ಕರ್ನಾಟಕ ಬಂದ್ಗೆ ಮಹದಾಯಿ ಹೋರಾಟಗಾರರ ಸಂಪೂರ್ಣ ಬೆಂಬಲ
ನರಗುಂದ,ಸೆ.7- ಕಾವೇರಿ ಜಲಾಶಯಗಳಲ್ಲಿನ ನೀರಿನ ಕೊರತೆಯ ನಡುವೆಯೂ ತಮಿಳುನಾಡಿಗೆ ಹರಿಸಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶ ವಿರೋಧಿಸಿ ಇದೇ 9ರಂದು ವಿವಿಧ ಕನ್ನಡ ಪರ ಸಂಘಟನೆಗಳು ರೈತರು ಕರೆ ನೀಡಿರುವ ಕರ್ನಾಟಕ ಬಂದ್ಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಮಹದಾಯಿ ಹೋರಾಟ ಸಮಿತಿಯ ಮುಖಂಡ ರೈತಧುರೀಣ ಶಂಕರಪ್ಪ ಅಂಬಲಿ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು ಉತ್ತರ ಕರ್ನಾಟಕದ ಹು-ಧಾ, ಬೆಳಗಾವಿ, ಬಾಗಲಕೋಟೆ ಹಾಗೂ ಗದಗ ಸೇರಿದಂತೆ 4 ಜಿಲ್ಲೆ ಹಾಗೂ 9 ತಾಲೂಕುಗಳ ರೈತರು ಬಂದ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದರು.
ಈ ನಾಡಿನ ಗಡಿ ನೆಲ-ಜಲ ವಿಷಯ ಬಂದಾಗ ನಾವೆಲ್ಲರೂ ಒಂದೇ ನಮ್ಮಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ಬೇಧ-ಭಾವವಿಲ್ಲ ಕರ್ನಾಟಕದ ಸವಾರ್ಂಗೀಣ ಅಭಿವೃದ್ದಿಗೆ ನಾವೆಲ್ಲರೂ ಬದ್ಧ ಎಂದರು.ನಿನ್ನೆ ಸವದತ್ತಿಯಲ್ಲಿ ಸೇರಿದ್ದ ರೈತ ಮುಖಂಡರ ಸಭೆಯಲ್ಲಿ ಬಂದ್ಗೆ ಬೆಂಬಲ ನೀಡುವ ಬಗ್ಗೆ ಸರ್ವಾನು ಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದರು.ನಿಲ್ಲದ ಹೋರಾಟ: ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಟಾನಕ್ಕೆ ಆಗ್ರಹಿಸಿ ಕಳೆದ ಒಂದು ವರ್ಷದಿಂದ ಹೋರಾಟ ನಡೆಸಿದ್ದೇವೆ. ನ್ಯಾಯ ಸಿಗೋವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಈ ಸಂಬಂಧ ಯಾವುದೇ ತ್ಯಾಗಕ್ಕೂ ಸಿದ್ದ. ಪ್ರಧಾನಿ ಮಧ್ಯಸ್ಥಿಕೆವಹಿಸಿ ಗೋವಾ, ಕಾರ್ನಟಕ ಹಾಗೂ ಮಹಾರಾಷ್ಟ್ರ ಮುಖ್ಯ ಮಂತ್ರಿಗಳ ಸಭೆ ಕರೆದು ಯೋಜನೆ ಅನುಷ್ಟಾನಕ್ಕೆ ಚಾಲನೆ ನೀಡಬೇಕು.
ಸಂಸದರು,ಶಾಸಕರು ಪಕ್ಷ ಬೇಧ-ಭಾವ ಮರೆತು ಈ ಸಂಬಂಧ ಪ್ರಧಾನಿ ಅವರಲ್ಲಿ ಒತ್ತಡ ಹೇರಬೇಕೆಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ಮಹದಾಯಿ ಹೋರಾಟಗಾರರ ಬೆಂಬಲ:
ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಸಂಪೂರ್ಣ ಬೆಂಬಲಇದೇ 9ರಂದು ಶುಕ್ರವಾರ ಕರೆ ನೀಡಿರುವ ಕರ್ನಾಟಕ ಬಂದ್ಗೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸುವುದಾಗಿ ಮಹದಾಯಿ ಹೋರಾಟಗಾರ ಹಾಗೂ ಜೆಡಿಎಸ್ನಾಯಕ ಗುರುರಾಜ ಹುಣಸಿಮರದ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು ಬಂದ್ ಅಂಗವಾಗಿ ಎಲ್ಲ ವ್ಯಾಪಾರ ವಹಿವಾಟು, ವಾಹನ ಸಂಚಾರ, ಬಂದ್ ಆಗಿರುತ್ತವೆ. ಶಾಲಾ-ಕಾಲೇಜುಗಳನ್ನು ಸಹ ಬಂದ್ ಮಾಡಿಸಲಾಗುತ್ತದೆ ಎಂದರು.
ಬಂದ್ಗೆ ಸಹಕರಿಸಲು ವ್ಯಾಪಾರಸ್ಥರು ಖಾಸಗಿ ವಾಹನಗಳ ಮಾಲೀಕರು ಆಟೋ ಚಾಲಕರ ಸಂಘಟನೆಗಳು ಈಗಾಗಲೇ ಸಮ್ಮತಿಸಿವೆ ಎಂದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಸುತ್ತ-ಮುತ್ತಲ ಗ್ರಾಮಗಳ ಸಾವಿರಾರು ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ನ್ಯಾಯ ಸಿಗೋವರೆಗೂ ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಟಾನಕ್ಕೆ ಹೋರಾಟ ಮಾಡಲಾಗುವುದು. ರಾಜ್ಯದ ಗಡಿ,ನೆಲ-ಜಲ ವಿಷಯದಲ್ಲಿ ಅನ್ಯಾಯವಾದರೆ ಸಹಿಸಲು ಸಾಧ್ಯವಿಲ್ಲವೆಂದರು.
► Follow us on – Facebook / Twitter / Google+