದಾಡಿ ಲೈಂಗಿಕ ಕಿರುಕುಳ ನೀಡಿರುವುದು ರಾಷ್ಟ್ರ ವ್ಯಾಪಿ ಚರ್ಚೆಯಾಗಿದೆ. ಈ ಘಟನೆ ಕುರಿತಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗಾಗಲೇ ಕೇಂದ್ರ ಮಹಿಳಾ ಆಯೋಗ ಅವರಿಗೆ ನೋಟಿಸ್ ಜಾರಿ ಮಾಡಿದೆ.

Facebook Comments

Sri Raghav

Admin