ಕಲ್ಬುರ್ಗಿ-ಪನ್ಸಾರೆ-ಗೌರಿ ಲಂಕೇಶ್ ಹತ್ಯೆಗೆ ಬಳಸಿರುವುದು ಒಂದೇ ಮಾದರಿಯ ರಿವಾಲ್ವರ್..!

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh-Shot-Dead

ಬೆಂಗಳೂರು,ಡಿ.15- ಸಾಹಿತಿ ಎಂ.ಎಂ.ಕಲ್ಬುರ್ಗಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಗೋವಿಂದ್ ಪನ್ಸ್ಸಾರೆ ಹತ್ಯೆಗೆ ಬಳಸಿದ್ದ ರಿವಾಲ್ವಾರ್‍ನ್ನೇ ಪತ್ರಕರ್ತೆ ಗೌರಿ ಲಂಕೇಶ್ ಕೊಲೆಯಲ್ಲೂ ಬಳಸಿರುವುದು ವಿಧಿವಿಜ್ಞಾನ ಪ್ರಯೋಗಾಲದಲ್ಲಿ ಸಾಬೀತಾಗಿದೆ. ಕಲ್ಬುರ್ಗಿ ಹಾಗೂ ಪನ್ಸಾರೆ ಕೊಲೆಗೆ ಸ್ವದೇಶಿ ನಿರ್ಮಿತ 7.65 ಎಂಎಂ ರಿವಾಲ್ವರ್ ಮೂಲಕ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಬೆಂಗಳೂರಿನ ರಾಜರಾಜೇಶ್ವರಿನಗರದ ತಮ್ಮ ನಿವಾಸದಲ್ಲಿ ಗೌರಿ ಲಂಕೇಶ್ ಕೂಡ ಇದೇ ರಿವಾಲ್ವರ್ ಬಲಿಯಾಗಿದ್ದರು. ಮೂವರನ್ನು ಒಂದೇ ಮಾದರಿಯಲ್ಲಿ ಹತ್ಯೆಗೈದಿರುವುದರಿಂದ ಹಂತಕರು ಒಂದೇ ಸಂಘಟನೆಗೆ ಸೇರಿರಬಹುದೆಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಕಳೆದ ಸೆಪ್ಟೆಂಬರ್ 5ರಂದು ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಗೌರಿ ಲಂಕೇಶ್ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ನಂತರ ಹತ್ಯೆಯ ಜಾಡನ್ನು ಭೇದಿಸಲು ವಿಶೇಷ ತನಿಖಾ ದಳ(ಎಸ್‍ಐಟಿ) ರಚಿಸಲಾಗಿತ್ತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಸುದ್ದಿಯಾಗಿದ್ದರಿಂದ ಹತ್ಯೆಗೆ ಬಳಸಿದ್ದ ಗುಂಡನ್ನು ಪತ್ತೆ ಮಾಡಲು ಹೈದರಾಬಾದ್ ಹಾಗೂ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಇದೀಗ ವರದಿ ಬಂದಿದ್ದು, ಸಾಹಿತಿ ಎಂ.ಎಂ.ಕಲ್ಬುರ್ಗಿ ಹಾಗೂ ಗೋವಿಂದ್ ಪನ್ಸಾರೆ ಅವರನ್ನು ಹತ್ಯೆ ಮಾಡಿದವರೇ ಗೌರಿ ಅವರನ್ನು ಕೊಲೆ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಈ ಹಿಂದೆ ಎಂ.ಎಂ.ಕಲ್ಬುರ್ಗಿ ಅವರ ಹಣೆಗೆ ಗುಂಡಿಡಲಾಗಿತ್ತು. ಅದೇ ರೀತಿ ಪನ್ಸಾರೆಗೂ ಕೂಡ ಹಣೆಗೆ ಗುಂಡು ಹೊಡೆಯಲಾಗಿತ್ತು. ಗೌರಿ ಲಂಕೇಶ್‍ಗೂ ಕೂಡ ಹಣೆ ಹಾಗೂ ಎದೆಗೆ ಹೊಡೆದು ಬೀಭತ್ಸವಾಗಿ ಹತ್ಯೆ ಮಾಡಲಾಗಿತ್ತು.   ಒಂದೇ ಸಂಘಟನೆಗೆ ಸೇರಿದ ಪರಿಣಿತ ದುಷ್ಕರ್ಮಿಗಳು ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಸುಪಾರಿ ತೆಗೆದುಕೊಳ್ಳುವವರು ಮಾತ್ರ ಒಂದೇ ಮಾದರಿಯಲ್ಲಿ ಹತ್ಯೆಗೈಯಲ್ಲು ಸಾಧ್ಯವಿರುತ್ತದೆ. ಮೇಲ್ನೋಟಕ್ಕೆ ಮೂರು ಪ್ರಕರಣಗಳಲ್ಲಿ ಸಾಮ್ಯತೆ ಇರುವುದರಿಂದ ನಿರ್ದಿಷ್ಟ ಸಂಘಟನೆಯ ಕೈವಾಡವಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಎಸ್‍ಐಟಿ ತನಿಖಾ ತಂಡ ಶಂಕಿತ ಆರೋಪಿಗಳ ರೇಖಾಚಿತ್ರ ಬಿಡುಗಡೆ ಮಾಡಿದೆ. ಹಂತಕರ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿದೆಯಾದರೂ ಗೌರಿ ಕೊಲೆ ಆರೋಪಿ ಯಾರೆಂಬುದು ಇದೂವರೆಗೂ ನಿಗೂಢವಾಗಿ ಉಳಿದಿದೆ.

Facebook Comments

Sri Raghav

Admin