ಕರ್ನಾಟಕ ಶಿಕ್ಷಣ (ತಿದ್ದುಪಡಿ) ವಿಧೇಯಕಕ್ಕೆ ಅನುಮೋದನೆ : ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದರೆ 5 ವರ್ಷ ಜೈಲು, 5 ಲಕ್ಷ ದಂಡ

ಈ ಸುದ್ದಿಯನ್ನು ಶೇರ್ ಮಾಡಿ

Tanveer-Sait--01

ಬೆಂಗಳೂರು,ಫೆ.13- ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ವ್ಯಕ್ತಿಗೆ 5 ವರ್ಷಗಳ ಸೆರೆವಾಸ ಹಾಗೂ 5 ಲಕ್ಷ ರೂ.ವರೆಗಿನ ದಂಡ ವಿಧಿಸಲು ಕರ್ನಾಟಕ ಶಿಕ್ಷಣ (ತಿದ್ದುಪಡಿ) ವಿಧೇಯಕ 2017ಕ್ಕೆ ವಿಧಾನಸಭೆ ಅನುಮೋದನೆ ನೀಡಿತು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಮಂಡಿಸಿದ ವಿಧೇಯಕ ಚರ್ಚೆ ನಂತರ ಸರ್ವಾನುಮತದ ಅನುಮೋದನೆ ಪಡೆಯಿತು.
ವಿಧೇಯಕ ಮಂಡಿಸಿದ ತನ್ವೀರ್ ಸೇಠ್ ಮಾತನಾಡಿ, ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಮುದ್ರಿಸುವುದು,ಫೋಟೋ ಕಾಪಿ ಮಾಡುವುದು, ಛಾಯಾಚಿತ್ರ ತೆಗೆಯುವುದು, ಬ್ರೈಲ್ ನಮೂನೆ ಒಳಗೊಂಡಿದ್ದು, ಯಾವುದೇ ಸಂಪರ್ಕ ಸಾಧನ ಅಥವಾ ಕಂಪ್ಯೂಟರ್ ಜಾಲತಾಣಗಳ ಮೂಲಕ ಯಾವುದೇ ಪಠ್ಯದ ವಿಡಿಯೋ ಮತ್ತು ಆಡಿಯೋ, ಇಮೇಜ್ ಕಳುಹಿಸುವುದನ್ನು ನಿಷೇಧಿಸಲಾಗಿದೆ. ಇದರ ಉಲ್ಲಂಘನೆಯಾದರೆ ಅಪರಾಧವೆಂದು ಪರಿಗಣಿಸಲಾಗುತ್ತದೆ.

ಯಾವುದೇ ಶಾಲೆ ಅಥವಾ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ದುರಾಚರಣೆ ಆಗಿರುವುದು ಕಂಡುಬಂದರೆ ಅಂತಹ ಶಾಲಾಕಾಲೇಜು ಹಾಗೂ ಪರೀಕ್ಷಾ ಕೇಂದ್ರದ ಮಾನ್ಯತೆಯನ್ನು ಮೂರು ವರ್ಷದವರೆಗೆ ಅಮಾನತಿನಲ್ಲಿಡುವುದು ಅಥವಾ ಹಿಂಪಡೆಯುವ ಶಿಫಾರಸು ಪ್ರಸ್ತಾಪಿತ ವಿಧೇಯಕದಲ್ಲಿದೆ ಎಂದರು.   ಪರೀಕ್ಷಾ ಅವಧಿಯಲ್ಲಿ ಪ್ರಶ್ನೆಪತ್ರಿಕೆಗಳ ಸೋರಿಕೆ ತಡೆಯಲು ಮತ್ತು ಮೌಲ್ಯಮಾಪನ ಅವಧಿಯಲ್ಲಿನ ದುರಾಚರಣೆ ತೊಡೆದು ಹಾಕುವ ಉದ್ದೇಶದಿಂದ ಕರ್ನಾಟಕ ಶಿಕ್ಷಣ ಅಧಿನಿಯಮ 1983ರ ಉಪಬಂಧಗಳನ್ನು ಬಲಪಡಿಸಲು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದೆ. ಅದರಂತೆ ಉಪಬಂಧಗಳನ್ನು ಕಲ್ಪಿಸುವುದಕ್ಕಾಗಿ ಅಧಿನಿಯಮಕ್ಕೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.

ದುರಾಚರಣೆಯಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳನ್ನು ಉಚ್ಛಾಟಿಸಲು, ಅಂತಹ ಶಿಕ್ಷಣ ಸಂಸ್ಥೆಗಳ ಮಾನ್ಯತೆಯನ್ನು ಅಮಾನತು ಮಾಡುವುದು, ಹಿಂಪಡೆಯುವ ಅಧಿಕಾರವನ್ನು ಪರೀಕ್ಷಾ ಮಂಡಳಿ ಅಥವಾ ಇಲಾಖೆಗೆ ನೀಡಲಾಗುತ್ತದೆ ಎಂದು ವಿಧೇಯಕದ ಉದ್ದೇಶ ಮತ್ತು ಕಾರಣಗಳನ್ನು ವಿವರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin