ಕರ್ನಾಟಕದಲ್ಲಿ ಕರೆಂಟ್ ಕಟ್ ಭಯವಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Electricity-01

ಬೆಂಗಳೂರು, ಮಾ.1-ರಾಜ್ಯದ ವಿದ್ಯುತ್ ಸ್ಥಾವರಗಳಿಗೆ ಇದೀಗ ಹೊಸತಾಗಿ 1300 ಮೆಗಾವ್ಯಾಟ್ ವಿದ್ಯುತ್ ಸೇರ್ಪಡೆಯಾಗಲಿದ್ದು ಈ ಹಿನ್ನೆಲೆಯಲ್ಲಿ ಬಿರು ಬೇಸಿಗೆಯ ನಡುವೆಯೂ ದೊಡ್ಡ ಮಟ್ಟದಲ್ಲಿ ಕರ್ನಾಟಕದಲ್ಲಿ ಕರೆಂಟ್ ಕಟ್ ಅಗುವ ಸಾಧ್ಯತೆಗಳಿಲ್ಲ.  ಬರುವ ಮಾರ್ಚ್ ಅಂತ್ಯದ ವೇಳೆಗೆ ಹೊಸದಾಗಿ ರಾಜ್ಯದ ವಿದ್ಯುತ್ ಜಾಲಕ್ಕೆ 1300 ಮೆಗಾವ್ಯಾಟ್ ವಿದ್ಯುತ್ ಸೇರ್ಪಡೆಗೊಳ್ಳುತ್ತಿರುವುದರಿಂದ ಜನರು ಲೋಡ್‍ಶೆಡ್ಡಿಂಗ್‍ಗೆ ಹೆದರುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ.  ಸೋಲಾರ್‍ನಿಂದ 550, ಹಾಗೂ ಎರಮರಸ್ ಉಷ್ಣವಿದ್ಯುತ್ ಸ್ಥಾವರದಿಂದ 800 ಮೆಗಾವ್ಯಾಟ್ ವಿದ್ಯುತ್ ಜಾಲಕ್ಕೆ ಹೊಸದಾಗಿ ಸೇರ್ಪಡೆಗೊಳ್ಳುತ್ತಿದೆ.

ಇದರ ಜೊತೆಗೆ ಲಿಂಗನಮಕ್ಕಿ ಆಣೆಕಟ್ಟಿನ ನೀರನ್ನು ಏಪ್ರಿಲ್ ಅಂತ್ಯದವೇಳೆಗೆ ಖಾಲಿ ಮಾಡಬೇಕೆಂಬ ಜಲಸಂಪನ್ಮೂಲ ಇಲಾಖೆ ಆದೇಶದ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆಗೆಂದು ಶೇಖರಿಸಿಟ್ಟ ನೀರನ್ನು ಪ್ರತಿ ನಿತ್ಯ 600 ರಿಂದ 700 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಪ್ರಸ್ತುತ 10200 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, ಪೂರ್ಣ ಬೇಡಿಕೆಯನ್ನು ಕಳೆದ ವಾರ ಇಲಾಖೆ ಗ್ರಾಹಕರಿಗೆ ಪೂರೈಸಿದೆ.  ಇದರ ಜೊತೆಗೆ ಹೆಚ್ಚುವರಿಯಾಗಿ ಹೊಸ ಉತ್ಪಾದನೆ ಸೇರ್ಪಡೆಗೊಳ್ಳುವುದರಿಂದ ಬೇಸಿಗೆ ಸಂದರ್ಭದಲ್ಲಿ ಗ್ರಾಹಕರಿಂದ ಹೆಚ್ಚು ಬೇಡಿಕೆ ಬಂದರೂ, ಅದನ್ನು ವಿತರಿಸಲು ಸಿದ್ದವಿದೆ.

ಎಲ್ಲಿ ಸಮರ್ಪಕ ವಿದ್ಯುತ್ ಮಾರ್ಗಗಳಿಲ್ಲವೂ ಅಂತಹ ಪ್ರದೇಶಗಳನ್ನು ಹೊರತುಪಡಿಸಿ, ಉಳಿದೆಲ್ಲಡೆ, ನಿರಂತರ ವಿದ್ಯುತ್ ಲಭ್ಯವಾಗಲಿದೆ. ಇದು ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಮೊದಲು.  ನಮ್ಮಲ್ಲೇ ಉತ್ಪಾದನೆ ಹೆಚ್ಚಿದ್ದರೂ ಕೂಡಾ, ಜಿಂದಾಲ್, ಯುಪಿಎಸ್‍ಎಲ್ ಸೇರಿದಂತೆ ರಾಷ್ಟ್ರದ ವಿವಿಧ ಕಂಪನಿಗಳಿಂದ 3000 ಕ್ಕೂ ಹೆಚ್ಚು ಮೆಗಾವ್ಯಾಟ್ ವಿದ್ಯುತ್ ಖರೀದಿ ಮಾಡಲಾಗುತ್ತದೆ.  ಬೇಸಿಗೆಯಲ್ಲಿನ ವಿದ್ಯುತ್ ಕ್ಷಾಮ ನೀಗಿಸಲು ರಾಜ್ಯ ಸರ್ಕಾರ ಮುಂದಾಲೋಚನೆಯಿಂದ ಈ ಕಂಪನಿಗಳಿಗೆ ಖರೀದಿ ಒಪ್ಪಂದ ಮಾಡಿಕೊಂಡಿರುವುದರಿಂದ ಬೇಡವಾದರೂ, ಅನಿವಾರ್ಯವಾಗಿ ವಿದ್ಯುತ್ ಖರೀದಿ ಮಾಡಬೇಕಾಗಿದೆ.

ಮಳೆ ಇಲ್ಲದೆ ಜಲಾಶಯಗಳಲ್ಲಿ ಮತ್ತು ಖಾಸಗಿ ಬೋರ್‍ವೆಲ್‍ಗಳಲ್ಲಿ ನೀರಿಲ್ಲದಿರುವುದರಿಂದ ರೈತರು ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಬೇಡಿಕೆ ಗಣನೀಯವಾಗಿ ಕುಸಿಯಲಿದೆ.
ಇದರಿಂದ ನಿಗಮಕ್ಕೆ ಭಾರೀ ಪ್ರಮಾಣದಲ್ಲಿ ವಿದ್ಯುತ್ ಉಳಿತಾಯವಾಗಲಿದೆ. ಇರುವ ವಿದ್ಯುತ್‍ನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕೋ, ಇಲ್ಲವೆ ಕೊರತೆ ಇರುವ ನೆರೆ ರಾಜ್ಯಗಳಿಗೆ ಸ್ವಲ್ಪ ಪ್ರಮಾಣದ ವಿದ್ಯುತ್‍ನ್ನು ಮಾರುವ ಬಗ್ಗೆಯು ಚಿಂತನೆ ಮಾಡಿದೆ.  ಈಗಾಗಲೇ ತಮಿಳುನಾಡು ಮತ್ತು ಕೇರಳ ಸರ್ಕಾರಗಳು ವಿದ್ಯುತ್‍ಗಾಗಿ ಮನವಿ ಸಲ್ಲಿಸಿವೆ. ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಸೋಲಾರ್ ನಿಂದ 550 ರಲ್ಲ್ಲಿ 360 ಮೆಗಾವ್ಯಾಟ್, ಎರಮರಸ್ ವಿಷ್ಣು ವಿದ್ಯುತ್ ಸ್ಥಾವರ ಪ್ರಾರಂಭಿಕ ಹಂತದಲ್ಲಿ 400 ರಿಂದ 460 ಮೆಗಾವ್ಯಾಟ್ ವಿದ್ಯುತ್ ಪ್ರಸಕ್ತವೇ ಜಾಲಕ್ಕೆ ಸೇರ್ಪಡೆಯಾಗುತ್ತಿದ್ದು, ಮಾರ್ಚ್ ಅಂತ್ಯದವೇಳೆಗೆ ಎರಡೂ ವಿಭಾಗಗಳಲ್ಲೂ, 1300 ಮೆಗಾವ್ಯಾಟ್ ವಿದ್ಯುತ್ ಸೇರ್ಪಡೆಗೊಳ್ಳಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin