ಕರ್ತವ್ಯಕ್ಕೆ ಹಾಜರಾದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ
ಬೆಂಗಳೂರು,ಏ.23- ದುಷ್ಕರ್ಮಿಯಿಂದ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಕೊನೆಗೂ ಜೀವ ಉಳಿಸಿಕೊಂಡಿದ್ದ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರು ಇಂದು ಕಚೇರಿಗೆ ಆಗಮಿಸಿದರು. ಮಾ.7ರಂದು ಕಚೇರಿಗೆ ಬಂದಿದ್ದ ದೂರುದಾರ ತೇಜರಾಜ ಶರ್ಮ ಎಂಬಾತ ಏಕಾಏಕಿ ವಿಶ್ವನಾಥ್ ಶೆಟ್ಟಿ ಅವರ ಮೇಲೆ ದಾಳಿ ನಡೆಸಿ ಎದೆ, ಸೊಂಟ ಹಾಗೂ ಕೈಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದ.
ತೀವ್ರವಾಗಿ ಗಾಯಗೊಂಡಿದ್ದ ವಿಶ್ವನಾಥ್ ಶೆಟ್ಟಿ ಅವರನ್ನು ಲೋಕಾಯುಕ್ತ ಸಿಬ್ಬಂದಿಗಳೇ ಮಲ್ಯ ಆಸ್ಪತ್ರೆಗೆ ದಾಖಿಲಿಸಿದ್ದರು. ಆದರೆ ಅವರ ಪರಿಸ್ಥಿತಿ ಚಿಂತಾಜನಕವಾಗಿತ್ತು. ವೈದ್ಯರ ಸತತ ಪ್ರಯತ್ನದಿಂದ ಚಿಕಿತ್ಸೆ ಫಲಕಾರಿಯಾಗಿದ್ದು , ಮಾ.14 ಅವರು ಆಸ್ಪತ್ರೆಯಿಂದ ಬಿಡುಗೊಡೆಗೊಂಡಿದ್ದರು. ನಂತರ ವಿಶ್ರಾಂತಿಯಲ್ಲಿದ್ದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರು ಇಂದು ಕರ್ತವ್ಯಕ್ಕೆ ಆಗಮಿಸಿದ್ದು, ಸಿಬ್ಬಂದಿಗಳು ಸಂತೋಷದಿಂದ ಅವರನ್ನು ಸ್ವಾಗತಿಸಿದರು.
ಅವರ ಕಚೇರಿಗೆ ತೆರಳಿದ ನಂತರ ಸಿಬ್ಬಂದಿಗಳು ಒಬ್ಬರ ನಂತರ ಒಬ್ಬರು ಬಂದು ವಿಶ್ವನಾಥ್ ಶೆಟ್ಟಿ ಅವರು ಆರೋಗ್ಯದ ಬಗ್ಗೆ ವಿಚಾರಿಸಿದ ಗುಣಮುಖರಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಲೋಕಾಯುಕ್ತ ಕಚೇರಿಯಲ್ಲಿ ಈಗ ಲೋಹ ಪರೀಕ್ಷಾ ಸಾಧನಗಳು ಹಾಗೂ ಹೆಚ್ಚಿನ ಭದ್ರತೆಯನ್ನು ನೀಡಲಾಗಿದ್ದು, ಅದನ್ನು ಕೂಡ ಇಂದು ಪರಿಶೀಲಿಸಲಾಯಿತು.