ಕರಾಳ ದಿನಾಚರಣೆ ಆಚರಿಸಿದ ಬೆಳಗಾವಿ ಮೇಯರ್, ಉಪಮೇಯರ್ ಅನರ್ಹತೆಗೆ ಡಿಸಿ ವರದಿ

ಈ ಸುದ್ದಿಯನ್ನು ಶೇರ್ ಮಾಡಿ

Belagavi-Mayor

ಬೆಂಗಳೂರು,ನ.3-ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ನಡೆಸುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರುವ ಬೆಳಗಾವಿ ಮಹಾನಗರಪಾಲಿಕೆಯನ್ನು ತಕ್ಷಣವೇ ಸೂಪರ್ ಸೀಡ್ ಮಾಡಿ ಮೇಯರ್ ಮತ್ತು ಉಪಮೇಯರ್ ಸದಸ್ಯತ್ವವನ್ನೇ ಅನರ್ಹಗೊಳಿಸುವಂತೆ ಜಿಲ್ಲಾಧಿಕಾರಿ ವರದಿ ನೀಡಿದ್ದಾರೆ.  ಬೆಳಗಾವಿ ಜಿಲ್ಲಾಧಿಕಾರಿ ಎನ್. ಜಯರಾಂ ಅವರು ನಿನ್ನೆ ಸಂಜೆ ನಗರಾಭಿವೃದ್ದಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೀಡಿರುವ ವರದಿಯಲ್ಲಿ ಬೆಳಗಾವಿಯ ಮೇಯರ್ ಸರಿತಾ ಪಾಟೀಲ, ಉಪಮೇಯರ್ ಸಂಜಯ ಸಿಂಧೆ ಸೇರಿದಂತೆ ಎಂಇಎಸ್‍ನ ಕೆಲ ಸದಸ್ಯರು ನಾಡ ವಿರೋಧಿ ಕೃತ್ಯ ನಡೆಸಿರುವುದು ಸಾಬೀತಾಗಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ಪ್ರಭಾರಿ ಕೌನ್ಸಿಲ್ ಕಾರ್ಯದರ್ಶಿ ಲಕ್ಷ್ಮಿ ಸುಳಗೇಕರ ಅವರಿಂದ ಸಮಗ್ರ ಮಾಹಿತಿ ಸಂಗ್ರಹಿಸಿ ಜಿಲ್ಲಾಧಿಕಾರಿ ಎನ್.ಜಯರಾಂ ವರದಿ ನೀಡಿದ್ದಾರೆ.  ನ.1ರಂದು ಕರಾಳ ದಿನಾಚರಣೆ ಆಚರಣೆ ಮಾಡುವುದರ ಮೂಲಕ ಮೇಯರ್, ಉಪಮೇಯರ್ ನಾಡದ್ರೋಹಿ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆಯನ್ನು ತಕ್ಷಣವೇ ಸೂಪರ್ ಸೀಡ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಲ್ಲರ ವಿರುದ್ಧವೂ ಕಾನೂನು ಕ್ರಮ ಜರುಗಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅನರ್ಹತೆಗೆ ಶಿಫಾರಸು:

ಕರಾಳ ದಿನಾಚರಣೆಯಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮೇಯರ್ ಸರಿತಾ ಪಾಟೀಲ, ಉಪಮೇಯರ್ ಸಂಜಯ ಸಿಂಧೆ ಸೇರಿದಂತೆ ಎಂಇಎಸ್‍ನ ಕೆಲ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಅಲ್ಲದೆ ಮುಂದಿನ ಚುನಾವಣೆಗೂ ಇವರು ಸ್ಪರ್ಧಿಸದಂತೆ ತಡೆ ಹಿಡಿಯಲು ಕಾನೂನಿಗೆ ತಿದ್ದುಪಡಿ ಮಾಡುವಂತೆ ವರದಿಯಲ್ಲಿ ಮನವಿ ಮಾಡಲಾಗಿದೆ.
ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿರುವ ಎಂಇಎಸ್‍ನ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಇದರಿಂದ ಕೆಲವರು ಮಾಡುವ ಪುಂಡಾಟಿಕೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಪದೇ ಪದೇ ಗಡಿ ವಿವಾದವನ್ನು ಮುಂದಿಟ್ಟುಕೊಂಡು ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿರುವ ಎಂಇಎಸ್ ವಿರುದ್ದ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರಕ್ಕೆ ಸವಾಲು:

ಇದೀಗ ಜಿಲ್ಲಾಧಿಕಾರಿಯೇ ಮಹಾನಗರ ಪಾಲಿಕೆಯನ್ನು ಸೂಪರ್‍ಸೀಡ್ ಮಾಡುವಂತೆ ಶಿಫಾರಸ್ಸು ಮಾಡಿರುವುದರಿಂದ ಸರ್ಕಾರಕ್ಕೆ ಇದು ಸವಾಲಾಗಿ ಪರಿಣಮಿಸಿದೆ. ಇದೇ 21ರಿಂದ ಎರಡು ವಾರಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಹುದೆಂಬ ಅಳುಕು ಕೂಡ ಇದೆ.
ಇನ್ನು ಯಾವುದೇ ಕ್ರಮ ಕೈಗೊಳ್ಳದೆ ಮೌನವಹಿಸಿದರೆ ನಾವು ಏನೇ ಮಾಡಿದರೂ ಕರ್ನಾಟಕ ಸರ್ಕಾರ ನಮ್ಮನ್ನು ಏನು ಮಾಡುವುದಿಲ್ಲ ಎಂಬ ಅಹಂ ಕೂಡ ಎಂಇಎಸ್‍ನಲ್ಲಿ ಬೆಳೆಯುತ್ತದೆ. ಈ ಎಲ್ಲ ಸಾಧಕ-ಬಾಧಕಗಳನ್ನು ಅವಲೋಕಿಸಿ ಸೂಕ್ತ ಕ್ರಮ ಜರುಗಿಸಲು ಚಿಂತನೆ ನಡೆಸಿದೆ.

ಇನ್ನು ಕರಾಳ ದಿನಾಚರಣೆಯಂದು ಕುದುರೆ ಮೇಲೆ ಕುಳಿತು ಬಂದೂಕು ಪ್ರದರ್ಶಿಸುವ ಮೂಲಕ ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಚವಾಟ ಗಲ್ಲಿಯ ರತ್ನಪ್ರಸಾದ್ ಪವಾರ್ ಸೇರಿದಂತೆ ಮತ್ತಿತರರ ವಿರುದ್ದ ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಆರೋಪ ಸಾಬೀತಾದರೆ ತಕ್ಷಣ ಅವರನ್ನು ಬಂಧಿಸಿ ಕ್ರಮ ಜರುಗಿಸಬೇಕೆಂದು ನಗರ ಪೊಲೀಸ್ ಆಯುಕ್ತರು ಸೂಚನೆ ಕೊಟ್ಟಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin