ಕರ್ನಾಟಕಕ್ಕಿಂತ ತಮಿಳುನಾಡಿನ ಡ್ಯಾಮ್ ನಲ್ಲೆ ಹೆಚ್ಚು ನೀರು ಸಂಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

siddu

ಬೆಂಗಳೂರು, ಸೆ.18- ಕಾವೇರಿ ನದಿ ಜಲಾನಯನ ಭಾಗದ ಕರ್ನಾಟಕದ ಕೆಆರ್‌ಎಸ್ ಸೇರಿದಂತೆ ನಾಲ್ಕೂ ಜಲಾಶಯಗಳಲ್ಲಿ 25 ಟಿಎಂಸಿ ಅಡಿ ನೀರಿದ್ದರೆ, ತಮಿಳುನಾಡಿನಲ್ಲಿ ಮೆಟ್ಟೂರು ಡ್ಯಾಂನಲ್ಲಿ 45 ಟಿಎಂಸಿ ಅಡಿ ನೀರಿದೆ. ನಾಳೆ ನಡೆಯಲಿರುವ ಕಾವೇರಿ ನದಿ ಮೇಲುಸ್ತುವಾರಿ ಸಮಿತಿ ಮುಂದೆ ಈ ವಿಚಾರವನ್ನೇ ಪ್ರಮುಖವಾಗಿ ಪ್ರಸ್ತಾಪಿಸಲು ರಾಜ್ಯಸರ್ಕಾರ ಸಿದ್ಧತೆ ನಡೆಸಿದೆ. ಜೊತೆಗೆ ಉಭಯ ರಾಜ್ಯಗಳ ವಾಸ್ತವ ಪರಿಸ್ಥಿತಿಯ ಅಧ್ಯಯನಕ್ಕೆ ತಂಡ ಕಳುಹಿಸುವಂತೆ ಕರ್ನಾಟಕ ಸಮಿತಿಯನ್ನು ಆಗ್ರಹಿಸಲಿದೆ. ಕಾವೇರಿ ಜಲಾನಯನ ಭಾಗದ ಕರ್ನಾಟಕದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿಲ್ಲ. ಆದರೆ ತಮಿಳುನಾಡಿನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಮತ್ತೆ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂಬ ಅಂಶವನ್ನು ಮನವರಿಕೆ ಮಾಡಿಕೊಡಲು ಉದ್ದೇಶಿಸಿದೆ.
ಉಭಯ ರಾಜ್ಯಗಳಲ್ಲಿ ಬಿದ್ದಿರುವ ಮಳೆ, ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ, ಬೆಳೆ ಪರಿಸ್ಥಿತಿಯ ಆಧಾರದ ಮೇಲೆ ನಿರ್ಣಯ ಕೈಗೊಳ್ಳುವಂತೆ ಸಭೆಯಲ್ಲಿ ಕೋರಲಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.  ತಮಿಳುನಾಡು ಸಂಕಷ್ಟ ಸೂತ್ರವನ್ನು ಒಪ್ಪಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಇದುವರೆಗೆ ಈ ಸೂತ್ರದ ಪ್ರಕಾರ 45 ಟಿಎಂಸಿ ಅಡಿ ನೀರು ಬಿಡಬೇಕಾಗಿತ್ತು. ಅಷ್ಟು ಪ್ರಮಾಣದ ನೀರು ಈಗಾಗಲೇ ರಾಜ್ಯದಿಂದ ತಮಿಳುನಾಡಿಗೆ ಹರಿದು ಹೋಗಿದೆ. ಶೇ.48ರಷ್ಟು ಕಾವೇರಿ ಜಲಾನಯನ ಭಾಗದಲ್ಲಿ ಮಳೆ ಕೊರತೆ ಉಂಟಾಗಿದೆ ಎಂಬ ವಾದವನ್ನು ರಾಜ್ಯ ಸರ್ಕಾರ ಮಂಡಿಸುತ್ತಾ ಬಂದಿದೆ. ಇದನ್ನು ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಕಾವೇರಿ ನ್ಯಾಯಾಕರಣ ತೀರ್ಪಿನ ಪ್ರಕಾರ ಇದುವರೆಗೆ ಬಿಡಬೇಕಾಗಿದ್ದ 94 ಟಿಎಂಸಿ ಅಡಿ ನೀರಿನಲ್ಲಿ ಸಂಕಷ್ಟ ಸೂತ್ರದ ಪ್ರಕಾರ 45 ಟಿಎಂಸಿ ಅಡಿ ನೀರು ಬಿಡಬೇಕು. ಅಷ್ಟೂ ಪ್ರಮಾಣದ ನೀರನ್ನು ಈಗಾಗಲೇ ಹರಿಸಲಾಗಿದೆ.

ನ್ಯಾಯಾಕರಣದ ತೀರ್ಪಿನ ಪ್ರಕಾರ 114 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಕರ್ನಾಟಕ ಬಿಡಬೇಕಾಗಿತ್ತು. ಆದರೆ ಕೇವಲ 30 ಟಿಎಂಸಿ ನೀರನ್ನು ಮಾತ್ರ ಬಿಟ್ಟಿದೆ ಎಂಬ ವಾದವನ್ನು ತಮಿಳುನಾಡು ಮಂಡಿಸುತ್ತಾ ಬಂದಿದೆ. ಅಲ್ಲದೆ ಕಾವೇರಿ ಜಲಾನಯನ ಭಾಗದಲ್ಲಿ ಜಲಾಶಯಗಳಿಗೆ ನೀರು ಹರಿದುಬರುವಂತೆ ಮಳೆಯಾಗುವ ಸಾಧ್ಯತೆಗಳಿಲ್ಲ. ಈಗಿರುವ ನೀರಿನ ಪ್ರಮಾಣ ಕೇವಲ ಕುಡಿಯುವ ನೀರಿಗೆ ಮಾತ್ರ ಬಳಸಿಕೊಳ್ಳಲು ಸಾಧ್ಯ. ಆದರೂ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕಷ್ಟವಾಗುತ್ತದೆ. ಬೆಳೆ ಬೆಳೆಯಲು ನೀರು ಬಿಡಲಾಗದ ಪರಿಸ್ಥಿತಿಯನ್ನು ಕರ್ನಾಟಕ ಈಗಾಗಲೇ ಅನುಭವಿಸುತ್ತಿದೆ ಎಂಬ ಮಾಹಿತಿಯನ್ನು ಸಮಿತಿ ಮುಂದೆ ಅಂಕಿ-ಅಂಶಗಳ ಸಹಿತ ಮಂಡಿಸಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin