ಕರುಣಾಕರ ರೆಡ್ಡಿ ಹಣಿಯಲು ತೆರೆಮರೆಯಲ್ಲಿ ಶ್ರೀರಾಮುಲು ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

Sriramulu-vs-Karunakara-red

ಬೆಂಗಳೂರು,ಮಾ.6- ಎರಡು ದೇಹ ಒಂದೇ ಆತ್ಮದಂತಿದ್ದ ಬಳ್ಳಾರಿ ರೆಡ್ಡಿ ಸಹೋದರರ  ಕಾಳಗ ಬೀದಿಗೆ ಬರುತ್ತಿದ್ದಂತೆ ಮಾಜಿ ಸಚಿವ ಕರುಣಾಕರ ರೆಡ್ಡಿಗೆ ಟಿಕೆಟ್ ತಪ್ಪಿಸಲು ತೆರೆಮರೆಯಲ್ಲಿ ಕಸರತ್ತು ನಡೆದಿದೆ.   2018ರ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆ ಹರಪ್ಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕರುಣಾಕರ ರೆಡ್ಡಿಗೆ ಟಿಕೆಟ್ ನೀಡಬಾರದೆಂದು ಮಾಜಿ ಸಚಿವ ಶ್ರೀರಾಮುಲು, ಜನಾರ್ಧನ ರೆಡ್ಡಿ ಹಾಗೂ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಒತ್ತಡ ಹಾಕಿದ್ದಾರೆ.   ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಪಕ್ಷದಿಂದ ಅಮಾನತುಗೊಂಡಿದ್ದರೂ ಜನಾರ್ಧನ ರೆಡ್ಡಿ ಬಿಜೆಪಿ ನಾಯಕರ ಜೊತೆ ಈಗಲೂ ಆತ್ಮೀಯವಾದ ಸಂಬಂಧವಿಟ್ಟುಕೊಂಡಿದ್ದಾರೆ.

ಯಡಿಯೂರಪ್ಪ , ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಅನಂತಕುಮಾರ್ ಜೊತೆ ಈಗಲೂ ಅವರಿಗೆ ಸುಮಧುರ ಬಾಂಧವ್ಯವಿದೆ. ಇದನ್ನೇ ಬಳಸಿಕೊಂಡಿರುವ ಜನಾರ್ಧನ ರೆಡ್ಡಿ ತನ್ನ ಸಹೋದರ ಕರುಣಾಕರ ರೆಡ್ಡಿಗೆ ಟಿಕೆಟ್ ತಪ್ಪಿಸಲು ತೆರೆಮರೆಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.   ಇನ್ನು ಸಂಸದರಾಗಿರುವ ಶ್ರೀರಾಮಲು ಹಾಗೂ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಈಗಾಗಲೇ ಯಡಿಯೂರಪ್ಪನವರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ಕರುಣಾಕರ ರೆಡ್ಡಿಗೆ ಟಿಕೆಟ್ ನೀಡಬಾರದು. ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಿಸುವ ಹೊಣೆಗಾರಿಕೆಯನ್ನು ನಮಗೇ ನೀಡಿ ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ರೆಡ್ಡಿ ಸಹೋದರರ ಎಡಗೈ, ಬಲಗೈನಂತಿದ್ದ ರಾಮುಲು ವಿರುದ್ಧ ಕರುಣಾಕರ ರೆಡ್ಡಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದರಿಂದ ಕುಪಿತಗೊಂಡಿರುವ ರಾಮುಲು ಹಾಗೂ ಸೋಮಶೇಖರ ರೆಡ್ಡಿ ರಾಜಕೀಯವಾಗಿ ಕರುಣಾಕರ ರೆಡ್ಡಿಯನ್ನು ಬದಿಗೊತ್ತಲು ಹವಣಿಸುತ್ತಿದ್ದಾರೆ. ಕರುಣಾಕರ ರೆಡ್ಡಿಗೆ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ವರ್ಚಿಸಿಲ್ಲ.   2013ರ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಕ್ಷೇತ್ರದಲ್ಲಿ ಮತದಾರರ ಸಂಪರ್ಕ ಕಳೆದುಕೊಂಡಿದ್ದಾರೆ. ಅವರ ಬದಲು ಬೇರೊಬ್ಬರಿಗೆ ಟಿಕೆಟ್ ನೀಡಿದರೆ ಗೆಲ್ಲಿಸುವ ಜವಾಬ್ದಾರಿ ನಮ್ಮದೆಂದು ಬಿಎಸ್‍ವೈ ಮುಂದೆ ಹೇಳಿದ್ದಾರೆ. ಆದರೆ ಈ ಬಗ್ಗೆ ಯಡಿಯೂರಪ್ಪ ಯಾವುದೇ ಆಶ್ವಾಸನೆ ಕೊಟ್ಟಿಲ್ಲವಾದರೂ ಕರುಣಾಕರ ರೆಡ್ಡಿಗೆ ಟಿಕೆಟ್ ನೀಡುವ ಬಗ್ಗೆ ಸಕರಾತ್ಮಕವಾಗಿದ್ದಾರೆ ಎಂದು ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin