ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ವರಿಷ್ಠರಿಂದ ಹೊಸ ಪ್ರಯೋಗ

ಈ ಸುದ್ದಿಯನ್ನು ಶೇರ್ ಮಾಡಿ

Modi-and-Amith-Shah

ಬೆಂಗಳೂರು,ಜೂ.9-ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕದಲ್ಲಿ ಶತಾಯಗತಾಯ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಪಣ ತೊಟ್ಟಿರುವ ವರಿಷ್ಠರು ಈ ಬಾರಿ ಹೊಸ ಪ್ರಯೋಗ ಅನುಸರಿಸಲು ಮುಂದಾಗಿದ್ದಾರೆ.   2014ರ ಲೋಕಸಭೆ ಚುನಾವಣೆಯಿಂದ ಇತ್ತೀಚೆಗೆ ಜರುಗಿದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೊಸ ತಂತ್ರವನ್ನು ಅನುಸರಿಸಿ ಯಶಸ್ವಿಯಾಗಿದ್ದರು. ಇದೀಗ 2018ರ ವಿಧಾನಸಭೆ ಚುನಾವಣೆಯಲ್ಲೂ ಇದೇ ಮಾದರಿಯನ್ನು ಮಾನದಂಡವಾಗಿಟ್ಟುಕೊಂಡು ಚುನಾವಣೆ ಎದುರಿಸಲು ಕಾರ್ಯತಂತ್ರ ರೂಪಿಸಿದ್ದಾರೆ.ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅನೇಕ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿರಲಿಲ್ಲ. ಕಾರಣ ಅವರ ಮೇಲೆ ಕೇಳಿಬಂದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಸೇರಿದಂತೆ ಕೆಲವು ಗಂಭೀರ ಆರೋಪಗಳು.   ಒಂದು ವೇಳೆ ಹಾಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ ಪಕ್ಷ ಚುನಾವಣೆಯಲ್ಲಿ ಸೋಲುವುದು ಖಚಿತ ಎಂದು ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಹೀಗಾಗಿ ಎಚ್ಚರ ವಹಿಸಿದ ಅಮಿತ್ ಷಾ ಹಾಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೆ ಹೊಸ ಮುಖಗಳನ್ನು ಅಖಾಡಕ್ಕಿಳಿಸಿ ಆಮ್ ಆದ್ಮಿ ಅಬ್ಬರದ ನಡುವೆಯೂ ಸತತ ಮೂರನೇ ಬಾರಿಗೆ ದೆಹಲಿಯ ಪಾಲಿಕೆಯ ಚುಕ್ಕಾಣಿ ಹಿಡಿದರು. ಈಗ ಕರ್ನಾಟಕದಲ್ಲೂ ಅಂಥದ್ದೇ ವಿನೂತನ ಪ್ರಯೋಗವನ್ನು ಮಾಡುವ ಮೂಲಕ ಕಮಲವನ್ನು ಅರಳಿಸಲು ರಾಜಕೀಯ ಚಾಣುಕ್ಯನೆಂದೇ ಕರೆಸಿಕೊಳ್ಳುತ್ತಿರುವ ಅಮಿತ್ ಷಾ ಕಾರ್ಯೋನ್ಮುಖರಾಗಿದ್ದಾರೆ.

ಅನೇಕರಿಗೆ ಕೋಕ್:

ಅಂದಹಾಗೆ ರಾಜ್ಯದಲ್ಲಿ 2013ರಿಂದ 2018ರವರೆಗೆ ಅಧಿಕಾರ ನಡೆಸಿದ ಬಿಜೆಪಿಯ ಅನೇಕ ಸಚಿವರು ಮತ್ತು ಶಾಸಕರ ವಿರುದ್ದ ಕೆಲವು ಗಂಭೀರ ಸ್ವರೂಪದ ಆರೋಪಗಳು ಕೇಳಿಬಂದಿದ್ದವು.  ಗಣಿ ಹಗರಣ, ಅಕ್ರಮ ಡಿನೋಟಿಫಿಕೇಷನ್, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ, ಸ್ವಜನ ಪಕ್ಷಪಾತ ಸೇರಿದಂತೆ ಅನೇಕ ಆರೋಪಗಳಿಗೆ ತುತ್ತಾಗಿದ್ದರು. ಕೆಲವರು ಜೈಲು ಪಾಲಾದರೆ ಇನ್ನು ಕೆಲವರು ಈಗಲೂ ಕಾನೂನಿನ ಕುಣಿಕೆಗೆ ಸಿಲುಕಿದ್ದಾರೆ.

ಯಾರ್ಯಾರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆಯೋ ಅಂಥವರಿಗೆ ಟಿಕೆಟ್ ನೀಡದೆ ಹೊಸ ಮುಖಗಳನ್ನೇ ಕಣಕ್ಕಿಳಿಸಲು ವರಿಷ್ಠರು ಚಿಂತನೆ ನಡೆಸಿದ್ದಾರೆ. ಇದರಲ್ಲಿ ಹಾಲಿ ಕೆಲವು ಶಾಸಕರಿಗೂ ಟಿಕೆಟ್ ನೀಡುವ ಖಾತರಿ ಇಲ್ಲ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ವಿರುದ್ದ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಸರ್ಕಾರ ಮೂರು ವರ್ಷ ಪೂರ್ಣಗೊಂಡಿದ್ದರೂ ಈವರೆಗೂ ನಮ್ಮ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿಲ್ಲ.

ಹಿಂದಿನ ಯುಪಿಎ ಸರ್ಕಾರದ ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸಿದ್ದೆವು. ಇದೆಲ್ಲದರ ಪರಿಣಾಮ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿ ಜನತೆ ಬಹು ವರ್ಷಗಳ ನಂತರ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಯಾವ ಕಾರಣಕ್ಕೂ ಭ್ರಷ್ಟಾಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಖಡಕ್ ಸಂದೇಶವನ್ನು ರವಾನಿಸಲಾಗಿದೆ.   ನ್ಯಾಯಾಲಯದಿಂದ ಕ್ಲೀನ್‍ಚಿಟ್ ಪಡೆದವರಿಗೆ ಮಾತ್ರ ಟಿಕೆಟ್ ನೀಡಲಾಗುವುದು. ಉಳಿದಂತೆ ಭ್ರಷ್ಟಾಚಾರ ಆರೋಪಕ್ಕೆ ಸಿಲುಕಿದ್ದವರು ಟಿಕೆಟ್‍ಗಾಗಿ ಲಾಬಿ ಮಾಡಬಾರದೆಂದು ಖಡಕ್ ಸೂಚನೆ ಕೊಡಲಾಗಿದೆ. ಇದರಂತೆ ಅನೇಕ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳು ಹೆಚ್ಚಳವಾಗಿವೆ.

ಹೊಸ ಮುಖಗಳಿಗೆ ಶೋಧ:

ಹೈಕಮಾಂಡ್‍ನಿಂದ ಈ ಆದೇಶ ಬರುತ್ತಿದ್ದಂತೆ ರಾಜ್ಯದ 100ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ನಾಯಕರು ಜನರಿಗೆ ಸ್ಪಂದಿಸುವ, ಒಂದಿಷ್ಟು ಕೈ-ಬಾಯಿ ಶುದ್ಧವಾಗಿಟ್ಟು ಕೊಂಡಿರುವ ತೀರಾ ಹೆಸರು ಕೆಡಿಸಿಕೊಳ್ಳದ ಅಭ್ಯರ್ಥಿಗಳನ್ನು ಹುಡುಕುತ್ತಿದ್ದಾರೆ.   ಈಗಾಗಲೇ ದೆಹಲಿಯಿಂದ ಆಗಮಿಸಿರುವ ಒಂದು ತಂಡ ಸದ್ದಿಲ್ಲದೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮತದಾರರಿಂದ ಅಭಿಪ್ರಾಯವನ್ನು ಸಂಗ್ರಹಿಸುವ ಕಾರ್ಯದಲ್ಲಿ ಮಗ್ನವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin