ಕರಗಡ ವಿಳಂಬ ಕಾಮಗಾರಿ ವಿರೋಧಿಸಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

kaduru

ಕಡೂರು, ಆ.9- ಕರಗಡ ಕುಡಿಯುವ ನೀರಿನ ಯೋಜನೆಯ ವಿಳಂಬ ಕಾಮಗಾರಿ ನೀತಿಯನ್ನು ವಿರೋಧಿಸಿ ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ರೈತರು ಟೈರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.  ತಾಲೂಕಿನ ನಿಡಘಟ್ಟ ಗ್ರಾಮದ ಗಾಂಧಿ ದೇವಾಲಯದ ಬಳಿ ಕರಗಡ ಕುಡಿಯುವ ನೀರಿನ ಯೋಜನೆಯ ವಿಳಂಬ ಕಾಮಗಾರಿ ನೀತಿಯನ್ನು ವಿರೋಧಿಸಿ ಹೋರಾಟ ಸಮಿತಿ ಹಾಗೂ 12 ಗ್ರಾಮ ಪಂಚಾಯತಿಯ ರೈತರು, ಗ್ರಾಮಸ್ಥರು ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.

ಗಾಂಧಿ ದೇವಾಲಯದ ಬಳಿ ನಡೆದ ಸಭೆಯಲ್ಲಿ ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ ಪ್ರಗತಿಯಲ್ಲಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು, ಇದರ ಜೊತೆ ಈ ಯೋಜನೆಯ ಎರಡನೇ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಅಲ್ಲಿಯವರೆಗೂ ಈ ಹೋರಾಟವನ್ನು ಮುಂದುವರೆಸಲಾಗುವುದು ಎಂದರು. ರೈತ ಸಂಘದ ಮುಖಂಡ ಗುರುಶಾಂತಪ್ಪ ಮಾತನಾಡಿ, ಕಳೆದ 12 ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ, ಕಾಮಗಾರಿ ಶೇ. 90 ರಷ್ಟು ಪೂರ್ಣಗೊಂಡಿದ್ದು ಉಳಿದಿರುವ 200 ಮೀಟರ್ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಹಾಗೂ ಗುತ್ತಿಗೆದಾರರು ಮೀನಾಮೇಷ ಎಣಿಸುತ್ತಿದ್ದು ಇದರಿಂದ ಈ ಭಾಗದ ರೈತರು ಹಾಗೂ ಗ್ರಾಮಸ್ಥರು ಪರಿತಪಿಸುವಂತಾಗಿದೆ ಎಂದು ಹೇಳಿದರು.
ಮಾಜಿ ಸಣ್ಣ ನೀರಾವರಿ ಖಾತೆ ಸಚಿವ ಶಿವರಾಜ್‍ತಂಗಡಿ ನಮ್ಮ ಹೋರಾಟದಿಂದ ಸ್ಪೂರ್ತಿ ಪಡೆದು ತಮ್ಮ ಕ್ಷೇತ್ರದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ 25 ಕಿ.ಮೀ. ಕಾಲುವೆಯನ್ನು ನಿರ್ಮಿಸಿ ತಮ್ಮ ಕ್ಷೇತ್ರದ 18 ಕೆರೆಗಳನ್ನು ತುಂಬಿಸುತ್ತಿದ್ದಾರೆ, ಅದೇ ರೀತಿ ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ. ಯೋಗೇಶ್ವರ್ 192 ಕೋಟಿ ವೆಚ್ಚದಲ್ಲಿ ರೂ. 36 ಕೆರೆಗಳನ್ನು ತುಂಬಿಸಿದ್ದಾರೆ ಅಲ್ಲಿ ಆದ ಕಾರ್ಯ ಇಲ್ಲಿ ಏಕೆ ಆಗುತ್ತಿಲ್ಲ ಈ ವಿಳಂಬ ನೀತಿ ಏಕೆ? ಎಂದು ಪ್ರಶ್ನಿಸಿದರು.

ಸಿಪಿಐ ಮುಖಂಡ ಅಮ್ಜದ್ ಮಾತನಾಡಿ, ಚಿಕ್ಕಮಗಳೂರು ನಗರಕ್ಕೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿಗಳೊಂದಿಗೆ ಈ ಯೋಜನೆ ಬಗ್ಗೆ ಚರ್ಚಿಸಲು ಅಧಿಕೃತ ಭೇಟಿಯನ್ನು ನಿಗಧಿಗೊಳಿಸಲು ಒತ್ತಾಯಿಸಲಾಗುವುದು ಎಂದ ಹೇಳಿದರು.ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಸದಸ್ಯ ಎಸ್.ವಿ. ನಟರಾಜು, ಸಿಪಿಐ ಮುಖಂಡ ರೇಣುಕಾರಾಧ್ಯ, ಹಸಿರುಸೇನೆ ಮಹೇಶ್, ಚಂದಯ್ಯ, ಬಿ.ಆರ್. ಕೆಂಚಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್‍ಕುಮಾರ್, ದೇವನೂರು ಗ್ರಾ ಪಂಅಧ್ಯಕ್ಷೆ ದ್ರಾಕ್ಷಾಯಿಣಿ ಶ್ರೀನಿವಾಸ್, ತಾಪಂ ಸದಸ್ಯ ಅಕ್ಷಯ್‍ಕುಮಾರ್ ಮುಂತಾದವರು ಭಾಗವಹಿಸಿದ್ದರು.

 

Facebook Comments

Sri Raghav

Admin