ಕಲ್ಕೆರೆ ಕ್ರಾಸ್ ಬಳಿ ಮಹಿಳೆಯ ಕೊಳೆತ ಶವ ಪತ್ತೆ : ಸಾರ್ವಜನಿಕರಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

Women-Body

ತುಮಕೂರು, ಅ.16– ಜಿಲ್ಲೆಯ ಗಡಿ ಭಾಗಗಳಲ್ಲಿ ಪತ್ತೆಯಾಗುತ್ತಿದ್ದ ಅಪರಿಚಿತ ಶವಗಳು ಈಗ ನಗರದ ಕೂಗಳತೆ ಸಮೀಪವೇ ಪತ್ತೆಯಾಗಿದ್ದು, ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದೆ.
ಹೆಬ್ಬೂರು ಠಾಣೆ ವ್ಯಾಪ್ತಿಯ ಕಲ್ಕೆರೆ ಕ್ರಾಸ್ ಬಳಿ ಸುಮಾರು 45 ರಿಂದ 50 ವರ್ಷದ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಗೋಣಿಚೀಲದಲ್ಲಿ ಕಟ್ಟಿ ತಂದು ಎಸೆದು ಹೋಗಿದ್ದಾರೆ.
ಇದುವರೆಗೂ ಜಿಲ್ಲೆಯ ಗಡಿಭಾಗಗಳಾದ ಪಾವಗಡ, ಹೊಸದುರ್ಗ, ಮಾರಿಕಣಿವೆ, ತಿರುಮಣಿ, ಮಧುಗಿರಿ ಹಾಗೂ ತುಮಕೂರು ಗ್ರಾಮಾಂತರ ಪ್ರದೇಶಗಳಲ್ಲಿ ಅಪರಿಚಿತ ಶವಗಳು ಪತ್ತೆಯಾಗುತ್ತಿದ್ದವು.  ಈಗ ತಾಲೂಕಿನ ಸಮೀಪವೇ ಅಪರಿಚಿತ ಮಹಿಳೆ ಶವ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ದುಷ್ಕರ್ಮಿಗಳು ಈ ಮಹಿಳೆಯನ್ನು ಬೇರೆಡೆ ಕೊಲೆ ಮಾಡಿ ಗೋಣಿಚೀಲದಲ್ಲಿ ಕಟ್ಟಿ ಇಲ್ಲಿ ಎಸೆದು ಹೋಗಿದ್ದಾರೆ. ಕೆಟ್ಟ ವಾಸನೆ ಬರುತ್ತಿದ್ದುದನ್ನು ಗಮನಿಸಿದ ದಾರಿಹೋಕರು ಚೀಲದ ಸಮೀಪ ಹೋಗಿ ನೋಡಿದಾಗ ಚೀಲದಲ್ಲಿ ಶವವಿರುವುದು ಬೆಳಕಿಗೆ ಬಂದಿದೆ. ಕೂಡಲೇ ಹೆಬ್ಬೂರು ಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿದ ಎಸ್‍ಐ ಕಿರಣ್‍ಕುಮಾರ್ ಪರಿಶೀಲನೆ ನಡೆಸಿದ್ದು, ಸುಮಾರು 20 ದಿನಗಳ ಹಿಂದೆಯೇ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಕೇವಲ ಅಸ್ತಿ ಪಂಜರ ಮಾತ್ರ ಇದೆ ಎಂದು ತಿಳಿಸಿದ್ದಾರೆ.  ಚೀಲದಲ್ಲಿ ಪತ್ತೆಯಾದ ಅವಶೇಷಗಳನ್ನು ಗಮನಿಸಿದರೆ ಯಾರೋ ಶ್ರೀಮಂತ ಮಹಿಳೆ ಇರಬೇಕು. ಆಸ್ತಿಗಾಗಿಯೇ ಕೊಲೆ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ಕ್ಯಾತಸಂದ್ರ ಠಾಣೆ ಸಿಪಿಐ ನಾಗಲಿಂಗಯ್ಯ ಹಾಗೂ ಎಸ್‍ಐ ಕಿರಣ್‍ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಿದ್ದಾರೆ. ಜಿಲ್ಲೆಯ ಗಡಿ ಭಾಗಗಳಲ್ಲಿ ಕೆಲ ದಿನಗಳ ಹಿಂದೆ ಹೆಚ್ಚು ಅಪರಿಚಿತ ಶವಗಳು ಪತ್ತೆಯಾಗುತ್ತಿದ್ದು, ಈಗ ಮತ್ತೆ ಮರುಕಳಿಸಿವೆ.
ದುಷ್ಕರ್ಮಿಗಳು ಬೇರೆಡೆ ಕೊಲೆ ಮಾಡಿ ಗಡಿಭಾಗದಲ್ಲಿ ಬಿಸಾಡಿ ಹೋಗುತ್ತಾರೆ. ಸಂಬಂಧಿಕರು ಕಾಣೆಯಾದ ಪ್ರಕರಣ ದಾಖಲಿಸಿದರೆ ಮಾತ್ರ ಪೊಲೀಸರು ತನಿಖೆ ನಡೆಸಲು ಸಹಾಯವಾಗುತ್ತದೆ. ಇಲ್ಲವಾದರೆ ಪ್ರಕರಣವೇ ಮುಚ್ಚಿ ಹೋಗುತ್ತವೆ. ಹಾಗಾಗಿ ಗಡಿ ಭಾಗಗಳತ್ತ ಹೆಚ್ಚು ಗಮನ ಹರಿಸಬೇಕಿದೆ.

► Follow us on –  Facebook / Twitter  / Google+

Facebook Comments

Sri Raghav

Admin