ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಗೆ ಬಳಸಿದ್ದು ಒಂದೇ ಮಾದರಿ ಬಂದೂಕು..!

ಈ ಸುದ್ದಿಯನ್ನು ಶೇರ್ ಮಾಡಿ

Gauri-Laneksh-Kalburgi--01

ಬೆಂಗಳೂರು, ಸೆ.13- ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರೀ ಸದ್ದು ಮಾಡಿರುವ ಪತ್ರಕರ್ತೆ ಗೌರಿಲಂಕೇಶ್ ಹತ್ಯಾ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‍ಐಟಿ)ಕ್ಕೆ ಮಹತ್ವದ ಸುಳಿವು ಲಭ್ಯವಾಗಿದೆ. ಈ ಹಿಂದೆ ಧಾರವಾಡದಲ್ಲಿ ಸಾಹಿತಿ ಎಂ.ಎಂ.ಕಲಬುರ್ಗಿ ಕೊಲೆ ಮಾಡಲು ಬಳಸಿದ್ದ ಅದೇ ಮಾದರಿಯ ಬಂದೂಕನ್ನೇ ಗೌರಿ ಹತ್ಯೆಗೂ ಹಂತಕರು ಬಳಸಿರುವುದು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‍ಎಸ್‍ಎಲ್)ದ ವರದಿಯಲ್ಲಿ ಬಹಿರಂಗಗೊಂಡಿದೆ.

ಕಳೆದ ಬುಧವಾರ ಬೆಂಗಳೂರಿನ ರಾಜರಾಜೇಶ್ವರಿನಗರದ ನಿವಾಸದ ಬಳಿ ಗೌರಿ ಲಂಕೇಶ್ ಅವರನ್ನು ರಾತ್ರಿ ಆರೋಪಿಗಳು ಬರ್ಬರವಾಗಿ ಹತ್ಯೆಗೈದಿದ್ದರು. ಈ ಘಟನೆ ನಡೆದ ಬಳಿಕ ಪ್ರಕರಣವನ್ನು ಕೈಗೆತ್ತಿಕೊಂಡ ಎಫ್‍ಎಸ್‍ಎಲ್ ಅಧಿಕಾರಿಗಳು ತನಿಖೆ ನಡೆಸಿದ್ದರು. ಇದೀಗ ಎಫ್‍ಎಸ್‍ಎಲ್ ಅಧಿಕಾರಿಗಳು ತನಿಖಾ ತಂಡಕ್ಕೆ ನೀಡಿರುವ ಗೌಪ್ಯ ವರದಿಯಲ್ಲಿ ಸಾಹಿತಿ ಎಂ.ಎಂ.ಕಲಬುರ್ಗಿಯನ್ನು ಹತ್ಯೆಗೈಯಲು ಬಳಸಿದ್ದ ಬಂದೂಕನ್ನೇ ಗೌರಿ ಕೊಲೆಗೂ ಬಳಸಿದ್ದಾರೆ ಎಂದು ಖಚಿತ ಪಡಿಸಿದ್ದಾರೆ.

ಎಫ್‍ಎಸ್‍ಎಲ್ ಅಧಿಕಾರಿಗಳು ಶೇ.80ರಷ್ಟು ತನಿಖಾ ವರದಿಯನ್ನು ಪೂರ್ಣಗೊಳಿಸಿದ್ದು, ಎಸ್‍ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್‍ಗೆ ಕೆಲವು ಮಾಹಿತಿಗಳನ್ನು ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.

ಅದೇ ಹಂತಕ:

ಮೂಲಗಳ ಪ್ರಕಾರ ಕಲಬುರ್ಗಿ ಅವರನ್ನು ಹತ್ಯೆಗೈದ ಆರೋಪಿಯೇ ಗೌರಿಯನ್ನೂ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕೊಲೆಯಾದ ವಿಚಾರವಾದಿಗಳಾದ ಗೋವಿಂದ್ ಪಾನ್ಸರೆ, ನರೇಂದ್ರ ದಾಭೋಲ್ಕರ್ ಅವರುಗಳನ್ನು ಹತ್ಯೆ ಮಾಡಿದ ತಂಡವೇ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂಬದು ಪೊಲೀಸರ ಬಲವಾದ ನಂಬಿಕೆ. ಮೇಲ್ನೋಟಕ್ಕೆ ಈ ಎಲ್ಲಾ ಪ್ರಕರಣಗಳಿಗೂ ಸಾಮ್ಯತೆ ಕಂಡುಬರುತ್ತಿರುವುದರಿಂದ ತನಿಖಾ ತಂಡ ಈಗಾಗಲೇ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಹಾಗೂ ಧಾರವಾಡಕ್ಕೆ ತೆರಳಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದೆ.

ಮೂರು ಬಾರಿ ಭೇಟಿ ಕೊಟ್ಟಿದ್ದ:

ಇನ್ನೊಂದು ಮೂಲಗಳ ಪ್ರಕಾರ ಗೌರಿಯನ್ನು ಕೊಲೆ ಮಾಡುವ ಮುನ್ನ ಹಂತಕ ಅವರ ನಿವಾಸದ ಬಳಿ ಬೆಳಗ್ಗೆಯಿಂದ ಸಂಜೆ ವರೆಗೂ ಮೂರು ಬಾರಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಮುಖಕ್ಕೆ ಬಟ್ಟೆ ಹಾಗೂ ತಲೆಗೆ ಹೆಲ್ಮೆಟ್ ಧರಿಸಿದ್ದ ವ್ಯಕ್ತಿ ಬೆಳಗ್ಗೆ ಗೌರಿ ಮನೆಯಿಂದ ಕಚೇರಿಗೆ ತೆರಳಿದ್ದು, ಬಳಿಕ ಅವರು ಗಾಂಧೀಬಜಾರ್‍ಗೆ ಬಂದಿದ್ದು, ತದನಂತರ ಮನೆಗೆ ಹೊರಡುವವರೆಗೂ ಅವರ ಎಲ್ಲಾ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದ. ಸರಿಯಾಗಿ ಅಂದುಕೊಂಡಂತೆ ಮನೆ ಬಳಿಯೇ ಗೌರಿಯನ್ನ ಹತ್ಯೆಗೈಯ್ಯಬೇಕೆಂದು ಸಂಚು ರೂಪಿಸಿದ್ದ ಹಂತಕ 7.40ಕ್ಕೆ ಟ್ರಿಗರ್ ಒತ್ತಿಯೇ ಬಿಟ್ಟ.
ರಾಷ್ಟ್ರೀಯ ತನಿಖಾ ದಳದ ನೆರವು:

ದಿನದಿಂದ ದಿನಕ್ಕೆ ಪ್ರಕರಣ ಜಟಿಲವಾಗುತ್ತಿರುವ ಹಿನ್ನೆಲೆಯಲ್ಲಿ ಎಸ್‍ಐಟಿ ತಂಡ ರಾಷ್ಟ್ರೀಯ ತನಿಖಾ ದಳದ(ಎನ್‍ಐಎ) ನೆರವು ಪಡೆಯಲು ಮುಂದಾಗಿದೆ. ಇದೊಂದು ಅಂತರ್‍ರಾಜ್ಯ ಪ್ರಕರಣವಾಗಿರುವುದರಿಂದ ಹಂತಕರ ಸುಳಿವು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.  ಮಹಾರಾಷ್ಟ್ರದಲ್ಲಿ ಇದೇ ರೀತಿ ಸಾವನ್ನಪ್ಪಿದ್ದ ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ್ ಪಾನ್ಸರೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಈ ತನಿಖಾ ತಂಡದ ಜತೆ ಎಸ್‍ಐಟಿ ಅಧಿಕಾರಿಗಳು ಮಾಹಿತಿ ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.

Facebook Comments

Sri Raghav

Admin