ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಪಿಎಸ್‍ಐ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಫೆ.13-ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಪಾವಗಡ ಪೊಲೀಸ್ ಠಾಣೆಯ ಪಿಎಸ್‍ಐ ರಾಘವೇಂದ್ರ ಅವರನ್ನು ಅಮಾನತುಗೊಳಿಸಿ ಎಸ್‍ಪಿ ಕೋನವಂಶಿಕೃಷ್ಣ ಅವರು ಆದೇಶಿಸಿದ್ದಾರೆ. ಠಾಣೆಗೆ ಬರುವವರಿಂದ ದೂರು ಪಡೆದು ಸ್ವೀಕೃತಿಯನ್ನು ನೀಡಿ, ದೂರಿಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣವನ್ನು ದಾಖಲಿಸದೆ ಮೇಲಾಧಿಕಾರಿಗಳ ಗಮನಕ್ಕೂ ತರದೆ ಪಿಎಸ್‍ಐ ರಾಘವೇಂದ್ರ ಅವರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಈ ಸಂಬಂಧ ಎಸ್‍ಪಿ ಕೋನವಂಶಿಕೃಷ್ಣ ಅವರು ಪರಿಶೀಲನೆ ನಡೆಸಿದಾಗ ಕರ್ತವ್ಯದಲ್ಲಿ ನಿರ್ಲಕ್ಷ್ಯ ಹಾಗೂ ಬೇಜಾಬ್ದಾರಿತನದಿಂದ ನಡೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಪಿಎಸ್‍ಐ ರಾಘವೇಂದ್ರ ಅವರ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.  ಅಮಾನತಿನ ಅವಧಿಯಲ್ಲಿ ಜೀವನಾಧಾರ ಭತ್ಯೆಯನ್ನು ಪಡೆಯಬಹುದು. ಆದರೆ ಈ ಅವಧಿಯಲ್ಲಿ ಯಾವುದೇ ಖಾಸಗಿ ಕೆಲಸದಲ್ಲಿ ತೊಡಗಬಾರದು.

ಖಾಸಗಿ ಕೆಲಸದಲ್ಲಿ ತೊಡಗಿಲ್ಲ ಎಂಬ ಬಗ್ಗೆ ಪ್ರಮಾಣ ಪತ್ರವನ್ನು ನೀಡತಕ್ಕದ್ದು. ಅಮಾನತಿನ ಅವಧಿಯಲ್ಲಿ ಕೇಂದ್ರ ಸ್ಥಾನವನ್ನು ಬಿಟ್ಟು ಹೋಗಬಾರದು. ಒಂದು ವೇಳೆ ಬಿಟ್ಟು ಹೋಗಬೇಕಾದರೆ ಪಾವಗಡ ವೃತ್ತ ನಿರೀಕ್ಷಕರಿಗೆ ತಮ್ಮ ವಿಳಾಸವನ್ನು ನೀಡಿ ಅನುಮತಿ ಪಡೆದು ಹೋಗತಕ್ಕದ್ದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ:
ಸೆ.31ರಂದು ಶಂಕರ್‍ನಾಯಕ್ ಎಂಬುವರು ಪಾವಗಡದ ಎಸ್‍ಬಿಐ ಬ್ಯಾಂಕ್‍ನ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋಗಿದ್ದಾಗ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಇವರ ಗಮನಸೆಳೆದು ಎಟಿಎಂ ಕಾರ್ಡ್ ಕಳವು ಮಾಡಿ ಒಂದು ಲಕ್ಷ ಹಣ ಡ್ರಾ ಮಾಡಿಕೊಂಡಿರುವ ಬಗ್ಗೆ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳದೆ ಪಿಎಸ್‍ಐ ರಾಘವೇಂದ್ರ ಅವರು ನಿರ್ಲಕ್ಷ್ಯ ತೋರಿದ್ದರು.

ಅಲ್ಲದೆ ಅ.23ರಂದು ರಾಜವಂತಿ ಗ್ರಾಮದ ಸಣ್ಣ ಅಡಿಯಪ್ಪ ಎಂಬುವರು ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡಲು ಹೋದಾಗ ವ್ಯಕ್ತಿಯೊಬ್ಬ ಡ್ರಾ ಮಾಡಿಕೊಡುತ್ತೇನೆ ಎಂದು ಹೇಳಿ ಇವರ ಪಿನ್ ನಂಬರ್ ಪಡೆದು ಹಣ ಡ್ರಾ ಮಾಡಿಕೊಟ್ಟು, ಎಟಿಎಂ ಕಾರ್ಡ್‍ನ್ನು ವಾಪಸ್ ಕೊಡುವಾಗ ಬೇರೆ ಕಾರ್ಡ್ ಕೊಟ್ಟು ಅಲ್ಲಿಂದ ಪರಾರಿಯಾಗಿ 25 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾನೆ.

ಇದರ ಬಗ್ಗೆ ದೂರು ನೀಡಲು ಹೋದಾಗ ಪ್ರಕರಣ ದಾಖಲಿಸಕೊಳ್ಳದೇ ನಿರ್ಲಕ್ಷ್ಯ ತೋರಿದ್ದ ಬಗ್ಗೆ ಎಸ್‍ಪಿ ಅವರ ಗಮನಕ್ಕೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್‍ಪಿ ಅವರು ಇವರನ್ನು ಅಮಾನತುಗೊಳಿಸಿದ್ದಾರೆ.

Facebook Comments