ಕರ್ನಾಟಕ ಬಂದ್‍ : ಬೆಂಗಳೂರಿನಾದ್ಯಂತ ಭಾರೀ ಭದ್ರತೆ

ಈ ಸುದ್ದಿಯನ್ನು ಶೇರ್ ಮಾಡಿ

Bengaluru--0001

ಬೆಂಗಳೂರು,ಜೂ.12-ಕರ್ನಾಟಕ ಬಂದ್‍ಗೆ ಕನ್ನಡಪರ ಸಂಘಟನೆಗಳು ಕರೆ ಕೊಟ್ಟ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಾದ್ಯಂತ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಇದರ ಪರಿಣಾಮ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. ಬೆಳಗಿನಿಂದಲೇ ನಗರದಾದ್ಯಂತ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. 40 ಕೆಎಸ್‍ಆರ್‍ಪಿ, 15 ಸಿಎಆರ್, ಕ್ಷಿಪ್ರದಳ ಸೇರಿದಂತೆ ಆಯಾ ವಲಯದ ಡಿಸಿಪಿಯಿಂದ ಹಿಡಿದು ಪೊಲೀಸ್ ಪೇದೆವರೆಗೂ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.

ಖುದ್ದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಭದ್ರತೆಯ ಉಸ್ತುವಾರಿ ವಹಿಸಿದ್ದರು. ಮುಂಜಾನೆಯಿಂದಲೇ ನಗರದ ಅನೇಕ ಕಡೆ ಹಿರಿಯ ಅಧಿಕಾರಿಗಳೊಂದಿಗೆ ತೆರಳಿ ಪರಿಸ್ಥಿತಿಯನ್ನು ಪರಾಮರ್ಶಿಸಿದರು.   ಕೆಂಪೇಗೌಡ ಬಸ್ ನಿಲ್ದಾಣ , ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ, ಶಾಂತಿನಗರ, ಯಶವಂತಪುರ, ಪೀಣ್ಯ ಸೇರಿದಂತೆ ಮತ್ತಿತರ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಯನ್ನು ಒದಗಿಸಲಾಗಿತ್ತು.

ಕೆಲವು ಕಡೆ ಖುದ್ದು ಪೊಲೀಸರೇ ಪ್ರಯಾಣಿಕರಿಗೆ ಬಸ್‍ನಲ್ಲಿ ತೆರಳಲು ಅನುವು ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದರು. ಕೆಲವು ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿ ದುರ್ಲಾಭ ಪಡೆಯಬಹುದೆಂಬ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸರ್ಪಗಾವಲು ಹಾಕಲಾಗಿತ್ತು.
ಬಲವಂತವಾಗಿ ಯಾರೊಬ್ಬರು ಬಂದ್‍ಗೆ ಒತ್ತಡ ಹಾಕದಂತೆ ಸಂಘಟನೆಯ ಮುಖಂಡರಿಗೆ ಸೂಚನೆ ಕೊಡಲಾಗಿತ್ತು. ಕೆಲವು ಕಡೆ ಬಲವಂತವಾಗಿ ಅಂಗಡಿಗಳು, ಹೋಟೆಲ್‍ಗಳು, ಕಿರಣಿ ಅಂಗಡಿಗಳನ್ನು ಮುಚ್ಚಿಸಲು ಯತ್ನಿಸಿದವರನ್ನುಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೆಬ್ಬಾಳದ ಮಾನ್ಯತಾಟೆಕ್ ಪಾರ್ಕ್ ಬಳಿ ಪ್ರತಿಭಟನಾಕಾರರು ದಾಳಿ ನಡೆಸಲು ಯತ್ನಿಸಿದರಾದರೂ ತಕ್ಷಣವೇ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದೇ ರೀತಿ ನಗರದ ಕೆಲವು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಳೆದ ರಾತ್ರಿಯಿಂದಲೇ ಬಿಗಿಭದ್ರತೆ ಕೈಗೊಳ್ಳಲಾಗಿತ್ತು.

ಬೆಂಗಳೂರಿನಿಂದ ತಮಿಳುನಾಡು, ಮಹಾರಾಷ್ಟ್ರ , ಕೇರಳ ಸೇರಿದಂತೆ ಮತ್ತಿತರ ಭಾಗಗಳಿಗೆ ತೆರಳುವ ವಾಹನಗಳಿಗೆ ಭದ್ರತೆಯನ್ನು ನೀಡಲಾಗಿತ್ತು. ಅಲ್ಲದೆ ಹೊರಭಾಗಗಳಿಂದ ನಗರಕ್ಕೆ ಪ್ರವೇಶಿಸುವ ವಾಹನಗಳಿಗೆ ಗಸ್ತು ನೀಡಲಾಗಿತ್ತು.   ಜೊತೆಗೆ ನಗರದ ವಿವಿಧ ಕಡೆ ವಾಹನಗಳನ್ನು ಬಿಗಿ ತಪಾಸಣೆ ನಡೆಸಿಯೇ ಒಳಬಿಡಲಾಗುತ್ತಿತ್ತು. ಪ್ರಮುಖವಾಗಿ ಆನೇಕಲ್, ಹೊಸೂರು, ನೆಲಮಂಗಲ, ದೇವನಹಳ್ಳಿ ಚೆಕ್‍ಪೋಸ್ಟ್ ಬಳಿ ತಪಾಸಣೆ ನಡೆಸಿ ವಾಹನಗಳನ್ನು ಒಳಬಿಡಲಾಗುತ್ತಿತ್ತು.   ಒಟ್ಟಿನಲ್ಲಿ ಬಂದ್ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸಕಾಲದಲ್ಲಿ ಮುನ್ನೆಚ್ಚರಿಕೆ ವಹಿಸಿದ ಪರಿಣಾಮ ಬಂದ್‍ನ ಬಿಸಿ ತಟ್ಟದೆ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin