ಕರ್ನಾಟಕ ಬಂದ್ ಗೆ ಸ್ಯಾಂಡಲ್ವುಡ್ ಸಾಥ್

ಈ ಸುದ್ದಿಯನ್ನು ಶೇರ್ ಮಾಡಿ
ಚಲನಚಿತ್ರ ವಾಣಿಜ್ಯ ಮಂಡಳಿ ಪ್ರತಿಭಟನೆ
ಚಲನಚಿತ್ರ ವಾಣಿಜ್ಯ ಮಂಡಳಿ ಪ್ರತಿಭಟನೆ

ಬೆಂಗಳೂರು, ಸೆ.9- ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಖಂಡಿಸಿ ಇಂದು ನಡೆದ ಕರ್ನಾಟಕ ಬಂದ್‍ಗೆ ಸ್ಯಾಂಡಲ್‍ವುಡ್ ಸಾಥ್ ನೀಡಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಸಮಾವೇಶಗೊಂಡ ಚಲನಚಿತ್ರ ದಿಗ್ಗಜರು, ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ಕೇಂದ್ರ ಹಾಗೂ ರಾಜ್ಯಸರ್ಕಾರದ ಧೋರಣೆಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿ ಜೀವಜಲ ಕಾವೇರಿ ಉಳಿಸಬೇಕೆಂದು ಆಗ್ರಹಿಸಿದರು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ನೇತೃತ್ವದಲ್ಲಿ ಹಿರಿಯ ನಟಿಯರಾದ ಲೀಲಾವತಿ, ಭಾರತಿ ವಿಷ್ಣುವರ್ಧನ್,ಪದ್ಮ ವಾಸಂತಿ, ನಟರಾದ ಶಿವರಾಜ್‍ಕುಮಾರ್, ಉಪೇಂದ್ರ,ದೇವರಾಜ್, ಅಜಯ್‍ರಾವ್, ಅನಿರುದ್ಧ್, ಶರಣ್, ವಿನೋದ್‍ರಾಜ್,ಶೃತಿ, ಲತಾ, ರಚಿತಾರಾಮ್, ತಾರಾ, ಹರಿಪ್ರಿಯ, ಸಂಗೀತ ನಿರ್ದೇಶಕ ಹಂಸಲೇಖ, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಕಿರು ತೆರೆ ಕಲಾವಿದರು ಸೇರಿದಂತೆ ಅನೇಕರು ಪಾಲ್ಗೊಂಡು ಕಾವೇರಿ ಉಳಿಸಿ, ರೈತರನ್ನು ರಕ್ಷಿಸಿ ಎಂದು ಒಕ್ಕೊರಲ ಒಗ್ಗಟ್ಟು ಪ್ರದರ್ಶಿಸಿ ಕಾವೇರಿ ವಿಷಯದಲ್ಲಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಾ.ರಾ.ಗೋವಿಂದು, ನಾವು ರಾಜ್‍ಕುಮಾರ್ ಅವರ ಹಾದಿಯಲ್ಲಿ ಸಾಗಬೇಕು. ಅವರು ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡು ಸಂಚಲನ ಮೂಡಿಸಿದ್ದರು. ನಾವು ಅದೇ ರೀತಿ ಮುಂದುವರೆಯಬೇಕು, ನಾಡು, ನುಡಿ, ನೆಲ, ಜಲದ ವಿಷಯದಲ್ಲಿ ಚಿತ್ರೋದ್ಯಮ ಸಂಪೂರ್ಣ ಬೆಂಬಲ ನೀಡುತ್ತದೆ. 28 ಸಂಸದರು ಕಾವೇರಿ, ಮಹದಾಯಿ ವಿಚಾರವಾಗಿ ಸಂಸತ್‍ನಲ್ಲಿ ಎಚ್ಚರಿಸಿ ಅನ್ಯಾಯದ ಬಗ್ಗೆ ಪಕ್ಷಭೇದ ಮರೆತು ಹೋರಾಟ ಮಾಡಬೇಕು. ಇಲ್ಲಿ ರಾಜಕಾರಣ ಮಾಡಬಾರದು, ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದರು.
ನಟ ಶಿವರಾಜ್‍ಕುಮಾರ್ ಮಾತನಾಡಿ, ಜೀವಜಲಕ್ಕಾಗಿ ನಾವು ಯಾವ ರೀತಿ ಹೋರಾಟಕ್ಕಾದರೂ ಸಿದ್ಧ ಎಂದು ಹೇಳಿದರು.

ನಟ ಉಪೇಂದ್ರ ಮಾತನಾಡಿ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಹಲವು ವರ್ಷಗಳಿಂದ ನಾವು ಇದೇ ಪರಿಸ್ಥಿತಿ ಎದುರಿಸುತ್ತಿದ್ದೇವೆ ಎಂದು ಹೇಳಿದ ಅವರು, ಈ ಸಮಸ್ಯೆ ಶೀಘ್ರ ಇತ್ಯರ್ಥ ಮಾಡಿಕೊಳ್ಳಬೇಕು ಎಂದರು. ನಟ ಶರಣ್ ಮಾತನಾಡಿ, ನಾವು ಎಚ್ಚೆತ್ತುಕೊಂಡು ನಮ್ಮ ಪಾಲಿನ ನೀರನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ನಟ ಅಜಯ್‍ರಾವ್ ಮಾತನಾಡಿ,ಮುಖ್ಯಮಂತ್ರಿಯವರ ಮನೆ ಮುಂದೆ ಧರಣಿ ಮಾಡಬೇಕು, ಅವರನ್ನು ಹೊರಗೆ ಬಿಡಬಾರದು ಎಂದು ಹೇಳಿದರು. ನಟಿ ತಾರಾ ಅನುರಾಧ ಮಾತನಾಡಿ, ನಮ್ಮ ರಾಜ್ಯದ ಪರವಾಗಿ ವಾದ ಮಾಡುತ್ತಿರುವ ನಾರಿಮನ್ ಅವರು ಪದೇ ಪದೇ ವಿಫಲರಾಗುತ್ತಿದ್ದಾರೆ. ಅವರನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.  ನಮ್ಮಲ್ಲಿ ಕಾನೂನು ತಜ್ಞರಿಲ್ಲವೇ? ಮೆಟ್ಟೂರು ಡ್ಯಾಂನಿಂದ ವ್ಯರ್ಥವಾಗಿ ಸಮುದ್ರದ ಪಾಲಾಗುತ್ತದೆ. ಒಂದು ವಾರ ಕಾಲ ನೀರು ಬಿಡುವುದಾಗಿ ಹೇಗೆ ಒಪ್ಪಿಕೊಂಡರು ಎಂದು ಪ್ರಶ್ನಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin